Lok Sabha Election 2024 | ಸ್ತ್ರೀ ಮಾನ, ಸಮ್ಮಾನದ ಸುತ್ತಲೇ ಸುತ್ತಿದ್ದ ಚುನಾವಣೆಯ ಫಲಿತಾಂಶ ಹೇಳುವುದೇನು?

ಕರ್ನಾಟಕದ ಮಟ್ಟಿಗೆ ಈ ಬಾರಿಯ ಲೋಕಸಭಾ ಚುನಾವಣೆ ಬಹುತೇಕ ಮಹಿಳೆಯ ಸುತ್ತಲೇ ಸುತ್ತುತ್ತಿತ್ತು. ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳ ಸ್ತ್ರೀ ಸಮ್ಮಾನದಿಂದ ಆರಂಭವಾಗಿದ್ದ ಚುನಾವಣಾ ವಾಗ್ವಾದ, ಅಂತಿಮವಾಗಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ಸ್ತ್ರೀ ನಿಂದನೆ ಸುತ್ತಲಿನ ಚರ್ಚೆಯಲ್ಲಿ ಪರ್ಯಾವಸಾನ ಕಂಡಿತ್ತು.

Update: 2024-06-04 11:54 GMT

ಕರ್ನಾಟಕದ ಮಟ್ಟಿಗೆ ಈ ಬಾರಿಯ ಲೋಕಸಭಾ ಚುನಾವಣೆ ಬಹುತೇಕ ಮಹಿಳೆಯ ಸುತ್ತಲೇ ಸುತ್ತುತ್ತಿತ್ತು. ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳ ಸ್ತ್ರೀ ಸಮ್ಮಾನದಿಂದ ಆರಂಭವಾಗಿದ್ದ ಚುನಾವಣಾ ವಾಗ್ವಾದ, ಅಂತಿಮವಾಗಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ಸ್ತ್ರೀ ನಿಂದನೆ ಸುತ್ತಲಿನ ಚರ್ಚೆಯಲ್ಲಿ ಪರ್ಯಾವಸಾನ ಕಂಡಿತ್ತು.

ಮಹಿಳಾ ಘನತೆ, ಸ್ವಾವಲಂಬನೆ, ಸ್ವಾಭಿಮಾನದ ಯೋಜನೆಗಳು ಎನ್ನಲಾದ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಜನಪ್ರಿಯತೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ತಂದುಕೊಟ್ಟ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಗ್ಯಾರಂಟಿ ಯೋಜನೆಗಳನ್ನು ತನ್ನ ಪ್ರಣಾಳಿಕೆಯಾಗಿ ಘೋಷಿಸಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯದ ಮಹಿಳಾ ಪರ ಯೋಜನೆಗಳು ರಾಷ್ಟ್ರಮಟ್ಟದಲ್ಲಿಯೂ ಚುನಾವಣಾ ಕಣದಲ್ಲಿ ಸದ್ದು ಮಾಡಿದ್ದವು. ಸ್ತ್ರೀ ಸಮ್ಮಾನದ ಯೋಜನೆಗಳ ಸುತ್ತ ಕನಿಷ್ಟ ಕರ್ನಾಟಕದ ಮಟ್ಟಿಗಾದರೂ ಚುನಾವಣಾ ವಾಗ್ವಾದವನ್ನು ಹೆಣೆಯಲಾಗಿತ್ತು.

ಆದರೆ, ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆಯ ಮತದಾನಕ್ಕೆ ಒಂದೆರಡು ದಿನವಿರುವಾಗ ಬಹಿರಂಗವಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ಚುನಾವಣೆಯ ವಾಗ್ವಾದವನ್ನು ಸಂಪೂರ್ಣ ತಿರುವುಮುರುವು ಮಾಡಿಬಿಟ್ಟಿತು. ಆವರೆಗೆ ಮಹಿಳಾ ಸಮ್ಮಾನದ ಸುತ್ತ ಕಟ್ಟಲಾಗಿದ್ದ ಚುನಾವಣಾ ಚರ್ಚೆ, ಏಕಾಏಕಿ ಮಹಿಳಾ ಮಾನ- ಸಮ್ಮಾನದ ಪ್ರಶ್ನೆಯಾಗಿ ಬದಲಾಯಿತು. ಹಾಸನದ ಆಗಿನ ಸಂಸದನೂ ಆಗಿದ್ದ ಪ್ರಜ್ವಲ್ ರೇವಣ್ಣ ತನ್ನ ಅಧಿಕಾರ ಮತ್ತು ಜಾತಿ ಬಲದ ಮೇಲೆ ನೂರಾರು ಮಹಿಳೆಯರ ಮೇಲೆ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ಸರಣಿ ವಿಡಿಯೋಗಳು ಮಹಿಳೆಯ ಘನತೆ ಮತ್ತು ಬದುಕನ್ನೇ ಬೀದಿಗೆ ತಂದಿದ್ದವು.

ಆ ಅಶ್ಲೀಲ ವಿಡಿಯೋಗಳು ಚುನಾವಣಾ ಸಮಯದಲ್ಲೇ ಹೊರಬಂದ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಮತ್ತು ಚುನಾವಣಾ ಲೆಕ್ಕಾಚಾರಗಳು ಕೆಲಸ ಮಾಡಿದ್ದವು ಎಂಬ ಆರೋಪಗಳ ಹೊರತಾಗಿಯೂ ಸಂಸದನಾಗಿ ತನ್ನ ಅಧಿಕಾರ ಮತ್ತು ಪ್ರಭಾವ ಬಳಸಿ ನಡೆಸಿದ ಅತ್ಯಂತ ಹೇಯ ದಬ್ಬಾಳಿಕೆ ಮತ್ತು ಪೈಶಾಚಿಕ ನಡವಳಿಕೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ್ದವು.

ಅಷ್ಟಾಗಿಯೂ ಪ್ರಜ್ವಲ್ ಅವರಿಗೇ ಚುನಾವಣಾ ಜಯ ಒಲಿಯಬಹುದು ಎಂಬ ಲೆಕ್ಕಾಚಾರಗಳೂ ಇದ್ದವು. ಬಹುತೇಕ ಮತಗಟ್ಟೆ ಸಮೀಕ್ಷೆಗಳೂ ಅದನ್ನೇ ಹೇಳಿದ್ದವು. ಆದರೆ, ಇದೀಗ ಫಲಿತಾಂಶ ವಾಸ್ತವ ಸಂಗತಿಯನ್ನು ತೆರೆದಿಟ್ಟಿದೆ. ಹಾಸನ ಲೋಕಸಭಾ ಕ್ಷೇತ್ರದ ಮತದಾರರು ಚುನಾವಣಾ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದ್ದಾರೆ. ರಾಜಕೀಯ ತಂತ್ರಗಾರಿಕೆ, ಸುಳ್ಳು ಪ್ರಚಾರಗಳನ್ನು ಮೀರಿ ಶ್ರೀಸಾಮಾನ್ಯನ ವಿವೇಕ ಮತ್ತು ಸರಿ-ತಪ್ಪಿನ ಕುರಿತ ವಿವೇಚನೆ ದೊಡ್ಡದು ಎಂಬುದನ್ನು ಈ ಫಲಿತಾಂಶ ಸಾರಿ ಹೇಳಿದೆ.

ಎನ್‌ಡಿಎ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಸ್ವಾಮಿ ಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಬರೋಬ್ಬರಿ 35 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಆ ಮೂಲಕ ಎರಡು ದಶಕದ ಬಳಿಕ(ನಾಲ್ಕು ಲೋಕಸಭಾ ಚುನಾವಣೆ) ಕಾಂಗ್ರೆಸ್, ಹಾಸನ ಲೋಕಸಭಾ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 2004ರಲ್ಲಿ ಶ್ರೇಯಸ್ ಅಜ್ಜ ಪುಟ್ಟಸ್ವಾಮಿ ಗೌಡ ವಿರುದ್ಧ ಪ್ರಜ್ವಲ್ ಅಜ್ಜ ಮಾಜಿ ಪ್ರಧಾನಿ ದೇವೇಗೌಡರು ಜಯ ಗಳಿಸಿದ್ದರು. ಆ ಬಳಿಕ ಕ್ಷೇತ್ರ ಕಾಂಗ್ರೆಸ್ ಕೈತಪ್ಪಿತ್ತು. ಇದೀಗ ಇಬ್ಬರು ಮೂರನೇ ತಲೆಮಾರಿನ ಯುವ ನಾಯಕರ ನಡುವಿನ ಪೈಪೋಟಿಯಲ್ಲಿ ಕ್ಷೇತ್ರ ಮತ್ತೆ ಕಾಂಗ್ರೆಸ್ ಕೈವಶವಾಗಿದೆ.

ಈ ಫಲಿತಾಂಶದೊಂದಿಗೆ ಪೆನ್‌ಡ್ರೈವ್‌ ಪ್ರಕರಣ ಹಾಸನ ಕ್ಷೇತ್ರದ ಮಟ್ಟಿಗೆ ಫಲಿತಾಂಶವನ್ನು ಬದಲಿಸುವ ಮಟ್ಟಿಗೆ ಕೆಲಸ ಮಾಡಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಆದರೆ, ವಿಜೇತ ಅಭ್ಯರ್ಥಿ ಶ್ರೇಯಸ್ ಪಟೇಲ್, ಈ ಮಾತನ್ನು ತಳ್ಳಿಹಾಕಿದ್ದು, “ನಮ್ಮ ಗೆಲುವಿನ ಹಿಂದೆ ಕಾರ್ಯಕರ್ತರ ಪರಿಶ್ರಮ ಇದೆ. ಹಗಲು ರಾತ್ರಿ ಎನ್ನದೆ ನಮ್ಮ ಕಾರ್ಯಕರ್ತರು ಈ ಗೆಲುವಿಗಾಗಿ ಬೆವರು ಸುರಿಸಿದ್ದಾರೆ. ಇದು ಪೆನ್ ಡ್ರೈವ್ ಪ್ರಕರಣದಿಂದ ಪಡೆದ ಗೆಲುವಲ್ಲ” ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಇನ್ನು ಪೆನ್‌ಡ್ರೈವ್‌ ಪ್ರಕರಣದ ಸಂಪೂರ್ಣ ವಿವರಗಳು ಬಹಿರಂಗವಾಗುವ ಮುನ್ನವೇ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಹಳೇಮೈಸೂರು ಭಾಗದ 14 ಕ್ಷೇತ್ರಗಳ ಮತದಾನ ಮುಗಿದಿತ್ತು. ಹಾಗಾಗಿ ಹಾಸನ ಹೊರತುಪಡಿಸಿ ಉಳಿದೆಡೆ ಪ್ರಕರಣದ ಪ್ರಭಾವ ಮತದಾನದ ಮೇಲೆ ಉಂಟಾಗುವ ಸಾಧ್ಯತೆ ಇರಲಿಲ್ಲ.

ಎರಡನೇ ಹಂತದ ಚುನಾವಣೆ ನಡೆದ ಲಿಂಗಾಯತ ಪ್ರಾಬಲ್ಯದ ಉತ್ತರಕರ್ನಾಟಕ ಮತ್ತು ಮಧ್ಯಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ಪೆನ್‌ಡ್ರೈವ್‌ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಆದರೆ, ಆ ಕ್ಷೇತ್ರಗಳಲ್ಲಿ ಕೂಡ ಪ್ರಕರಣ ಮತದಾರರ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂಬುದನ್ನು ಇದೀಗ ಫಲಿತಾಂಶ ಬಹಿರಂಪಡಿಸಿದೆ. 14 ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿದ್ದು, ಏಳು ಕಡೆ ಕಾಂಗ್ರೆಸ್ ಗೆಲುವು ಪಡೆದಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಈ ಏಳು ಕ್ಷೇತ್ರಗಳನ್ನೂ ಬಿಜೆಪಿ ಈ ಬಾರಿ ಕಳೆದುಕೊಂಡಿದ್ದರೆ, ಕಾಂಗ್ರೆಸ್‌ಗೆ ಎಲ್ಲಾ ಕ್ಷೇತ್ರಗಳೂ ಗಳಿಕೆಯಾಗಿವೆ. ಆದರೆ, ಈ ಎಲ್ಲಾ ಕ್ಷೇತ್ರಗಳಲ್ಲೂ ಪೆನ್‌ಡ್ರೈವ್‌ ಗಿಂತ ಕಾಂಗ್ರೆಸ್‌ಗೆ ಅದರ ಗ್ಯಾರಂಟಿ ಯೋಜನೆಗಳು ಮತ್ತು ಸ್ಥಳೀಯ ನಾಯಕರ ಪ್ರಭಾವಗಳೇ ಹೆಚ್ಚು ಕೆಲಸ ಮಾಡಿದಂತಿವೆ.

ಮತ್ತೊಂದು ಕಡೆ, ಪೆನ್‌ಡ್ರೈವ್‌ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್‌ ರೇವಣ್ಣ ಅವರ ಕುಟುಂಬದ ಹಿಡಿತದಲ್ಲಿರುವ ಜಾತ್ಯತೀತ ಜನತಾ ದಳದ ರಾಜಕೀಯ ಭವಿಷ್ಯದ ಮೇಲೆ ಈ ಪ್ರಕರಣ ಗುರುತರವಾದ ಪರಿಣಾಮ ಬೀರಿದಂತಿಲ್ಲ ಎಂಬುದಕ್ಕೆ ಆ ಪಕ್ಷ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿರುವುದು ಸಾಕ್ಷಿ. ಹಾಸನ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಎದುರು ಕಳೆದುಕೊಂಡಿದ್ದರೂ, ಜೆಡಿಎಸ್‌ ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಜಯ ಗಳಿಸುವ ಮೂಲಕ ಎರಡು ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ. ಆ ದೃಷ್ಟಿಯಲ್ಲಿ ನೋಡಿದರೆ, ಪೆನ್‌ಡ್ರೈವ್‌ ಪ್ರಕರಣ ಜೆಡಿಎಸ್‌ ಪಕ್ಷದ ರಾಜಕೀಯ ಭವಿಷ್ಯದ ಮೇಲೆ ತತಕ್ಷಣಕ್ಕೆ ಯಾವುದೇ ಪರಿಣಾಮ ಬೀರಿದಂತಿಲ್ಲ. ಆದರೆ, ಗಮನಿಸಬೇಕಾದ ಸಂಗತಿ ಎಂದರೆ, ಈ ಎರಡೂ ಕ್ಷೇತ್ರಗಳಲ್ಲಿ ಪ್ರಕರಣ ಹೆಚ್ಚು ಸದ್ದು ಮಾಡುವ ಮುನ್ನವೇ ಮತದಾನ ಮುಗಿದಿತ್ತು.

ಒಟ್ಟಾರೆಯಾಗಿ ಹಾಸನವೂ ಸೇರಿದಂತೆ ಕಾಂಗ್ರೆಸ್ ಪಡೆದಿರುವ ಒಟ್ಟು 9 ಸ್ಥಾನಗಳ ಪೈಕಿ ಹಾಸನ ಹೊರತುಪಡಿಸಿದರೆ ಉಳಿದ ಎಂಟೂ ಕ್ಷೇತ್ರಗಳಲ್ಲಿ ಸ್ತ್ರೀ ಸಮ್ಮಾನದ ಅದರ ಗ್ಯಾರಂಟಿ ಯೋಜನೆಗಳೇ ಪಕ್ಷದ ಕೈಹಿಡಿದಿಂತಿವೆ. ಜೊತೆಗೆ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ಕೂಡ ಈ ಗೆಲುವಿಗೆ ಸಾಕಷ್ಟು ಕೊಡುಗೆ ಕೊಟ್ಟಿರುವುದನ್ನು ಕೂಡ ತಳ್ಳಿಹಾಕುವಂತಿಲ್ಲ.

Tags:    

Similar News