ಸಚಿವ ಜಮೀರ್ ಅಹ್ಮದ್ಗೆ 2 ಕೋಟಿ ರೂ. ಸಾಲ; ರಾಧಿಕಾ ಕುಮಾರಸ್ವಾಮಿ ವಿಚಾರಣೆ
ನಟಿ ಯಶ್ ಮತ್ತು ರಮ್ಯಾ ನಟಿಸಿದ್ದ 'ಲಕ್ಕಿ' ಚಿತ್ರದ ನಿರ್ಮಾಣದಿಂದ ಬಂದ ಲಾಭ ಮತ್ತು ಸ್ಯಾಟಲೈಟ್ ಹಕ್ಕುಗಳ ಮಾರಾಟದಿಂದ ಗಳಿಸಿದ್ದ ಹಣದಲ್ಲಿ ಈ ಸಾಲ ನೀಡಿದ್ದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ.;
ರಾಧಿಕ ಕುಮಾರಸ್ವಾಮಿ
ನಟಿ ರಾಧಿಕಾ ಕುಮಾರಸ್ವಾಮಿ ಅವರು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ 2.5 ಕೋಟಿ ರೂಪಾಯಿ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ, ಜಮೀರ್‌ಗೆ ಸಾಲ ನೀಡಿದವರ ಪಟ್ಟಿಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದರು.
2012ರಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ 2.5 ಕೋಟಿ ರೂಪಾಯಿ ಸಾಲ ನೀಡಿದ್ದನ್ನು ರಾಧಿಕಾ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ನಟಿ ಯಶ್ ಮತ್ತು ರಮ್ಯಾ ನಟಿಸಿದ್ದ 'ಲಕ್ಕಿ' ಚಿತ್ರದ ನಿರ್ಮಾಣದಿಂದ ಬಂದ ಲಾಭ ಮತ್ತು ಸ್ಯಾಟಲೈಟ್ ಹಕ್ಕುಗಳ ಮಾರಾಟದಿಂದ ಗಳಿಸಿದ್ದ ಹಣದಲ್ಲಿ ಈ ಸಾಲ ನೀಡಿದ್ದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆ ಸಮಯದಲ್ಲಿ ಜಮೀರ್ ಅವರು ಆರ್ಥಿಕ ಸಂಕಷ್ಟದಲ್ಲಿದ್ದರು ಎಂದು ರಾಧಿಕಾ ಹೇಳಿದ್ದಾರೆ.
2019ರಲ್ಲಿ ಬಯಲಾದ ಬಹುಕೋಟಿ ರೂಪಾಯಿಗಳ ಐಎಂಎ ವಂಚನೆ ಹಗರಣದಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ನಂಟು ಇದೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿತ್ತು. ಇಡಿ ಸಲ್ಲಿಸಿದ ವರದಿಯನ್ನು ಆಧರಿಸಿ ಆಗ ಮೈತ್ರಿ ಸರ್ಕಾರದ ಸಚಿವರಾಗಿದ್ದ ಜಮೀರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ತನಿಖೆಯನ್ನು ಈಗ ಲೋಕಾಯುಕ್ತ ಪೊಲೀಸರು ಮುಂದುವರಿಸಿದ್ದಾರೆ.