ವಕ್ಫ್‌ ವಿರೋಧಿ ಹೋರಾಟ | ಶಹಾಪುರದಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ

ಹಾಸನದಲ್ಲಿ ಕಾಂಗ್ರೆಸ್‌ ನಡೆಸಿರುವ ಸಮಾವೇಶ ಸಿಎಂ ಕುರ್ಚಿ ಉಳಿಸಿಕೊಳ್ಳಲು ನಡೆಸುತ್ತಿರುವ ಸರ್ಕಸ್‌ ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಟೀಕಿಸಿದ್ದಾರೆ.

Update: 2024-12-05 14:38 GMT

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ಬಣದ ಮೊದಲ ಹಂತದ ವಕ್ಫ್ ಹೋರಾಟ ಮುಗಿಯುತ್ತಿದ್ದಂತೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರದಿ ಆರಂಭವಾಗಿದೆ.

ಬೀದರ್‌ನಿಂದ ಆರಂಭಿಸಿರುವ ʼನಮ್ಮ ಭೂಮಿ ನಮ್ಮ ಹಕ್ಕುʼ ಹೆಸರಿನ ವಕ್ಫ್ ಹೋರಾಟವು ಎರಡನೇ ದಿನವಾದ ಗುರುವಾರ ಯಾದಗಿರಿ ಜಿಲ್ಲೆಯ ಶಹಾಪುರ ತಲುಪಿದೆ.

ವಕ್ಫ್‌ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ವಿಜಯೇಂದ್ರ ನೇತೃತ್ವದಲ್ಲಿ ರೈತರು, ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಶಹಾಪುರದ ಬಸವೇಶ್ವರ ವೃತ್ತದಲ್ಲಿ ಬೃಹತ್ ಬಹಿರಂಗ ಪ್ರತಿಭಟನಾ ಸಮಾವೇಶ ನಡೆಯಿತು. ರಾಜ್ಯದ ವಿವಿಧೆಡೆ ವಕ್ಫ್ ಹೆಸರಿನಲ್ಲಿ ಸರ್ಕಾರ ರೈತರು, ಮಠಗಳು ಹಾಗೂ ದೇವಸ್ಥಾನಗಳ ಭೂಮಿಯನ್ನು ಕಬಳಿಸುತ್ತಿದೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ನಂತರ ವಕ್ಫ್ ಭೂಮಿ ಕಬಳಿಸಲು ರಾಜ್ಯ ಸರ್ಕಾರ ಯತ್ನಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವರಾದ ಬೈರತಿ ಬಸವರಾಜ, ಶ್ರೀರಾಮುಲು, ರಾಜೂಗೌಡ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅಮೀನರಡ್ಡಿ ಯಾಳಗಿ, ಮಾಜಿ ಅಧ್ಯಕ್ಷ ಡಾ.ಶರಣ ಭೂಪಾಲರೆಡ್ಡಿ ನಾಯ್ಕಲ್ ಸೇರಿದಂತೆ ನೂರಾರು ಸಂಖ್ಯೆಯ ನಾಯಕರು ಭಾಗವಹಿಸಿದ್ದರು.

ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಬಣ ಬೀದರ್‌ನಿಂದಲೇ ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನ ನಡೆಸಿತ್ತು. ಈಗ ವಿಜಯೇಂದ್ರ ಕೂಡ ಹೋರಾಟ ನಡೆಸುತ್ತಿರುವುದರಿಂದ ಬಿಜೆಪಿ ಬಣ ರಾಜಕೀಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಕೊಳ್ಳುವಂತಾಗಿದೆ.

ಇನ್ನು ದೆಹಲಿಯಲ್ಲಿ ಬಿಜೆಪಿ ಶಿಸ್ತು ಸಮಿತಿ ಷೋಕಾಸ್ ನೋಟಿಸ್‌ಗೆ ಯತ್ನಾಳ್ ನೀಡಿದ್ದ ಉತ್ತರದಲ್ಲಿ ವಿಜಯೇಂದ್ರ ವಕ್ಫ್ ವಿರೋಧಿ ಹೋರಾಟ ನಡೆಸಿಲ್ಲ. ಹಾಗಾಗಿ ತಾವೇ ಹೋರಾಟಕ್ಕೆ ಇಳಿದಿರುವುದಾಗಿ ಹೇಳಿದ್ದರು. ಷೋಕಾಸ್ ನೋಟಿಸ್ ಗೆ ಉತ್ತರ ನೀಡಿದ್ದ ಬೆನ್ನಲ್ಲೇ ವಿಜಯೇಂದ್ರ ಅವರು ವಕ್ಫ್ ಹೋರಾಟ ಆರಂಭಿಸಿದ್ದರು.

ಕುರ್ಚಿ ಉಳಿಸಿಕೊಳ್ಳಲು ಸಮಾವೇಶ

ಹಾಸನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಜನ ಕಲ್ಯಾಣ ಸಮಾವೇಶ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಾಡುತ್ತಿರುವ ಸರ್ಕಸ್ ಎಂದು ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ಶಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದೆ. ಮುಡಾ ಹಗರಣವನ್ನು ಮರೆ ಮಾಚಲು ನಡೆಸುತ್ತಿರುವ ಈ ಸರ್ಕಸ್ ಫಲ ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಶಾಸಕ ಬಸವರಾಜ ಪಾಟೀಲ ಯತ್ನಾಳ ತಂಡ ನಡೆಸಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿ, ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ. ಕಾದು ನೋಡಿ ಎಂದು ಹೇಳಿದ್ದಾರೆ.

Tags:    

Similar News