Namma Metro Fare Hike | ಮೆಟ್ರೋ ಪ್ರಯಾಣ ದರ ಏರಿಕೆ; ಬಿಎಂಆರ್‌ಸಿಎಲ್ ವಿರುದ್ಧ ಭುಗಿಲೆದ್ದ ಜನಾಕ್ರೋಶ
ಬೆಂಗಳೂರಿನ ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರಯಾಣಿಕರು ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಾಗ್ವಾದ ನಡೆಸಿದ್ದಾರೆ. ಅಲ್ಲದೆ, ಭಾರತೀಯ ಜನತಾ ಪಾರ್ಟಿ ಹಲವು ನಿಲ್ದಾಣಗಳಲ್ಲಿ ಪ್ರತಿಭಟನೆ ನಡೆಸಿ ಬೆಲೆ ಏರಿಕೆ ವಿರುದ್ಧ ಹೋರಾಟ ಆರಂಭಿಸಿದೆ;
ಬೆಂಗಳೂರಿನ ನಾಡಿಮಿಡಿತವಾದ ʼನಮ್ಮ ಮೆಟ್ರೋʼ ವಿರುದ್ಧ ಪ್ರಯಾಣಿಕರ ಆಕ್ರೋಶ ಭುಗಿಲೆದ್ದಿದೆ. ರಾತ್ರೋರಾತ್ರಿ ಶೇ.50 ರಿಂದ 100 ರಷ್ಟು ಪ್ರಯಾಣ ದರ ಏರಿಸಿರುವ ಬಿಎಂಆರ್‌ಸಿಎಲ್ ವಿರುದ್ಧ ಪ್ರಯಾಣಿಕರು ತಿರುಗಿಬಿದ್ದಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರಯಾಣಿಕರು ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಾಗ್ವಾದ ನಡೆಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ದಾಸರಹಳ್ಳಿ ಮೆಟ್ರೋ ನಿಲ್ದಾಣದಲ್ಲೂ ಮೆಟ್ರೋ ಸಿಬ್ಬಂದಿಯನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದರು. ಪ್ರಯಾಣ ದರ ಹೆಚ್ಚಿಸಿರುವ ಬಿಎಂಆರ್‌ಸಿಎಲ್ ವಿರುದ್ಧ ದಿನೇ ದಿನೇ ಆಕ್ರೋಶ ಹೆಚ್ಚುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಟೀಕೆಗಳು ಕೇಳಿ ಬರುತ್ತಿವೆ.
ಮೆಟ್ರೋ ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆ
ಪ್ರಯಾಣ ದರ ಏರಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ಬರುವ ಮೆಟ್ರೋ ನಿಲ್ದಾಣಗಳಲ್ಲಿ ಪೊಲೀಸರು ಗಸ್ತು ಆರಂಭಿಸಿದ್ದಾರೆ.
“ಹಸಿರು ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಸಾಮಾನ್ಯವಾಗಿ ಈ ಮಾರ್ಗದ ನಿಲ್ದಾಣಗಳಲ್ಲಿ ಬೆಳಿಗ್ಗೆ 9.30ರಿಂದ 10.30 ರವರೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತಿತ್ತು. ಪ್ರಯಾಣ ದರ ಏರಿಕೆ ನಂತರ ಪ್ರಯಾಣಿಕರು ಸಂಖ್ಯೆ ಇಳಿಮುಖವಾಗಿದೆ. ಇದಕ್ಕಿಂತ ಬಸ್ ಪ್ರಯಾಣವೇ ಕೈಗೆಟುಕುವಂತಿದೆ” ಎಂದು ಮೆಟ್ರೋ ಪ್ರಯಾಣಿಕ ವಿಶ್ವನಾಥ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಮೆಟ್ರೋ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಸಂಜೆ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಜಯನಗರ, ಎಂ.ಜಿ. ರಸ್ತೆ, ಕೆಂಗೇರಿ, ಸಿ. ವಿ. ರಾಮನ್ ನಗರ, ಮಾದಾವರ ಮೆಟ್ರೋ ನಿಲ್ದಾಣಗಳಲ್ಲಿ ಬಿಜೆಪಿ ಶಾಸಕರು, ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರ ಪ್ರತಿಯೊಂದರ ಬೆಲೆಯನ್ನು ಏರಿಕೆ ಮಾಡಿದೆ. ಜನಸಾಮಾನ್ಯರು ಓಡಾಡುವ ಮೆಟ್ರೋ ಪ್ರಯಾಣ ದರವನ್ನು ಕೈಗೆ ನಿಲುಕದಷ್ಟು ಏರಿಸಿದ್ದು, ಜನಸಾಮಾನ್ಯರ ಪ್ರಯಾಣಕ್ಕೆ ಬ್ರೇಕ್ ಹಾಕಿದೆ. ಕೂಡಲೇ ಬಿಎಂಆರ್‌ಸಿಎಲ್ ಅಧಿಕಾರಿಗಳು ಪ್ರಯಾಣ ದರ ಏರಿಕೆ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಯಾಣ ದರ ಏರಿಕೆ ಖಂಡಿಸಿದ ಎಎಪಿ
ಮೆಟ್ರೋ ಪ್ರಯಾಣ ದರ ಏರಿಸುವ ಕ್ರಮವನ್ನು ಎಎಪಿ ಕೂಡ ಖಂಡಿಸಿದೆ. ಜನಸಾಮಾನ್ಯರ ಪಾಲಿನ ಜೀವನಾಡಿಯಾಗಬೇಕಿದ್ದ ನಮ್ಮ ಮೆಟ್ರೋ ಈಗ ಸಿರಿವಂತರ ಶೋಕಿಯಾಗಿ ಮಾರ್ಪಟ್ಟಿದೆ. ಯಾವುದೇ ವೈಜ್ಞಾನಿಕ ಆಧಾರ ಇಲ್ಲದೇ ದಿಢೀರನೆ ಶೇ 50-100 ದರ ಹೆಚ್ಚಳ ಮಾಡಿರುವ ಬಿಎಂಆರ್ಸಿಎಲ್ ತಕ್ಷಣವೇ ಮೆಟ್ರೋ ದರ ಇಳಿಸಬೇಕು ಎಂದು ಆಗ್ರಹಿಸಿದೆ.
ದರ ಪರಿಷ್ಕರಣೆ ಹೇಳಿಕೆ ನೀಡಿದ ಬಿಎಂಆರ್‌ಸಿಎಲ್
ಈ ನಡುವೆ ಕೆಲವು ಮಾರ್ಗಗಳಲ್ಲಿ ಘೋಷಿತ ಶೇ.50ಕ್ಕಿಂತ ಅಧಿಕ ಪ್ರಮಾಣದಲ್ಲಿ ಪ್ರಯಾಣ ದರ ಏರಿಕೆಯಾಗಿರುವ ಕುರಿತು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ನಮ್ಮ ಮೆಟ್ರೋ ನಿರ್ವಾಹಕ ಬಿಎಂಆರ್‌ಸಿಎಲ್ ಸಂಸ್ಥೆ, ಕೆಲವು ಮಾರ್ಗಗಳಲ್ಲಿ ದರ ಏರಿಕೆ ದುಬಾರಿಯಾಗಿರುವ ದೂರುಗಳನ್ನ ಪರಿಶೀಲಿಸಲಾಗುವುದು. ಕೆಲವು ನಿಲ್ದಾಣಗಳ ನಡುವೆ ಈ ದರ ವ್ಯತ್ಯಾಸವಾಗಿದೆ. ಅದನ್ನು ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಸ್ಪಷ್ಟನೆ ನೀಡಿದೆ.