Micro Finance Ordinance | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಒಂದೇ ದಿನ ನಾಲ್ವರು ಬಲಿ: ರಾಜ್ಯಪಾಲರಿಗೆ ತಲುಪಿದ ಸುಗ್ರೀವಾಜ್ಞೆ ಕರಡು
ಕರಡು ಪ್ರತಿಯಲ್ಲಿ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ 3 ವರ್ಷದ ಬದಲು 10 ವರ್ಷ ಜೈಲು ಶಿಕ್ಷೆ ಎಂದು ಪರಿಷ್ಕರಿಸಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಸುಗ್ರೀವಾಜ್ಞೆ ಹೊರಬೀಳಲಿದೆ.;
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ಮುಂದಾಗಿದೆ. ಸಚಿವ ಸಂಪುಟದ ಅನುಮೋದನೆ ಬಳಿಕ ಕಾನೂನು ಸಾಧ್ಯತೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ ಸರ್ಕಾರ, ಇದೀಗ ಸುಗ್ರೀವಾಜ್ಞೆಯ ಕರಡು ಪ್ರತಿಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿದೆ.
ಕರಡು ಪ್ರತಿಯಲ್ಲಿ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ 3 ವರ್ಷದ ಬದಲು 10 ವರ್ಷ ಜೈಲು ಶಿಕ್ಷೆ ಎಂದು ಪರಿಷ್ಕರಿಸಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಸುಗ್ರೀವಾಜ್ಞೆ ಹೊರಬೀಳಲಿದೆ.
ಕಳೆದ ವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧ ಸುಗ್ರೀವಾಜ್ಞೆ ಜಾರಿಗೆ ಅನುಮೋದನೆ ದೊರೆತಿತ್ತು. ಅದರಂತೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಕರಡು ತಯಾರಿಸಿ ಮುಖ್ಯಮಂತ್ರಿ ಅವರಿಗೆ ನೀಡಿದ್ದರು. ಈಗ ಕರಡು ಪ್ರತಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ.
ಫೈನಾನ್ಸ್ ಕಿರುಕುಳಕ್ಕೆ ಇಂದು ನಾಲ್ವರ ಸಾವು
ಸುಗ್ರೀವಾಜ್ಞೆ ಹೊರಡಿಸುವ ಮುನ್ನವೇ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಜೀವ ಬಲಿಗಳು ಮುಂದುವರಿದಿದ್ದು, ಸೋಮವಾರ ಕೂಡ ಒಂದೇ ದಿನ ರಾಜ್ಯದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಾಗಸಂದ್ರ ಗ್ರಾಮದ ನಿವಾಸಿ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನರಸಿಂಹಯ್ಯ(58) ನೇಣಿಗೆ ಶರಣಾಗಿದ್ದಾರೆ. ಆಟೊ ಓಡಿಸಿಕೊಂಡು ಬದುಕು ಸಾಗಿಸುತ್ತಿದ್ದ ನರಸಿಂಹಯ್ಯ ಮೂರ್ನಾಲ್ಕು ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ 3 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಸಾಲ ತೀರಿಸುವ ಸಲುವಾಗಿ ಎರಡು-ಮೂರು ಬಾರಿ ಆಟೊವನ್ನು ಅಡವಿಟ್ಟಿದ್ದ. ಕೊನೆಗೆ ಫೈನಾನ್ಸ್‌ನವರ ಕಿರುಕುಳ ಹೆಚ್ಚಾಗುತ್ತಿದ್ದಂತೆ ರಸ್ತೆ ಬದಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ, ಹಾವೇರಿಯಲ್ಲಿ ಇಬ್ಬರು ರೈತರು ಮೈಕ್ರೋ ಫೈನಾನ್ಸ್ ಕಂಪೆನಿಗಳ ಸಿಬ್ಬಂದಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆಯಲ್ಲಿ ಬ್ಯಾಂಕಿನವರು 2 ಬಾರಿ ನೋಟಿಸ್ ನೀಡಿದ್ದಕ್ಕೆ ಹೆದರಿ, ರೈತ ಸುರೇಶ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.