ನೀರು ಕಲುಷಿತಗೊಂಡು ದುಷ್ಪರಿಣಾಮವಾದರೆ ಎಂಜಿನಿಯರ್‌, ಪಿಡಿಒಗಳು ಹೊಣೆ

ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಬೇಕು ಮತ್ತು ಆಗಸ್ಟ್‌ ಮೊದಲ ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.;

Update: 2025-07-07 14:57 GMT

ರಾಜ್ಯದಲ್ಲಿ ನೀರು ಕಲುಷಿತಗೊಂಡು ಯಾವುದೇ ದುಷ್ಪರಿಣಾಮಗಳಾದಲ್ಲಿ ಸಂಬಂಧಿಸಿದ ಎಂಜಿನಿಯರ್‌ಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ನೇರವಾಗಿ ಹೊಣೆಯಾಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿರುವ ಮತ್ತು ಆರು ಜನರ ಸ್ಥಿತಿ ಗಂಭೀರವಾಗಿರುವ ಘಟನೆ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ಗಮನ ಸೆಳೆದಿದೆ.

ಬೆಂಗಳೂರಿನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಐದು ಗಂಟೆಗಳಿಗೂ ಹೆಚ್ಚು ಕಾಲ ವಿಡಿಯೋ ಸಭೆ ನಡೆಸಿದ ಸಚಿವರು, ಕಲುಷಿತ ನೀರು ಸೇವನೆಯಿಂದಾದ ದುಷ್ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ ಅವರು, ಇಂತಹ ಘಟನೆಗಳಿಗೆ ಸ್ಥಳೀಯ ಎಂಜಿನಿಯರ್‌ಗಳು ಮತ್ತು ಪಿಡಿಒಗಳೇ ಜವಾಬ್ದಾರರು ಎಂದು ಸ್ಪಷ್ಟಪಡಿಸಿದರು.

ಮಳೆಗಾಲದ ಮುನ್ನೆಚ್ಚರಿಕೆ ಮತ್ತು ತ್ಯಾಜ್ಯ ನಿರ್ವಹಣೆ

ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ, ಕುಡಿಯುವ ನೀರು ಕಲುಷಿತಗೊಳ್ಳುವ ಸಾಧ್ಯತೆಗಳಿರುವುದರಿಂದ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸಚಿವರು ಸೂಚಿಸಿದರು. ಜಲಮೂಲಗಳ ಬಳಿ ಪರಿಸರವನ್ನು ಶುಚಿಯಾಗಿರಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಘನತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಬರುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಜಿಲ್ಲಾ ಮಟ್ಟದಲ್ಲಿ ಆ ಪ್ರದೇಶಗಳಿಗೆ ಅನುಗುಣವಾಗಿ ತ್ಯಾಜ್ಯ ನಿರ್ವಹಣೆಗೆ ಮಾರ್ಗೋಪಾಯಗಳನ್ನು ಕಂಡುಹಿಡಿದು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.

ತಿಪ್ಪನಟಗಿ ದುರಂತ: ಮೂವರ ಸಾವು, ಹಲವರು ಅಸ್ವಸ್ಥ

ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ 10 ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ವಾಂತಿ-ಭೇದಿಯಿಂದ ಬಳಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ದುರದೃಷ್ಟವಶಾತ್, ಚಿಕಿತ್ಸೆ ಫಲಿಸದೆ ಗ್ರಾಮದ ಮೂವರು ಮೃತಪಟ್ಟಿದ್ದಾರೆ. ಆರು ಜನರ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರೂ, ಇನ್ನೂ 20 ಜನ ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ.

ಹಸಿರುಪಥ ಮತ್ತು ಕಾಮಗಾರಿಗಳ ಗುಣಮಟ್ಟ

ರಸ್ತೆ ಬದಿ ಗಿಡ ನೆಡುವ 'ಹಸಿರುಪಥ' ಕಾರ್ಯಕ್ರಮಕ್ಕೆ ಕಲಬುರಗಿಯಲ್ಲಿ ಚಾಲನೆ ನೀಡಲಾಗಿದ್ದು, ಮಳೆಗಾಲ ಮುಗಿಯುವುದರೊಳಗೆ ನರೇಗಾ ಮೂಲಕ ಗಿಡಗಳನ್ನು ನೆಡಲು ವ್ಯಾಪಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಜಿಲ್ಲೆಗಳಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಅಧಿಕಾರಿಗಳೊಂದಿಗೆ ಚರ್ಚಿಸಿ ಸಸಿಗಳನ್ನು ನೆಡಬೇಕಾದ ಗ್ರಾಮೀಣ ರಸ್ತೆಗಳನ್ನು ನಿರ್ಣಯಿಸಲು ನಿರ್ದೇಶನ ನೀಡಿದರು.

ರಾಜ್ಯದ ಜಿಲ್ಲೆಗಳಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದ್ಯತೆ ನೀಡಬೇಕು ಎಂದು ಸಚಿವರು ನಿರ್ದೇಶಿಸಿದರು. ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಗ್ರಾಮೀಣ ನೀರು ಸರಬರಾಜು ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಂಸ್ಥೆಯ ಮೂಲಕ ನಡೆಯುತ್ತಿರುವ ಕಾಮಗಾರಿಗಳನ್ನು ನಿಯಮಿತವಾಗಿ ಪರಿಶೀಲನೆ ಮಾಡುವ ಹೊಣೆಗಾರಿಕೆಯನ್ನು ಅಧಿಕಾರಿಗಳು ಆದ್ಯತೆಯ ಮೇಲೆ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಇದೇ ತಿಂಗಳ 15ರಿಂದ 31ರವರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಬೇಕು. ಅಲ್ಲದೇ, ಹಲವೆಡೆ ಕುಂಠಿತಗೊಂಡಿರುವ ಕಾಮಗಾರಿಗಳಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಪೂರ್ಣ ವಿವರಗಳನ್ನು ಒಳಗೊಂಡ ವರದಿಯನ್ನು ಆಗಸ್ಟ್ ಮೊದಲ ವಾರದಲ್ಲಿ ಸರ್ಕಾರಕ್ಕೆ ರವಾನಿಸುವಂತೆ ಆದೇಶ ನೀಡಿದರು. 

Tags:    

Similar News