ಮಲಯಾಳಂ ಚಿತ್ರದಲ್ಲಿ ಬೆಂಗಳೂರಿನ ಮಹಿಳೆಯರಿಗೆ ಅವಮಾನ: ಕ್ಷಮೆಯಾಚಿಸಿದ ದುಲ್ಕರ್ ಸಲ್ಮಾನ್ ನಿರ್ಮಾಣ ಸಂಸ್ಥೆ
'ಲೋಕಾ' ಚಿತ್ರದ ಬಹುತೇಕ ದೃಶ್ಯಗಳನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗಿದೆ. ಆದರೆ, ಚಿತ್ರದ ಸಂಭಾಷಣೆಯೊಂದರಲ್ಲಿ ಬೆಂಗಳೂರು ಮತ್ತು ಇಲ್ಲಿನ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.;
ಕಲ್ಯಾಣಿ ಪ್ರಿಯದರ್ಶನ್
ನಟಿ ಕಲ್ಯಾಣಿ ಪ್ರಿಯದರ್ಶನ್ ಅಭಿನಯದ, ಬಹುನಿರೀಕ್ಷಿತ ಮಲಯಾಳಂ ಸೂಪರ್‌ಹೀರೋ ಚಿತ್ರ 'ಲೋಕಾ ಚಾಪ್ಟರ್ 1: ಚಂದ್ರ' ಬಿಡುಗಡೆಯಾದ ಬೆನ್ನಲ್ಲೇ ವಿವಾದಕ್ಕೆ ಸಿಲುಕಿದೆ. ಚಿತ್ರದಲ್ಲಿ ಬೆಂಗಳೂರಿನ ಮಹಿಳೆಯರ ಕುರಿತು ಬಳಸಲಾದ ಆಕ್ಷೇಪಾರ್ಹ ಸಂಭಾಷಣೆಯು ಕರ್ನಾಟಕದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ ನಂತರ, ಚಿತ್ರದ ನಿರ್ಮಾಣ ಸಂಸ್ಥೆಯಾದ ದುಲ್ಕರ್ ಸಲ್ಮಾನ್ ಒಡೆತನದ 'ವೇಯ್‌ಫೇರರ್ ಫಿಲ್ಮ್ಸ್' ತಕ್ಷಣವೇ ಕ್ಷಮೆಯಾಚಿಸಿದೆ.
'ಲೋಕಾ' ಚಿತ್ರದ ಬಹುತೇಕ ದೃಶ್ಯಗಳನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗಿದೆ. ಆದರೆ, ಚಿತ್ರದ ಸಂಭಾಷಣೆಯೊಂದರಲ್ಲಿ ಬೆಂಗಳೂರು ಮತ್ತು ಇಲ್ಲಿನ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಬೆಂಗಳೂರನ್ನು ಡ್ರಗ್ಸ್ ಮತ್ತು ಅಪರಾಧಗಳ ರಾಜಧಾನಿ ಎಂಬಂತೆ ಬಿಂಬಿಸಲಾಗಿದೆ ಎಂದು ನಿರ್ದೇಶಕ ಮಂಸೋರೆ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕ್ಷಮೆಯಾಚಿಸಿದ ಚಿತ್ರತಂಡ
ಕನ್ನಡಿಗರ ಆಕ್ರೋಶಕ್ಕೆ ತಕ್ಷಣವೇ ಸ್ಪಂದಿಸಿದ 'ವೇಯ್‌ಫೇರರ್ ಫಿಲ್ಮ್ಸ್' ಸಂಸ್ಥೆಯು, ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. "ನಮ್ಮ ಚಿತ್ರದ ಪಾತ್ರವೊಂದು ಆಡಿದ ಮಾತಿನಿಂದ ಕರ್ನಾಟಕದ ಜನರ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಿರಲಿ. ಇದು ಉದ್ದೇಶಪೂರ್ವಕವಲ್ಲ. ಆ ಸಂಭಾಷಣೆಯನ್ನು 24 ಗಂಟೆಗಳ ಒಳಗೆ ಚಿತ್ರದಿಂದ ತೆಗೆದುಹಾಕಲಾಗುವುದು," ಎಂದು ತಿಳಿಸಿ, ಕನ್ನಡಿಗರ ಬಳಿ ಕ್ಷಮೆಯಾಚಿಸಿದೆ.
ಚಿತ್ರದ ಬಗ್ಗೆ
80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 'ಲೋಕಾ ಚಾಪ್ಟರ್ 1: ಚಂದ್ರ' ಚಿತ್ರವು, ಮಲಯಾಳಂ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಹೀರೋ ಸಿನಿಮಾ ಎಂದು ಹೇಳಲಾಗುತ್ತಿದೆ. ಆಗಸ್ಟ್ 28ರಂದು ಬಿಡುಗಡೆಯಾದ ಈ ಚಿತ್ರವು, ಸೋಮವಾರದ ಅಂತ್ಯಕ್ಕೆ 31.5 ಕೋಟಿ ರೂಪಾಯಿ ಗಳಿಕೆ ಮಾಡಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.