Loksabha Election Results 2024 | ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದನೇ ಮತದಾರ?

Update: 2024-06-04 14:30 GMT

2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದವು. ಕಾಂಗ್ರೆಸ್ ಮತ್ತು ಬಿಜೆಪಿ ಒಂದೆರಡು ಸ್ಥಾನಗಳಲ್ಲಿ ಕೆಲವು ಕಾರ್ಯಕರ್ತರನ್ನು ಕಣಕ್ಕಿಳಿಸಿದ್ದರೂ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಒಟ್ಟು 28 ಕ್ಷೇತ್ರಗಳ ಪೈಕಿ ಬರೋಬ್ಬರಿ 19 ಕ್ಷೇತ್ರಗಳಲ್ಲಿ ನಾಯಕರ ರಕ್ತ ಸಂಬಂಧಿಗಳನ್ನೇ ಕಣಕ್ಕಿಳಿಸಲಾಗಿತ್ತು. 

ಕಾಂಗ್ರೆಸ್‌ನಿಂದ 13 ಅಭ್ಯರ್ಥಿಗಳು ಕುಟುಂಬ ರಾಜಕಾರಣದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಮತ್ತು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೋದರ ಮಾವ ರಾಧಾಕೃಷ್ಣ ದೊಡ್ಡಮನಿ ಅವರು ಕಲಬುರಗಿ ಎಸ್‌ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಬೆಂಗಳೂರು ಗ್ರಾಮಾಂತರದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಸ್ಪರ್ಧೆ, ಚಾಮರಾಜನಗರದಿಂದ ಸಚಿವ ಹೆಚ್‌ಸಿ ಮಹಾದೇವಪ್ಪ ಪುತ್ರ ಸುನೀಲ್ ಬೋಸ್, ಚಿಕ್ಕೋಡಿಯಿಂದ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ದಾವಣಗೆರೆಯಿಂದ ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್, ಬೀದರ್‌ನಿಂದ ಸಚಿವ ಈಶ್ವರ್‌ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ಹಾಸನದಿಂದ ಮಾಜಿ ಸಂಸದ ದಿವಂಗತ ಪುಟ್ಟಸ್ವಾಮಿ ಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್, ಚಿಕ್ಕಬಳ್ಳಾಪುರದಿಂದ ಮಾಜಿ ಶಾಸಕ ಎಂ ಆರ್‌ ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ, ಬಾಗಲಕೋಟೆಯಿಂದ ಸಚಿವ ಶಿವಾನಂದ್‌ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್, ಬೆಂಗಳೂರು ಸೆಂಟ್ರಲ್‌ನಿಂದ ಮಾಜಿ ಕೇಂದ್ರ ಸಚಿವ ದಿ.ಕೆ ರೆಹಮಾನ್‌ ಖಾನ್‌ ಅವರ ಪುತ್ರ ಮನ್ಸೂರ್ ಅಲಿ ಖಾನ್, ಬೆಂಗಳೂರು ದಕ್ಷಿಣದಿಂದ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ, ಬೆಳಗಾವಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಮೃಣಾಲ್ ರವೀಂದ್ರ ಹೆಬ್ಬಾಳ್ಕರ್, ಶಿವಮೊಗ್ಗದಿಂದ ಮಾಜಿ ಮುಖ್ಯಮಂತ್ರಿ ದಿ. ಎಸ್‌ ಬಂಗಾರಪ್ಪ ಪುತ್ರಿ ಹಾಗೂ ಸಚಿವ ಮಧು ಬಂಗಾರಪ್ಪ ಸಹೋದರಿ ಗೀತಾ ಶಿವರಾಜಕುಮಾರ್ ಕಣದಲ್ಲಿದ್ದರು. ಇವರೆಲ್ಲರೂ ರಾಜಕೀಯವಾಗಿ ಪ್ರಭಾವಿ ಕುಟುಂಬದಿಂದ ಬಂದವರು.

ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಿಂದ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿಯಿಂದ, ಶ್ರೀಕಂಠದತ್ತ ನರಸಿಂಹ ಒಡೆಯರ್ ಅವರ ದತ್ತು ಪುತ್ರ‌ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್   ಮೈಸೂರು- ಕೊಡಗು ಕ್ಷೇತ್ರದಿಂದ, ಹಾಲಿ ಸಂಸದ ಸಿದ್ದೇಶ್ವರ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ ದಾವಣಗೆರೆಯಿಂದ ಮತ್ತು ಅಣ್ಣಾಸಾಹೇಬ ಶಂಕರ ಜೊಲ್ಲೆ ಚಿಕ್ಕೋಡಿಯಿಂದ ಸ್ಪರ್ಧಿಸಿದ್ದು, ಇವರು ಕೂಡಾ ಕುಟುಂಬ ರಾಜಕೀಯ ವಂಶಾವಳಿಯನ್ನು ಹೊಂದಿದ್ದಾರೆ.

ಬಿಜೆಪಿ ಜೊತೆಗಿನ ಮೈತ್ರಿಯ ಭಾಗವಾಗಿ ಜೆಡಿಎಸ್‌ಗೆ ಹಂಚಿಕೆಯಾದ ಮೂರು ಸ್ಥಾನಗಳ ಪೈಕಿ ಎರಡು ಸ್ಥಾನಗಳು ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡರ ಕುಟುಂಬದ ಸದಸ್ಯರೇ ಸ್ಪರ್ಧಿಸಿದ್ದರು. ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧಿಸಿದರೆ, ಅವರ ಪುತ್ರ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸುತ್ತಿದ್ದರು. ಅವರ ಅಳಿಯ, ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧೆ ಮಾಡಿದ್ದರು.

ಸೋಲುಂಡ ಕುಟುಂಬ ರಾಜಕಾರಣದ ಕುಡಿಗಳು

ಡಿಕೆ ಸುರೇಶ್ (ಬೆಂಗಳೂರು ಗ್ರಾಮಾಂತರ)

ಕುಟುಂಬ ರಾಜಕಾರಣದಿಂದಾಗಿ ಸುಲಭವಾಗಿ ಗೆಲ್ಲಬಹುದು ಎನ್ನುವ ರಾಜಕೀಯ ಪಕ್ಷಗಳ ಲೆಕ್ಕಾಚಾರ ಈ ಬಾರಿ ತಲೆಕೆಳಗಾಗಿಸಿದೆ. ಬೆಂಗಳೂರು ಗ್ರಾಮಾಂತರದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಸ್ಪರ್ಧೆಸಿ ಸೋಲು ಕಂಡಿದ್ದಾರೆ.ಈ ಕ್ಷೇತ್ರದಲ್ಲಿ ಅವರ ಎದುರಾಳಿಯಾಗಿ ಸ್ಪರ್ಧೆ ಮಾಡಿರುವುದು ಕುಟುಂಬದ ರಾಜಕೀಯ ಬದ್ಧವೈರಿ ದೇವೇಗೌಡರ ಅಳಿಯ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ಮಾಡಿದ್ದರು. ಮಂಜುನಾಥ್​ ಅವರು 8,82,186 ಮತಗಳನ್ನು ಪಡೆದಿದ್ದು, ಡಿ.ಕೆ. ಸುರೇಶ್​ 6,82,207 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಮಂಜುನಾಥ್​ 1,99,979 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಪ್ರಭಾವ ಹೊಂದಿರುವ ಡಿಕೆ ಬ್ರದರ್ಸ್‌ಗೆ ಈ ಸೋಲು ದೊಡ್ಡ ಆಘಾತ ತಂದೊಡ್ಡಿದೆ.

ಸೌಮ್ಯ ರೆಡ್ಡಿ(ಬೆಂಗಳೂರು ದಕ್ಷಿಣ)

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರದಿಂದ ಗೆಲುವು ಕಂಡಿದ್ದರು. ಆನಂತರ 2023 ರ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಮತಗಳ ಅಂತರಿಂದ ಸೋಲು ಅನುಭವಿಸಿದ್ದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ತೇಜಸ್ವಿಸೂರ್ಯ ಎದುರು ಹೀನಾಯ ಸೋಲು ಕಂಡಿದ್ದಾರೆ.

ರಕ್ಷಾ ರಾಮಯ್ಯ(ಚಿಕ್ಕಬಳ್ಳಾಪುರ)

ಮಾಜಿ ಸಚಿವ ಎಂ ಆರ್‌ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡಿದ್ದರು. ಇವರ ತಂದೆ 2016 ರಲ್ಲಿ ಕ್ಯಾಬಿನೆಟ್ ಸಚಿವರಾಗಿ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆನಂತರ ರಕ್ಷಾ ರಾಮಯ್ಯ ಕೂಡ ಕಾಂಗ್ರೆಸ್‌ ಪಕ್ಷದಲ್ಲಿ ಯುವ ನಾಯಕರಾಗಿ ಗುರುತಿಸಿಕೊಮಡರು. ಮುಂದೆ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಡಾ. ಕೆ ಸುಧಾಕರ್‌ ಎದುರು ಸೋಲು ಕಂಡಿದ್ದಾರೆ.

ಸಂಯುಕ್ತಾ ಪಾಟೀಲ್‌(ಬಾಗಲಕೋಟೆ)

ಸಚಿವ ಶಿವಾನಂದ ಪಾಟೀಲ್‌ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಅವರು ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ದುಮುಕಿ ಸೋಲು ಕಂಡಿದ್ದಾರೆ. ತೀವ್ರ ಪೈಪೋಟಿಯ ನಡುವೆ ಸಂಯುಕ್ತಾ ಅವರಿಗೆ ಟಿಕೆಟ್‌ ನೀಡಲಾಗಿತ್ತು. ರಾಜಕಾರಣಕ್ಕೆ ಹೊಸಬರು ಎನಿಸಿದರೂ ತಂದೆಯ ಬಲದಿಂದ ಕ್ಷೇತ್ರದಲ್ಲಿ ಸಾಕಷ್ಟು ಸದ್ದು ಮಾಡಿದ್ದರು. ಇವರು ಎದುರು ಬಿಜೆಪಿಯ ಹಳೆಯ ಹುರಿಯಾಳು ಪಿಸಿ ಗದ್ದಿಗೌಡರ್‌ ಕಣದಲ್ಲಿದ್ದರು. ಇದು ಅವರ ಐದನೇ ಗೆಲುವಾಗಿದೆ.

ಮನ್ಸೂರ್ ಅಲಿ ಖಾನ್(ಬೆಂಗಳೂರು ಕೇಂದ್ರ)

ಮಾಜಿ ಕೇಂದ್ರ ಸಚಿವ ದಿ.ಕೆ ರೆಹಮಾನ್‌ ಖಾನ್‌ ಅವರ ಪುತ್ರ ಮನ್ಸೂರ್ ಅಲಿ ಖಾನ್ ಬೆಂಗಳೂರು ಕೇಂದ್ರದಿಂದ ಸ್ಪರ್ಧೆ ಮಾಡಿದ್ದರು. ರೆಹಮಾನ್ ಖಾನ್ ಅವರು ಮಾಜಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿದ್ದರು ಮತ್ತು ರಾಜ್ಯಸಭೆಯ ಮಾಜಿ ಉಪ ಅಧ್ಯಕ್ಷರಾಗಿದ್ದರು. ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ಅಂತಿಮ ಕ್ಷಣದವರೆಗೂ ಗೆಲುವಿನ ನಿರೀಕ್ಷೆ ಹುಟ್ಟುಹಾಕಿದ್ದ ಅವರು ಅಂತಿಮ ಹಂತದಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್‌ ಎದುರು ಸೋಲು ಕಂಡಿದ್ದಾರೆ.

ಮೃಣಾಲ್‌ ಹೆಬ್ಬಾಳ್ಕರ್‌(ಬೆಳಗಾವಿ)

ರಾಜ್ಯದಲ್ಲಿ ಪ್ರಭಾವಿ ಸಚಿವೆ ಎನಿಸಿಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಬೆಳಗಾವಿ ರಾಜಕಾರಣದಲ್ಲಿ ತಮ್ಮದೇಯಾದ ವರ್ಚಸ್ಸು ಹೊಂದಿದ್ದಾರೆ. ಸ್ಥಳಿಯವಾಗಿ ಪ್ರಭಾವಿ ಕುಟುಂಬ ಜಾರಕಿಹೊಳಿ ಕುಟುಂಬವನ್ನು ವಿರೋಧ ಕಟ್ಟಿಕೊಂಡು ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಯಾಗಿ ಬೆಳೆದು ನಿಂತಿದ್ದಾರೆ. ಇದೇ ಕಾರಣಕ್ಕೆ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ಗೆ ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿತ್ತು. ಆದರೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಎದುರು ಸೋಲು ಕಂಡಿದ್ದಾರೆ.

ಗೀತಾ ಶಿವರಾಜಕುಮಾರ್(ಶಿವಮೊಗ್ಗ)

ಮಾಜಿ ಮುಖ್ಯಮಂತ್ರಿ ದಿ. ಎಸ್‌ ಬಂಗಾರಪ್ಪ ಪುತ್ರಿ ಹಾಗೂ ಸಚಿವ ಮಧು ಬಂಗಾರಪ್ಪ ಸಹೋದರಿ ಗೀತಾ ಶಿವರಾಜಕುಮಾರ್‌ ಅವರು ಈ ಹಿಂದೆ ಜೆಡಿಎಸ್‌ ಪಕ್ಷದಿಂದ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಸಹೋದರ ಮಧು ಬಂಗಾರಪ್ಪ ಜಿಲ್ಲಾ ಉಸ್ತಾವಾರಿಯಾಗಿರುವುದರಿಂದ ಗೆಲ್ಲಿಸಿಕೊಂಡು ಬರುಬಹುದು ಎನ್ನುವ ನಿರೀಕ್ಷೆಯಲ್ಲಿ ಗೀತಾ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಆದರೆ, ಪ್ರಬಲ ಪ್ರತಿಸ್ಪರ್ಧಿ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಸೋಲುಕಂಡಿದ್ದಾರೆ.

ಗಾಯತ್ರಿ ಸಿದ್ದೇಶ್ವರ್‌(ದಾವಣಗೆರೆ)

ದಾವಣಗೆರೆಯ ಹಾಲಿ ಸಂಸದ ಸಿದ್ದೇಶ್ವರ ಅವರಿಗೆ ವಯಸ್ಸಿನ ಕಾರಣಕ್ಕಾಗಿ ಬಿಜೆಪಿ ಟಿಕೆಟ್‌ ನೀಡಿರಲಿಲ್ಲ. ಹಾಗಾಗಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸೇರಿದಂತೆ ಟಿಕೇಟ್‌ಗಾಗಿ ಪ್ರಯತ್ನ ಪಟ್ಟರು. ಆದರೆ ಅಂತಿಮವಾಗಿ ಸಿದ್ದೇಶ್ವರ್ ಪತ್ನಿ ಗಾಯಿತ್ರಿ ಅವರಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸ್ಪರ್ಧೆ ಮಾಡಿದ್ದರು. ಅಂತಿಮವಾಗಿ ಪ್ರಭಾ ಅವರ ವಿರುದ್ಧ ಗಾಯತ್ರಿ ಸುಲಭ ಸೋಲು ಕಂಡರು.

ಅಣ್ಣಾಸಾಹೇಬ್‌ ಜೊಲ್ಲೆ(ಚಿಕ್ಕೋಡಿ)

ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಚಿಕ್ಕೋಡಿಯಲ್ಲಿ ಜನಪ್ರಿಯ ರಾಜಕಾರಣಿಯಾರಾಗಿದ್ದಾರೆ. ಅವರ ಪತಿ ಅಣ್ಣಾಸಾಹೇಬ್‌ ಜೊಲ್ಲೆ ಕೂಡ ಈ ಹಿಂದೆ ಸಂಸದರಾಗಿದ್ದವರು. ಜಿಲ್ಲೆಯಲ್ಲಿ ಪ್ರಬಲ ರಾಜಕೀಯ ಕುಟುಂಬಗಳಲ್ಲಿ ಜೊಲ್ಲೆ ಕುಟುಂಬವೂ ಒಂದು.. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಅಣ್ಣಾಸಾಹೇಬ್‌ ಜೊಲ್ಲೆ ಅವರು ಗೆಲುವು ಕಂಡ ಬಳಿಕ ಮತದಾರರಿಂದ ದೂರವೇ ಉಳಿದರು ಎನ್ನುವ ಆರೋಪ ಎದುರಿಸುತ್ತಿದ್ದರು. ಹಾಗಾಗಿ ಕಾಂಗ್ರೆಸ್‌ನ ಯುವನಾಯಕಿ, ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಎದುರು ಜೊಲ್ಲೆ ಸೋಲು ಕಂಡಿದ್ದಾರೆ.

ಪ್ರಜ್ವಲ್‌ ರೇವಣ್ಣ(ಹಾಸನ)

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರ ಮೊಮ್ಮಗ, ಹೊಳೆನರಸಿಪುರ ಶಾಸಕ ಹೆಚ್‌ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಆದರೆ ಈ ಬಾರಿ ಅವರ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಚುನಾವಣೆ ಸಮಯದಲ್ಲಿ ಅವರದ್ದೇ ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ಗಳು ಜಿಲ್ಲೆಯಾದ್ಯಂತ ಸದ್ದು ಮಾಡಿದ್ದು ಅವರು ಸೋಲಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಅವರ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಜಯ ಗಳಿಸಿದ್ದಾರೆ.

ಕುಟುಂಬ ರಾಜಕಾರಣದ ಅಭ್ಯರ್ಥಿಗಳಲ್ಲಿ ಗೆಲುವು ಕಂಡವರು (9)

ರಾಧಾಕೃಷ್ಣ ದೊಡ್ಡಮನಿ(ಕಲಬುರ್ಗಿ)

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಸೋದರ ಮಾವ ರಾಧಾಕೃಷ್ಣ ದೊಡ್ಡಮನಿ ಅವರು ಕಲಬುರಗಿ ಎಸ್‌ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಸೋಲು ಎದುರಾಗುತ್ತದೆ. ಆ ಬಳಿಕ ಅವರು ಚುನಾವಣಾ ಸ್ಪರ್ಧೆಯಿಂದ ದೂರ ಉಳಿದರು. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಗೆ ತಮ್ಮ ಅಳಿಯ ರಾಧಾಕೃಷ್ಣ ಅವರಿಗೆ ಟಿಕೆಟ್‌ ನೀಡಿದ್ದರು. ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ಧ ರಾಧಾಕೃಷ್ಣ ಅವರು ಗೆಲುವು ಕಂಡಿದ್ದಾರೆ.

ಸುನೀಲ್‌ ಬೋಸ್‌(ಚಾಮರಾಜನಗರ)

ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿಗೆ ವೇದಿಕೆಯಾಗಿದ್ದ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿದೆ. ಸಚಿವ ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಎಸ್‌.ಬಾಲರಾಜು ವಿರುದ್ಧ ಒಂದು ಲಕ್ಷ ಮತಗಳ ಅಂತರದಿಂದ ಸುನೀಲ್‌ ಬೋಸ್‌ ಗೆಲುವು ಕಂಡಿದ್ದಾರೆ.

ಪ್ರಿಯಾಂಕಾ ಜಾರಕಿಹೊಳಿ(ಚಿಕ್ಕೋಡಿ)

ಜಿದ್ದಾಜಿದ್ದಿನ ಕಣವಾಗಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಕಂಡಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆ ವಿರುದ್ಧ ಪ್ರಿಯಾಂಕಾ ಜಾರಕಿಹೊಳಿ 92,655 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ‌ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆ 6,18,168 ಮತಗಳನ್ನು ಪಡೆದರೆ ಪ್ರಿಯಾಂಕಾ ಜಾರಕಿಹೊಳಿ 7,10,823 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ.

ಡಾ. ಪ್ರಭಾ ಮಲ್ಲಿಕಾರ್ಜುನ್(ದಾವಣಗೆರೆ)

ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಪ್ರಬಲ ರಾಜಕೀಯ ಕುಟುಂಬದ ಹಿನ್ನಲೆಯುಳ್ಳ ಪ್ರಭಾ ಅವರು, ವಿದ್ಯಾವಂತೆಯಾಗಿದ್ದು, ಕುಟುಂಬದ ಬೆಂಬಲದ ಜೊತೆಗೆ ಸ್ವಸಾಮರ್ಥ್ಯದ ಮೂಲಕವೂ ಗೆಲುವು ಕಂಡಿದ್ದಾರೆ ಎಂದು ಹೇಳಲಾಗುತ್ತದೆ. ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರವು ಇಬ್ಬರ ಮಹಿಳಾ ಅಭ್ಯರ್ಥಿಗಳ ನೇರಾನೇರ ಸ್ಪರ್ಧೆಗೆ ಸಾಕ್ಷಿಯಾಗಿತ್ತು. ಬಿಜೆಪಿಯಿಂದ ಹಾಲಿ ಸಂಸದರ ಪತ್ನಿ ಗಾಯತ್ರಿ ಸಿದ್ದೇಶ್ವರ್‌ ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್‌ನಿಂದ ಪ್ರಭಾ ಮಲ್ಲಿಕಾರ್ಜುನ್‌ ಸ್ಪರ್ಧಿಸಿದ್ದರು. ಅಂತಿಮವಾಗಿ ಪ್ರಭಾ ಅವರು ಗೆಲುವಿನ ನಗೆ ಬೀರಿದ್ದಾರೆ.

ಸಾಗರ್ ಖಂಡ್ರೆ(ಬೀದರ್)

ಸಚಿವ ಈಶ್ವರ್‌ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಅವರು ಬೀದರ್‌ನಿಂದ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿತ್ತು. ಪುತ್ರನನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಖಂಡ್ರೆ ಅವರ ಮೇಲಿತ್ತು. ಇದೀಗ ಪಕ್ಷ ಕೊಟ್ಟಿದ್ದ ಟಾಸ್ಕ್‌ನಲ್ಲಿ ಖಂಡ್ರೆ ಅವರು ಯಶಸ್ಸು ಕಂಡಿದ್ದಾರೆ. ಕಾಂಗ್ರೆಸ್​ ಪಕ್ಷದ ಕಿರಿಯ ಅಭ್ಯರ್ಥಿ ಎಂದೇ ಖ್ಯಾತಿ ಪಡೆದಿದ್ದ ಸಾಗರ್ ಈಶ್ವರ್ ಖಂಡ್ರೆ ಅವರು 6,48,132 (+ 1,26,308) ಮತಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ. ಆ ಮೂಲಕ ಬಿಜೆಪಿಯ ಭಗವಂತ ಖೂಬಾ 5,21,824 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಕರ್ನಾಟಕದ ಬೀದರ್ ಕ್ಷೇತ್ರದ ಅಂತಿಮ ಲೋಕಸಭಾ ಚುನಾವಣಾ ಫಲಿತಾಂಶವು ಅಧಿಕೃತವಾಗಿ ಘೋಷಣೆ ಆಗಬೇಕಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆಗೆ ಗೆಲುವು ಬಹುತೇಕ ಖಚಿತವಾಗಿದೆ.

ಶ್ರೇಯಸ್‌ ಪಟೇಲ್‌(ಹಾಸನ)

ಹಾಸನ ಎಂದರೆ ದೇವೇಗೌಡರ ಭದ್ರಕೋಟೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‌ ಗೆ ಬಿಟ್ಟುಕೊಟ್ಟಿದ್ದರು. ಆಗ ಪ್ರಜ್ವಲ್‌ ಗೆಲುವು ಕಂಡಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ, ದೇವೇಗೌಡರ ವಿರೋಧಿ ಎಂದೇ ಬಿಂಬಿತವಾಗಿದ್ದ ಮಾಜಿ ಸಂಸದ ದಿವಂಗತ ಜಿ. ಪುಟ್ಟಸ್ವಾಮಿ ಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಟಿಕೆಟ್‌ ನೀಡುವ ಮೂಲಕ ಪ್ರಬಲ ಸ್ಪರ್ಧೆಯೊಡ್ಡಿತ್ತು. ಮತದಾನದ ಸಂದರ್ಭದಲ್ಲಿ ಪ್ರಜ್ವಲ್‌ನದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಕ್ಷೇತ್ರದಲ್ಲಿ ಸದ್ದು ಮಾಡಿದ್ದು, ಶ್ರೇಯಸ್ ಗೆಲುವಿಗೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಬಿ ವೈ ರಾಘವೇಂದ್ರ(ಶಿವಮೊಗ್ಗ)

ಶಿವಮೊಗ್ಗ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೊಟೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರು ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ಮಾಜಿ ಸಿಎಂ ಎಸ್‌ ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್‌ ಅವರ ವಿರುದ್ಧ ರಾಘವೇಂದ್ರ ಭರ್ಜರಿ ಗೆಲುವು ಕಂಡಿದ್ದಾರೆ.

ಬಸವರಾಜ ಬೊಮ್ಮಾಯಿ(ಹಾವೇರಿ)

ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿಯಿಂದ ಸ್ಪರ್ಧಿಸಿ, ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ವಿರುದ್ಧ ಗೆಲುವು ಕಂಡಿದ್ದಾರೆ.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಮೈಸೂರು)

ಶ್ರೀಕಂಠದತ್ತ ನರಸಿಂಹ ಒಡೆಯರ್ ಅವರ ದತ್ತು ಪುತ್ರ ಯದುವೀರ್‌ ಅವರು ಮೈಸೂರು- ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದಾರೆ. ರಾಜವಂಶಸ್ಥರ ಎದುರು ಕಾಂಗ್ರೆಸ್‌ ತಮ್ಮ ಪಕ್ಷದ ವಕ್ತಾರ ಎಂ ಲಕ್ಷ್ಮಣ ಅವರನ್ನು ಕಣಕ್ಕೆ ಇಳಿಸಿತ್ತು. ಯದುವೀರ್‌ ಅವರು ಸುಲಭದ ಜಯ ಗಳಿಸಿದ್ದಾರೆ.

Tags:    

Similar News