Mandya Violence | ಗಣಪತಿ ಮೆರವಣಿಗೆ ವೇಳೆ ಗಲಭೆ, ಹೇಗಿದೆ ಈಗ ಪರಿಸ್ಥಿತಿ?

ನಾಗಮಂಗಲದ ಬದರಿಕೊಪ್ಪಲಿನಿಂದ ಹೊರಟ ಗಣೇಶನ ವಿಸರ್ಜನಾ ಮೆರವಣಿಗೆ ಮಂಡ್ಯ ಸರ್ಕಲ್ ಮಾರ್ಗವಾಗಿ ತೆರಳಿತ್ತು. ಆದರೆ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆಗೆ ತಡೆಯೊಡ್ದಿದ್ದರು

Update: 2024-09-12 06:49 GMT
ಕೋಮುಗಲಭೆಯಿಂದಾಗಿ ಹೊತ್ತಿ ಉರಿದ ಅಂಗಡಿಗಳು
Click the Play button to listen to article

ಬುಧವಾರ ಗಣಪತಿ ವಿಸರ್ಜನೆ ಸಮಯದಲ್ಲಿ ಎರಡು ಕೋಮಿನ ನಡುವೆ ನಡೆದ ಗಲಭೆಯಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಗುರುವಾರ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ 144 ಸೆಕ್ಷನ್‌ ಜಾರಿಗೊಳಿಸಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬುಧವಾರ ರಾತ್ರಿಯ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಲ್ಲಿ ಕಳೆದ 5 ದಿನಗಳ ಹಿಂದೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ಸಂಜೆ ಅದ್ಧೂರಿಯಾಗಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಬುಧವಾರ ಸಂಜೆ 6.30ರ ವೇಳೆಗೆ ಗಣೇಶನ ವಿಸರ್ಜನಾ ಮೆರವಣಿಗೆ ಆರಂಭವಾಗಿತ್ತು. ಪಟಾಕಿ ಸಿಡಿಸುತ್ತಾ, ಡೊಳ್ಳು, ತಮಟೆ, ಡಿಜೆ ಸೌಂಡ್‌ನೊಂದಿಗೆ ಗಣೇಶನ ಮೂರ್ತಿ ವಿಸರ್ಜನೆಗೆ ಮೆರವಣಿಗೆ ಹೊರಟಿದ್ದರು. ಈ ವೇಳೆ  ಮೆರವಣಿಗೆಯು ಪ್ರಾರ್ಥನಾ ಮಂದಿರವೊಂದರ ಮುಂದೆ ಸಾಗುತ್ತಿದ್ದಂತೆ ಎರಡು ಸಮುದಾಯಗಳ ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಕೆಲವೇ ನಿಮಿಷಗಳಲ್ಲಿ ಕಲ್ಲು ತೂರಾಟ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. 

ಪ್ರಾರ್ಥನಾ ಮಂದಿರ ರಸ್ತೆಗೆ ತೆರಳುತ್ತಿದ್ದ ಮೆರವಣಿಗೆಗೆ ತಡೆ

ಬದರಿಕೊಪ್ಪಲಿನಿಂದ ಹೊರಟ ಗಣೇಶನ ವಿಸರ್ಜನಾ ಮೆರವಣಿಗೆ ಮಂಡ್ಯ ಸರ್ಕಲ್ ಮಾರ್ಗವಾಗಿ ತೆರಳಿತ್ತು. ಬಳಿಕ ದರ್ಗಾ ಮುಂಭಾಗದ ರಸ್ತೆಯತ್ತ ಮೆರವಣಿಗೆ ತಿರುಗಿತ್ತು. ಆದರೆ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆಗೆ ತಡೆಯೊಡ್ದಿದ್ದರು. ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ವಾಗ್ವಾದ ನಡೆಸಿದ್ದರು. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಎರಡೂ ಕೋಮಿನ ಯುವಕರ ನಡುವೆ ಸಂಘರ್ಷ ನಡೆದು ಗಣೇಶ ವಿಸರ್ಜನಾ ಮೆರವಣಿಗೆಯತ್ತ ಕಲ್ಲು ತೂರಾಟ ನಡೆದಿದೆ. ಈ ವೇಳೆ ಎರಡೂ ಕೋಮಿನ ಯುವಕರ ನಡುವೆ ವಾಕ್ಸಮರ, ತಳ್ಳಾಟ ನೂಕಾಟ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ನಂತರ, ಮೆರವಣಿಗೆಯಲ್ಲಿ ಇದ್ದವರು ಕಲ್ಲುತೂರಾಟ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ನಾಗಮಂಗಲ ಪೊಲೀಸ್ ಠಾಣೆ ಮುಂದೆ ಗಣೇಶ ಮೂರ್ತಿ ಇಟ್ಟು ಪ್ರತಿಭಟನೆ ನಡೆಸಿದ್ದರು.

ಹೊತ್ತಿ ಉರಿದ ಅಂಗಡಿಗಳು 

ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಾಗಮಂಗಲ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಸ್ವಲ್ಪಹೊತ್ತಿನಲ್ಲೇ, ರಾತ್ರಿ 10 ಗಂಟೆ ಸುಮಾರಿಗೆ ನಾಗಮಂಗಲದ ಮಂಡ್ಯ ಸರ್ಕಲ್‌ನಲ್ಲಿ ಕೆಲವು ಯುವಕರ ಗುಂಪು ಸಿಕ್ಕಸಿಕ್ಕ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಪೆಟ್ರೋಲ್ ಬಾಂಬ್‌ಗಳನ್ನು ತೂರಿದೆ. ಗುಜರಿ ಅಂಗಡಿಯೊಂದು ಧಗಧಗಿಸಿ ಉರಿದುಹೋಗಿದೆ. ಬೈಕ್ ಶೋರೂಂ ಒಂದನ್ನು ಧ್ವಂಸಗೊಳಿಸಲಾಗಿದೆ.

ಕೆಲವು ಕಿಡಿಗೇಡಿಗಳು ರಸ್ತೆಯಲ್ಲೇ ಲಾಂಗು, ರಾಡ್‌, ತಲ್ವಾರ್‌ ಝಳಪಿಸುತ್ತಾ ಅಟ್ಟಹಾಸ ಪ್ರದರ್ಶಿಸಿದ್ದಾರೆ. ರಸ್ತೆಯಲ್ಲಿ ಬರುತ್ತಿದ್ದ ವಾಹನಗಳ ಮೇಲೆಯೂ ದಾಳಿ ಮಾಡಿದ್ದಾರೆ. ಪೊಲೀಸರು ಕಿಡಿಗೇಡಿಗಳಿಂದ ಲಾಂಗ್‌ ಸೇರಿ ಇತರೆ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಾಜಿ‌ ಶಾಸಕ ಸುರೇಶ್ ಗೌಡ ಮನೆ ಮೇಲೆ ಕಲ್ಲು

ಅಷ್ಟೇ ಅಲ್ಲದೆ ಬದರಿಕೊಪ್ಪಲಿನಲ್ಲಿರುವ ಮಾಜಿ ಶಾಸಕ ಸುರೇಶ್ ಗೌಡ ನಿವಾಸಕ್ಕೂ ಕಲ್ಲು ತೂರಾಟ ನಡೆಸಿದ್ದಾರೆ. ಅವರ ಮನೆಯ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ರಾತ್ರಿಯಿಂದಲೇ ಸುರೇಶ್ ಗೌಡ ಮನೆಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.

13 ಅಂಗಡಿಗಳಿಗೆ ಹಾನಿ

ಕಿಡಿಗೇಡಿಗಳು 6 ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು, 13 ಸಣ್ಣಪುಟ್ಟ ಅಂಗಡಿಗಳು ದ್ವಂಸವಾಗಿವೆ. ಕಿಡಿಗೇಡಿಗಳು ಸಿಕ್ಕ ಸಿಕ್ಕ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು, ಪಾತ್ರೆ ಅಂಗಡಿ, ಬಳೆ ಅಂಗಡಿ ಸೇರಿದಂತೆ 13 ಅಂಗಡಿ ಮುಂಗಟ್ಟುಗಳು ಸುಟ್ಟು ಕರಕಲಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಪ್ಯಾನ್ಸಿ ಐಟಂಗಳು ಕೂಡ ಭಸ್ಮವಾಗಿದೆ.

 ಹಲವರಿಗೆ ಗಾಯ

ಕಲ್ಲು ತೂರಾಟ ನಡೆಸಿದ ಘಟನೆಯಿಂದ ಹಿಂದೂ-ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಪರಸ್ಪರರು ಕಲ್ಲು ತೂರಾಟ ಮಾಡಿ, ಬಾಟಲಿಗಳನ್ನು ಎಸದೆ ಪರಿಣಾಮ ಹಲವರು ಗಾಯಗೊಂಡಿದ್ದು, ಪೊಲೀಸ್ ಪೇದೆಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

144 ಸೆಕ್ಷನ್ ಜಾರಿ 

ತೀವ್ರ ಉದ್ವಿಗ್ನಗೊಂಡ ನಾಗಮಂಗಲದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರಿಂದ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಸಹಜ ಸ್ಥಿತಿಗೆ ನಾಗಮಂಗಲ: ಎಸ್​ಪಿ

ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕಳೆದ ರಾತ್ರಿ ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ. ಒಂದು ಗುಂಪು ಮೆರವಣಿಗೆ ನಡೆಸುತ್ತಿದ್ದಾಗ, ಇನ್ನೊಂದು ಗುಂಪು ಅವರನ್ನು ತಡೆದು, ಇದು ಸೂಕ್ಷ್ಮ ಪ್ರದೇಶವಾದ್ದರಿಂದ ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಗುಂಪುಗಳನ್ನು ಚದುರಿಸಿದರು. ಈ ಪ್ರಕರಣದಲ್ಲಿ ಇದುವರೆಗೆ ಸುಮಾರು 46 ಮಂದಿಯನ್ನು ಬಂಧಿಸಲಾಗಿದ್ದು, ಸೆಕ್ಷನ್ 144 ವಿಧಿಸಿ ತನಿಖೆ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ನಾಗಮಂಗಲ ಪಟ್ಟಣದಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಮಂಡ್ಯ ಎಸ್​​​ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ. 

 ಶಾಲೆಗಳಿಗೆ ರಜೆ ಘೋಷಣೆ 

ನಾಗಮಂಗಲದಲ್ಲಿ ಬುಧವಾರ ನಡೆದ ಗಣಪತಿ ಮೆರವಣಿಗೆ ಘರ್ಷಣೆ ಹಿನ್ನೆಲೆಯಲ್ಲಿ ಗುರುವಾರ ಅಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

"ನಿನ್ನೆ ನಾಗಮಂಗಲ ಘಟನೆ ನಡೆಯಬಾರದಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿ ನಂತರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಎಸ್ಪಿ, ಐಜಿಪಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಈಗ ಪರಿಸ್ಥಿತಿ ಶಾಂತಿಯುತವಾಗಿದೆ. ಇಂತಹ ಘಟನೆಗೆ ಪ್ರಚಾರ ನೀಡಬೇಡಿ ಎಂದು ನಾನು ವಿನಂತಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ.

Tags:    

Similar News