ದಕ್ಷಿಣ ಕನ್ನಡ ಪ್ರವಾಸೋದ್ಯಮ ಅಭಿವೃದ್ಧಿಯತ್ತ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಿತ್ತ

ಅಭಿವೃದ್ಧಿಯತ್ತ ಮಂಗಳೂರು ಮುಖ ಮಾಡಿ ನೋಡುವಂತೆ ಮಾಡುವಲ್ಲಿ ಪ್ರವಾಸೋದ್ಯಮವನ್ನು ಪ್ರಮುಖ ಅಸ್ತ್ರವನನ್ನಾಗಿ ಬಳಸಲು ಸಚಿವ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.;

Update: 2025-06-10 10:08 GMT

ದಿನೇಶ್‌ ಗುಂಡೂರಾವ್‌ 

ದಕ್ಷಿಣ ಕನ್ನಡ ಜಿಲ್ಲೆಗೆ ಕೋಮು ಸಂಘರ್ಷಗಳಿಂದ ಮುಕ್ತಿ ನೀಡಲು ಮುಂದಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕರಾವಳಿ ಪ್ರವಾಸೋದ್ಯಮ ಅಭಿವೃದ್ದಿಯ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಉದ್ಯೋಗ ಸೃಷ್ಟಿಯಾದರೆ, ಉತ್ತಮ ವಾತಾವರಣ ನಿರ್ಮಾಣ ಮಾಡಬಹುದು ಎಂಬ ಕಲ್ಪನೆಯೊಂದಿಗೆ ಕೋಮುದ್ವೇಷದ ವಿರುದ್ಧ ಪ್ರವಾಸೋದ್ಯಮವನ್ನು ಪ್ರಮುಖ ಅಸ್ತ್ರವನನ್ನಾಗಿ ಬಳಸಲು ಸಚಿವ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ಬೆಂಗಳೂರಿನ ವಿಕಾಸ ಸೌಧದಲ್ಲಿ ಮಂಗಳವಾರ ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವಂತೆ ಸೂಚನೆ ನೀಡಿದ್ದಾರೆ. 

ಮಂಗಳೂರಿನಲ್ಲಿ 12 ಬೀಚ್‌ಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ಮಾಹಿತಿ ಪಡೆದ ಸಚಿವರು, ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವಂತೆ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ವಿಶೇಷವಾಗಿ ಜಿಲ್ಲೆಯಲ್ಲಿ ಹೋಮ್ ಸ್ಟೇ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಮೊಗವೀರ ಮಹಾಜನ ಸಭಾ ಅಧ್ಯಕ್ಷರು, ಬ್ಯಾರಿ, ತುಳು ಅಕಾಡೆಮಿ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಂಡಿದ್ದರು.‌ ಪಾರ್ಕಿಂಗ್ ಸೇರಿದಂತೆ ಮಂಗಳೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಎದುರಾಗಿರುವ ಸಮಸ್ಯೆಗಳ ಪರಿಹಾರ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಮತ್ತೊಂದು ಸುತ್ತಿನ ಸಭೆ ನಡೆಸಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಅನುಷ್ಢಾನ ಕುರಿತು ಅಂತಿಮ ನಿರ್ಣಯಗಳನ್ನು ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.‌

Tags:    

Similar News