ಮಲೆ ಮಾದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತೆ ಕಾಡಾನೆ ದಾಳಿಗೆ ಬಲಿ!
ಕಾಡಾನೆ ದಾಳಿಗೆ ಸಿಲುಕಿ ಮಲೆ ಮಾದೇಶ್ವರ ಬೆಟ್ಟಕ್ಕೆ ಕಾಲ್ಮಡಿಗೆಯಲ್ಲಿ ತೆರಳುತ್ತಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಚಾಮರಾಜನಗರ: ಹನೂರು ತಾಲೂಕಿನ ತಾಳಬೆಟ್ಟದಿಂದ ಪಾದಯಾತ್ರೆಯ ಮೂಲಕ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ತುತ್ತಾಗಿ, ಸ್ಥಳದಲ್ಲಿಯೇ ಸಾವುಕಂಡಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹುಲ್ಲೇಗಾಳ ಗ್ರಾಮದ ಲಕ್ಷ್ಮಿ(36) ಮೃತಪಟ್ಟ ದುರ್ದೈವಿ.
ಯುಗಾದಿ ಹಬ್ಬದ ದಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಗ್ರಾಮದ ಎಂಟು ಮಂದಿ ಬೆಟ್ಟಕ್ಕೆ ಬಂದಿದ್ದರು. ಈ ಪೈಕಿ ಲಕ್ಷೀ, ಪದ್ಮಮ್ಮ, ಪುಟ್ಟರಾಜು ಅವರು ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಸಂಜೆ 7 ಗಂಟೆ ಸುಮಾರಿಗೆ ತಲೆದಿಂಬ ಸಮೀಪ ಕಾಡಾನೆ ಹಠಾತ್ ದಾಳಿ ನಡೆಸಿದೆ. ಆನೆ ತುಳಿತಕ್ಕೆ ಒಳಗಾದ ಲಕ್ಷ್ಮೀ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಗಾಬರಿಕೊಂಡ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೃತ ಲಕ್ಷ್ಮಿ ಮೃತದೇಹವನ್ನು ಮಲೆ ಮಹದೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಮೃತರ ಸಹೋದರಿ ಪದ್ಮ, ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.