ಜಮ್ಮುಕಾಶ್ಮೀರ ಪಾಕಿಸ್ತಾನಕ್ಕೆ ಸೇರಿಸಿ ಭೂಪಟ ಪ್ರಕಟ; ಕೆಪಿಸಿಸಿ ವಿವಾದಾತ್ಮಕ ಪೋಸ್ಟ್‌, ಸಿಬ್ಬಂದಿ ವಜಾ

ಜಮ್ಮುಕಾಶ್ಮೀರ ಇರುವ ಪಾಕಿಸ್ತಾನ ನಕ್ಷೆ ಹಾಕಿರುವುದು ತಪ್ಪಾಗಿದೆ. ಕೂಡಲೇ ಅದನ್ನು ತೆಗೆದು ಹಾಕಿಸಲಾಗಿದೆ. ಇಂತಹ ಟ್ವೀಟ್‌ ಹಾಕಿದ ಸಿಬ್ಬಂದಿಯನ್ನು ಸಾಮಾಜಿಕ ಮಾಧ್ಯಮ ವಿಭಾಗದಿಂದ ಹೊರ ಹಾಕಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.;

Update: 2025-05-12 08:40 GMT

ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಯಿಂದ ಪಾಕಿಸ್ತಾನಕ್ಕೆ ನೆರವು ದೊರೆತ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಿದ ಭೂಪಟ ಪ್ರಕಟಿಸಿದ ಕೆಪಿಸಿಸಿ ಪೋಸ್ಟ್‌ ತೀವ್ರ ವಿವಾದಕ್ಕೆ ಗುರಿಯಾಗಿದೆ.

ಸ್ವಯಂಘೋಷಿತ ವಿಶ್ವಗುರುವಿಗೆ ಕ್ಯಾರೇ ಎನ್ನದ ಐಎಂಎಫ್‌ ಎಂಬ ಶೀರ್ಷಿಕೆಯಲ್ಲಿ ಪೋಸ್ಟ್‌ ಟ್ಯಾಗ್‌ ಮಾಡಿತ್ತು. ಆದರೆ, ಅದರಲ್ಲಿ ಜಮ್ಮುಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಿದ ಭೂಪಟ ಪ್ರಕಟಿಸಿತ್ತು. ಕೆಪಿಸಿಸಿಯ ಈ ಎಡವಟ್ಟು ವಿವಾದ ಸೃಷ್ಟಿಸುತ್ತಿದ್ದಂತೆ ಪೋಸ್ಟ್‌ ಡಿಲೀಟ್‌ ಮಾಡಲಾಗಿದೆ.    

ಈ ಸಂಬಂಧ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ವಿವಾದಾತ್ಮಕ ಪೋಸ್ಟ್ ಹಾಕಿದ್ದ ಜಾಲತಾಣ ವಿಭಾಗದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ.  

ರಾಜ್ಯ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ವಿವಾದಾತ್ಮಕ ಪೋಸ್ಟ್‌ಗಳನ್ನು ಹಾಕುತ್ತಿರುವ ಕುರಿತ ಪ್ರಶ್ನೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣ ವಿಭಾಗದ ಸಿಬ್ಬಂದಿಯಿಂದ ತಪ್ಪಾಗಿದೆ. ಕೂಡಲೇ ಪೋಸ್ಟ್‌ ಡಿಲೀಟ್‌ ಮಾಡಿದ್ದೇವೆ. ಇಂತಹ ಟ್ವೀಟ್‌ ಪ್ರಕಟಿಸಿದ ಸಿಬ್ಬಂದಿಯನ್ನು ಹೊರ ಹಾಕಿದ್ದೇವೆ ಎಂದು ಹೇಳಿದ್ದಾರೆ. 

ಕದನ ವಿರಾಮ ಘೋಷಣೆ ಬಳಿಕ ಇಂದಿರಾಗಾಂಧಿ ಅವರ ಭಾಷಣದ ವಿಡಿಯೋ ವೈರಲ್ ಆಗುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನಾನು ಮಾತನಾಡುವುದಿಲ್ಲ. ರಾಷ್ಟ್ರೀಯ ನಾಯಕರು ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಕೆಪಿಸಿಸಿಯಿಂದ ಪದೇ ಪದೇ ಎಡವಟ್ಟು

ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ವಿವಾದಾತ್ಮಕ ಪೋಸ್ಟ್‌ ಹಾಕುವುದು,  ನಂತರ ಡಿಲೀಟ್‌ ಮಾಡುವುದು ಇದೇ ಮೊದಲಲ್ಲ. ಹಿಂದೆ ಹಲವು ಸಂದರ್ಭಗಳಲ್ಲಿ ಈ ರೀತಿ ಆಗಿದ್ದವು. ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ನಂತರ ʼಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂಬ ಮಹಾತ್ಮ ಗಾಂಧಿ ಭಾವಚಿತ್ರ ಹಾಕಿ ಟ್ವೀಟ್ ಮಾಡಿದ್ದು ಕೂಡ ಟ್ರೋಲ್ ಹಾಗೂ ಪ್ರತಿಪಕ್ಷಗಳ ವಿರೋಧಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಸಂದರ್ಭದಲ್ಲೂ ಭಾರತದ ತಲೆ ಇಲ್ಲದ ಭೂಪಟವನ್ನು ಕಟೌಟ್‌ಗಳಲ್ಲಿ ಮುದ್ರಿಸಲಾಗಿತ್ತು. ತೀವ್ರ ವಿರೋಧ ವ್ಯಕ್ತವಾದ ಬಳಿಕ ಅದನ್ನು ತೆರವು ಮಾಡಿದ್ದು ಮತ್ತೊಂದು ದೊಡ್ಡ ಉದಾಹರಣೆ. 

Tags:    

Similar News