ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಆರೋಪ | ಮಲೆಯಾಳಿ ಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಎಫ್‌ಐಆರ್
ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿಬರುತ್ತಲೇ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಅವರು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಸ್ಟಾರ್ ನಿರ್ದೇಶಕರಾಗಿರುವ ಇವರಿಗೆ ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಸೇರಿದಂತೆ ಸಾಲು ಸಾಲು ಪ್ರಶಸ್ತಿಗಳು ಸಂದಿದ್ದವು.;
ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ಮಲೆಯಾಳಂ ಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಅವರು ತಮ್ಮ ಮೇಲೆ 2012ರಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿ 31 ವರ್ಷದ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಮೇಲೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.
2012 ರಲ್ಲಿ ಕೇರಳದ ಕೋಝಿಕ್ಕೋಡ್‌ನಲ್ಲಿ 'ಬವುಟ್ಟಿಯುದೇ ನಮತಿಲ್' ಚಿತ್ರೀಕರಣದ ವೇಳೆ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ತೆರಳಿದ್ದಾಗ ಆ ಚಿತ್ರದ ನಿರ್ದೇಶಕರಾಗಿದ್ದ ರಂಜಿತ್ ಬಾಲಕೃಷ್ಣನ್ ಪರಿಚಯವಾಗಿತ್ತು. ಅಂದು ತಮ್ಮ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದರು.
2012 ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಪಂಚತಾರಾ ಹೋಟೆಲ್‌ಗೆ ನನ್ನನ್ನು ಆಹ್ವಾನಿಸಿದ್ದರು. ಅಲ್ಲಿಗೆ ಹೋದಾಗ ಬಲವಂತವಾಗಿ ಮದ್ಯ ಕುಡಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರುದಾರ ವ್ಯಕ್ತಿ ಆರೋಪಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಸಂಬಂಧ ಮೊದಲು ಕೇರಳದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಬೆಂಗಳೂರಿನಲ್ಲಿ ಘಟನೆ ನಡೆದಿರುವ ಕಾರಣ ಪ್ರಕರಣವನ್ನು ಇಲ್ಲಿಗೆ ವರ್ಗಾಯಿಸಲಾಗಿತ್ತು. ಈ ದೂರಿನನ್ವಯ ಅ.26 ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಲೆಯಾಳಂ ಚಿತ್ರರಂಗದಲ್ಲಿ ಹೆಚ್ಚಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಹೇಮಾ ಸಮಿತಿ ವರದಿ ವರದಿ ನಂತರ ಅನೇಕ ಕಲಾವಿದರಿಂದ ಸಾಲು ಸಾಲು ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ದೂರುದಾರ ವ್ಯಕಿ ತಡವಾಗಿ ಬಂದು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ ಎಂದು ಹೇಳಿದ್ದಾರೆ.
ಮಳೆಯಾಳಿ ನಿರ್ದೇಶಕರ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ) ಮತ್ತು 66 ಇ (ಗೌಪ್ಯತೆಯ ಉಲ್ಲಂಘನೆ) ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಈ ಹಿಂದೆ ಕೂಡ ಪಶ್ಚಿಮ ಬಂಗಾಳದ ನಟಿಯೊಬ್ಬರು ದೂರು ದಾಖಲಿಸಿದ್ದರು. 2009ರಲ್ಲಿ ಪಲ್ಲೇರಿ ಮಾಣಿಕ್ಯಂ ಚಿತ್ರದ ಚಿತ್ರೀಕರಣದ ವೇಳೆ ಹೋಟೆಲ್‌ನಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ನಟಿಯ ಆರೋಪವನ್ನು ನಿರ್ದೇಶಕ ರಂಜಿತ್ ಬಾಲಕೃಷ್ಣನ್ ತಳ್ಳಿಹಾಕಿದ್ದರು. ಚಿತ್ರದಲ್ಲಿ ನಟಿಸಲು ಅವಕಾಶ ನೀಡದ ಕಾರಣ ಈ ಆರೋಪ ಮಾಡಿದ್ದಾರೆ ಎಂದು ದೂರಿದ್ದರು.
ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿಬರುತ್ತಲೇ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಅವರು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಸ್ಟಾರ್ ನಿರ್ದೇಶಕರಾಗಿರುವ ಇವರಿಗೆ ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಸೇರಿದಂತೆ ಸಾಲು ಸಾಲು ಪ್ರಶಸ್ತಿಗಳು ಸಂದಿದ್ದವು.