ಮಹದಾಯಿ ಯೋಜನೆ | ಗೋವಾದ ಅಡ್ಡಿಗೆ ತೀವ್ರ ವಿರೋಧ ಸೂಚಿಸಿದ ಕರ್ನಾಟಕ
“ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ. ಆದರೂ ಗೋವಾ ಸರ್ಕಾರ ಕುಂಟು ನೆಪ ತೆಗೆದು ವಿರೋಧ ಒಡ್ಡುತ್ತಿದೆ. ಕುಡಿಯುವ ನೀರಿನ ಅಗತ್ಯವನ್ನು ಮನಗಂಡು ಕೇಂದ್ರ ಸರ್ಕಾರ ವಿಳಂಬ ಧೋರಣೆ ಕೈಬಿಟ್ಟು ಕೂಡಲೇ ಅನುಮೋದನೆ ನೀಡಬೇಕು” ಎಂದು ಕರ್ನಾಟಕ ಹೇಳಿದೆ.;
ಮಹದಾಯಿ ಕುಡಿಯುವ ನೀರಿನ ಯೋಜನೆಗಾಗಿ ಕರ್ನಾಟಕ ಸರ್ಕಾರ ಕಳೆದ ನಲವತ್ತೈದು ವರ್ಷಗಳಿಂದ ನಡೆಸುತ್ತಿರುವ ಹೋರಾಟ ಮುಂದುವರಿದಿದ್ದು, ಬುಧವಾರ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 80ನೇ ಸಭೆಯಲ್ಲಿ ಕೂಡ ರಾಜ್ಯ ಸರ್ಕಾರ, ಯೋಜನೆಗೆ ಯಾವುದೇ ವಿಳಂಬವಿಲ್ಲದೆ ಕೂಡಲೇ ಅನುಮೋದನೆ ನೀಡಬೇಕು ಎಂದು ಹಕ್ಕು ಮಂಡಿಸಿದೆ.
ನಾಲ್ಕೂವರೆ ದಶಕಗಳ ಕರ್ನಾಟಕದ ಕುಡಿಯುವ ನೀರಿನ ಬೇಡಿಕೆಗೆ ಗೋವಾ ಸರ್ಕಾರ ಅನಗತ್ಯವಾಗಿ ಅಡ್ಡಗಾಲು ಹಾಕುತ್ತಿದೆ ಎಂದು ಪ್ರಬಲ ಆಕ್ಷೇಪ ದಾಖಲಿಸಿರುವ ರಾಜ್ಯ ಸರ್ಕಾರ, “ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ. ಆದರೂ ಗೋವಾ ಸರ್ಕಾರ ಕುಂಟು ನೆಪ ತೆಗೆದು ವಿರೋಧ ಒಡ್ಡುತ್ತಿದೆ. ಕುಡಿಯುವ ನೀರಿನ ಅಗತ್ಯವನ್ನು ಮನಗಂಡು ಕೇಂದ್ರ ಸರ್ಕಾರ ವಿಳಂಬ ಧೋರಣೆ ಕೈಬಿಟ್ಟು ಕೂಡಲೇ ಅನುಮೋದನೆ ನೀಡಬೇಕು” ಎಂದು ಹೇಳಿದೆ.
ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಮಹದಾಯಿ ಕಳಸಾ ನಾಲಾ ತಿರುವು ಯೋಜನೆಗೆ ಅನುಮೋದನೆ ನೀಡುವ ಪ್ರಸ್ತಾವನೆ ಕಾರ್ಯಸೂಚಿಯಲ್ಲಿತ್ತು. ಆ ವೇಳೆ ತನ್ನ ವಾದ ಮಂಡಿಸಿದ ರಾಜ್ಯ ಸರ್ಕಾರದ ಪರ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್, “ರಾಜ್ಯದ ಉತ್ತರಕರ್ನಾಟಕ ಭಾಗದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಪೂರೈಕೆಯ ಅತ್ಯಗತ್ಯ ಯೋಜನೆ ಇದಾಗಿದ್ದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್ಟಿಸಿ) ತಜ್ಞರ ತಂಡ ಯೋಜನೆಗೆ ಅನುಮೋದನೆ ನೀಡಬಹುದು ಎಂದು ಶಿಫಾರಸು ಮಾಡಿ ಒಂಭತ್ತು ತಿಂಗಳಾದರೂ ಈವರೆಗೆ ವನ್ಯಜೀವಿ ಮಂಡಳಿ ಮತ್ತು ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ” ಎಂದು ಆಕ್ಷೇಪವೆತ್ತಿದರು.
“ಯೋಜನಾ ವ್ಯಾಪ್ತಿಯಲ್ಲಿ ಹುಲಿ ಕಾರಿಡಾರ್ಗೆ ಸೇರಿದ ಸುಮಾರು 10 ಹೆಕ್ಟೇರ್ ಜಾಗ ಸೇರುವುದರಿಂದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನ ಪಡೆಯಲು ಕೇಂದ್ರ ಅರಣ್ಯ ಸಚಿವಾಲಯ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆ ಪ್ರಸ್ತಾವನೆಗೆ ಪ್ರತಿಕ್ರಿಯೆಯಾಗಿ ರಾಷ್ಟ್ರೀಯ ಹುಲಿ ಪ್ರಾಧಿಕಾರವು ತಜ್ಞರ ತಂಡವನ್ನುರಚಿಸಿ ಯೋಜನಾ ಸ್ಥಳ ಭೇಟಿ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿ ಒಂಭತ್ತು ತಿಂಗಳಾದರೂ ಪ್ರಾಧಿಕಾರ ತನ್ನ ತಜ್ಞರ ವರದಿಯನ್ನು ವನ್ಯಜೀವಿ ಮಂಡಳಿಗೆ ಸಲ್ಲಿಸಿಲ್ಲ” ಎಂದು ಮಂಜುನಾಥ್ ಪ್ರಸಾದ್ ಮಂಡಳಿಗೆ ತಿಳಿಸಿದ್ದಾರೆ.
ಅಲ್ಲದೆ, ಯೋಜನೆಯ ಕುರಿತ ಈ ಹಿಂದಿನ ಪ್ರಮುಖ ಸಂಗತಿಗಳನ್ನು ಪ್ರಸ್ತಾಪಿಸಿದ ಅವರು, “ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳ ಮಹದಾಯಿ ನ್ಯಾಯಮಂಡಳಿ 2018 ರಲ್ಲೇ ನೀರು ಹಂಚಿಕೆ ಮಾಡಿದೆ. ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಬಹುದು ಎಂದು 2020ರಲ್ಲೇ ಸುಪ್ರೀಂಕೋರ್ಟ್ ಹೇಳಿದೆ. ಆ ಹಿನ್ನೆಲೆಯಲ್ಲೇ 2022ರಲ್ಲೇ ಕೇಂದ್ರ ಜಲ ಆಯೋಗ ಡಿಪಿಆರ್ಗೆ ಒಪ್ಪಿಗೆ ಕೊಟ್ಟಿದೆ. ಆ ಬಳಿಕ ಅರಣ್ಯ ಸಂರಕ್ಷಣಾ ಕಾಯ್ದೆಯಡಿಯಲ್ಲಿ ವನ್ಯಜೀವಿ ಮಂಡಳಿ ಅನುಮೋದನೆ ನೀಡಲು ಯಾವುದೇ ಅಡ್ಡಿ ಇಲ್ಲ. ಹೀಗಾಗಿ ಕೇಂದ್ರ ಪ್ರಾಧಿಕಾರಗಳು ಸೂಕ್ತ ತೀರ್ಮಾನ ಕೈಗೊಳ್ಳಬಹುದು” ಎಂದು ವಾದಿಸಿದರು.
ರಾಜ್ಯದ ವಾದವನ್ನು ಆಲಿಸಿದ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ, ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ, ಪರಿಶೀಲನೆ ನಡೆಸಿ ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ.