ಹಿಂದುತ್ವ V/s ಜಾತಿ ನಿರೂಪಣೆ: ಮೋದಿ ಭೇಟಿ ಬಳಿಕ ಚುನಾವಣೆ ಸಂಕಥನ ಬದಲು
ಮೋದಿಯವರು ಮೈಸೂರು ಮತ್ತು ಮಂಗಳೂರಿಗೆ ಭೇಟಿ ನೀಡಿದರೆ, ಆತ್ಮವಿಶ್ವಾಸ ಹೆಚ್ಚುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಕೇಸರಿ ಪಕ್ಷಕ್ಕೆ ಈಗ ನಿರಾಸೆಯಾಗಿದೆ. ಪ್ರಾದೇಶಿಕತೆ, ಒಕ್ಕೂಟ ತತ್ವ, ಖಾತರಿಗಳು ಮತ್ತು ತೆರಿಗೆ ಹಂಚಿಕೆ ಮತ್ತು ಕೇಂದ್ರದ ಅನುದಾನದ ಕುಸಿತದಿಂದ ಕರ್ನಾಟಕಕ್ಕೆ ಆದ ನಷ್ಟ ಕುರಿತ ಕಾಂಗ್ರೆಸ್ ಸಂಕಥನವನ್ನು ಎದುರಿಸಲು ಮೋದಿ ತಮ್ಮ 'ಮಂತ್ರ ದಂಡ'ವನ್ನು ಬಳಸುತ್ತಾರೆ ಎಂದು ಬಿಜೆಪಿ ನಾಯಕರು ಭಾವಿಸಿದ್ದರು. ಆದರೆ, ಮೋದಿಯವರು ಮೈಸೂರಿನಲ್ಲಿ ಹಿಂದುತ್ವದ ಕಾರ್ಡ್ ಬಳಸಿದರು ಮತ್ತು ಇಂಡಿಯ ಒಕ್ಕೂಟ, ವಿಶೇಷವಾಗಿ ಕಾಂಗ್ರೆಸ್, ಸನಾತನ ಧರ್ಮಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.;
ಕರ್ನಾಟಕದಲ್ಲಿ ಲೋಕಸಭೆ ಮತ ಚಲಾವಣೆಗೆ ಕೇವಲ ದಿನ ಬಾಕಿ ಉಳಿದಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ವಲ್ಪಮಟ್ಟಿಗೆ ದಿಗಿಲು ಗೊಂಡಿದ್ದರೆ, ಆಡಳಿತಾರೂಢ ಕಾಂಗ್ರೆಸ್ ಅಗ್ರಸ್ಥಾನಕ್ಕೇರುವ ವಿಶ್ವಾಸವನ್ನು ತೋರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹೊರತುಪಡಿಸಿದರೆ, ರಾಜ್ಯ ಬಿಜೆಪಿಗೆ ಮತ ಕೇಳುವ ಯಾವುದೇ ರಾಜಕೀಯ ಕಾರ್ಯಾಂಶ ಇದ್ದಂತೆ ಕಾಣುತ್ತಿಲ್ಲ. ಕಾಂಗ್ರೆಸ್ ನಿರಂತರವಾಗಿ ಬದಲಾಯಿಸುತ್ತಿರುವ ಕಾರ್ಯತಂತ್ರಗಳಿಗೆ ಪ್ರತಿಕ್ರಿಯಿಸಲು ಕಾರ್ಯಯೋಜನೆಗಳೇ ಇಲ್ಲ ಎಂದು ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಾರೆ.
ಬಿಜೆಪಿಗೆ ಕಠಿಣ: ʻರಾಜ್ಯದ 28 ಲೋಕಸಭೆ ಸ್ಥಾನಗಳಲ್ಲಿ 25ನ್ನು ಗೆಲ್ಲುವ ನಮ್ಮ ಹಿಂದಿನ ಗುರಿ ಪ್ರಯಾಸದಾಯಕ ಹೋರಾಟದಂತೆ ತೋರುತ್ತಿದೆʼ ಎಂದು ಬಿಜೆಪಿಯ ಹಿರಿಯ ಕಾರ್ಯಕಾರಿಯೊಬ್ಬರು ಫೆಡರಲ್‌ಗೆ ತಿಳಿಸಿದ್ದಾರೆ. ಜನತಾ ದಳ (ಜಾತ್ಯತೀತ) ಜೊತೆಗಿನ ಮೈತ್ರಿಯ ನಂತರ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ ಮತ್ತು ಮೈತ್ರಿ ಇಷ್ಟವಿಲ್ಲದ ಅತೃಪ್ತ ಕಾರ್ಯಕರ್ತ ರಿಂದ ಹೊಡೆತ ಬಿದ್ದಿದೆ. ಅಲ್ಲದೆ, ರಾಜ್ಯದ ಕೆಲವು ಭಾಗಗಳಲ್ಲಿ ತಲೆಯೆತ್ತಿದ ಬಂಡಾಯ ಬಿಜೆಪಿ ನಾಯಕರಿಗೆ ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಚಿಂತೆಗೀಡು ಮಾಡಿದೆ.
ಮೋದಿ ಅಂಶ: ಮೋದಿಯವರು ಮೈಸೂರು ಮತ್ತು ಮಂಗಳೂರಿಗೆ ಭೇಟಿ ನೀಡಿದರೆ, ಆತ್ಮವಿಶ್ವಾಸ ಹೆಚ್ಚುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಕೇಸರಿ ಪಕ್ಷಕ್ಕೆ ಈಗ ನಿರಾಸೆಯಾಗಿದೆ. ಪ್ರಾದೇಶಿಕತೆ, ಒಕ್ಕೂಟ ತತ್ವ, ಖಾತರಿಗಳು ಮತ್ತು ತೆರಿಗೆ ಹಂಚಿಕೆ ಮತ್ತು ಕೇಂದ್ರದ ಅನುದಾನದ ಕುಸಿತದಿಂದ ಕರ್ನಾಟಕಕ್ಕೆ ಆದ ನಷ್ಟ ಕುರಿತ ಕಾಂಗ್ರೆಸ್ ಸಂಕಥನವನ್ನು ಎದುರಿಸಲು ಮೋದಿ ತಮ್ಮ 'ಮಂತ್ರ ದಂಡ'ವನ್ನು ಬಳಸುತ್ತಾರೆ ಎಂದು ಬಿಜೆಪಿ ನಾಯಕರು ಭಾವಿಸಿದ್ದರು. ಆದರೆ, ಮೋದಿಯವರು ಮೈಸೂರಿನಲ್ಲಿ ಹಿಂದುತ್ವದ ಕಾರ್ಡ್ ಬಳಸಿದರು ಮತ್ತು ಇಂಡಿಯ ಒಕ್ಕೂಟ, ವಿಶೇಷವಾಗಿ ಕಾಂಗ್ರೆಸ್, ಸನಾತನ ಧರ್ಮಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದ ಪ್ರತಿಷ್ಠೆ: ʻಕರ್ನಾಟಕಕ್ಕೆ ತೆರಿಗೆ ಪಾಲು ವಿಷಯದಲ್ಲಿ ತಾರತಮ್ಯ ಮತ್ತು ನದಿ ನೀರಿನ ವಿವಾದಗಳಿಗೆ ಸಂಬಂಧಿಸಿದಂತೆ ಮೋದಿ ಅವರಿಂದ ಕಾಂಗ್ರೆಸ್ ಕೆಲವು ಸಮರ್ಥನೆ ನಿರೀಕ್ಷಿಸಿತ್ತು. ಆದರೆ, ಈ ಜ್ವಲಂತ ಸಮಸ್ಯೆಗಳ ಬಗ್ಗೆ ಮೋದಿ ಅವರು ಮೌನ ವಹಿಸಿರುವುದು ಮತ್ತು ಹಿಂದುತ್ವ ಕಾರ್ಡ್ ಬಳಸಿರುವುದು, ನಮಗೆ ಅವಕಾಶ ಒದಗಿಸಿದಂತಾಗಿದೆʼ ಎಂದು ಕಾಂಗ್ರೆಸ್ ಹಿರಿಯ ಕಾರ್ಯಕರ್ತಯೊಬ್ಬರು ಹೇಳಿದರು. ಕಾಂಗ್ರೆಸ್ ಮೂಲಗಳ ಪ್ರಕಾರ, ಪಕ್ಷ ಈಗ ʻಕರ್ನಾಟಕದ ಪ್ರತಿಷ್ಠೆʼ ಮತ್ತು ʻನನ್ನ ತೆರಿಗೆ, ನನ್ನ ಹಕ್ಕುʼ ಅನ್ನು ಪ್ರಮುಖ ಚುನಾವಣೆ ವಿಷಯವ ನ್ನಾಗಿ ಕೊಂಡಿದೆ. ಅಲ್ಲದೆ, ಹಿಂದುತ್ವ ಅಜೆಂಡಾವನ್ನು ಜಾತಿ ಲೆಕ್ಕಾಚಾರದಿಂದ ಎದುರಿಸಲು ಯೋಜಿಸಿದೆ.
ಪ್ರಬಲ ಗುಂಪುಗಳಿಗೆ ಟಿಕೆಟ್: ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ಹೆಚ್ಚು ಪ್ರಾತಿನಿಧ್ಯ ವಿವಾದ ಹುಟ್ಟುಹಾಕಿದೆ. ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿ (ಎಸ್) ಮೈತ್ರಿಕೂಟ ಈ ಪ್ರಬಲ ಸಮುದಾಯಗಳಿಗೆ ಅರ್ಧದಷ್ಟು ಟಿಕೆಟ್ ಹಂಚಿಕೆ ಮಾಡಿವೆ. ಕಾಂಗ್ರೆಸ್ ಐವರು ಲಿಂಗಾಯತರು ಮತ್ತು ಏಳು ಒಕ್ಕಲಿಗರನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಒಂಬತ್ತು ಲಿಂಗಾಯತರು ಮತ್ತು ಐವರು ಒಕ್ಕಲಿಗರಿಗೆ ಟಿಕೆಟ್ ನೀಡಿದೆ. ಒಕ್ಕಲಿಗರು ಮತ್ತು ಲಿಂಗಾಯತರ ಪ್ರಾತಿನಿಧ್ಯ ಶೇ.65 ಮೀರಿದೆ ಎನ್ನಲಾಗಿದೆ. ಆದರೆ, ಒಟ್ಟು ಜನಸಂಖ್ಯೆಯಲ್ಲಿ ಅವರ ಪಾಲು ಶೇ.27 ಮಾತ್ರ.
ಬಿಜೆಪಿಯಲ್ಲಿ ಅಸಮಾಧಾನ: ಅಭ್ಯರ್ಥಿಗಳ ಆಯ್ಕೆಯಲ್ಲಿ ಉಂಟಾಗಿರುವ ಅಸಮಾಧಾನದಿಂದ ಬಿಜೆಪಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ವೀರಶೈವ-ಲಿಂಗಾಯತ ಸಮುದಾಯವನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಒಕ್ಕಲಿಗ ಸಮುದಾಯ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಸೆಳೆಯಲು ಬಿಜೆಪಿ ನಡೆಸಿದ ಪ್ರಯತ್ನಗಳು ಭಾಗಶಃ ವಿಫಲವಾಗಿದ್ದು, ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಸರಿ ಪಕ್ಷವನ್ನು ಸೋಲಿಸಲು ದೃಢ ನಿರ್ಧಾರ ಮಾಡಿದ್ದಾರೆ.
ಇನ್ನು ಕೆಲವು ಬೆಳವಣಿಗೆಗಳು ಕೂಡ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿವೆ. ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮಹಿಳಾ ಮತದಾರರನ್ನು ಕೆರಳಿಸಿದ್ದಾರೆ.
ಮಠ ವಿ/ಎಸ್ ಬಿಜೆಪಿ: ಪಂಚಮಸಾಲಿ ಮಠಾಧೀಶರು(ವೀರಶೈವ-ಲಿಂಗಾಯತ ಸಮುದಾಯದ ಪ್ರಮುಖ ಮಠ) ಮಠಕ್ಕೆ ಬಿಜೆಪಿ ಅಭ್ಯರ್ಥಿಗಳಿಗೆ ಪ್ರವೇಶಾವಕಾಶ ನಿರ್ಬಂಧಿಸಿದ್ದಾರೆ. ಪಕ್ಷವು ಸಮುದಾಯವನ್ನು ಮತ ಬ್ಯಾಂಕ್ ಆಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಫೆಡರಲ್ ಜೊತೆ ಮಾತನಾಡಿದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರು ಪೀಠದ ಮುಖ್ಯಸ್ಥ ವಚನಾನಂದ ಸ್ವಾಮಿ, ಮಠಕ್ಕೆ ಬಿಜೆಪಿ ಅಭ್ಯರ್ಥಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದಾಗಿ ಹೇಳಿದರು.
ಬಿಜೆಪಿ ಸಂಸದ ರಾಜೀನಾಮೆ: ಮತ್ತೊಂದೆಡೆ ವೀರಶೈವ ಲಿಂಗಾಯತ ಸಮುದಾಯವನ್ನು ಒಲಿಸಿಕೊಳ್ಳಲು ಸಿದ್ದರಾಮಯ್ಯ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಸಿದ್ದರಾಮಯ್ಯ ಘೋಷಿಸಿರುವುದು ಸಂತಸ ತಂದಿದೆ. ಈ ಹಿನ್ನೆಲೆಯಲ್ಲಿ 160ಕ್ಕೂ ಹೆಚ್ಚು ಲಿಂಗಾಯತ ಮಠಾಧೀಶರು ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಕೊಪ್ಪಳದ ಬಿಜೆಪಿ ಸಂಸದ ಕರಡಿ ಸಂಗಣ್ಣ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಪಂಚಮಸಾಲಿ ಉಪ ಪಂಗಡದ ಪ್ರಬಲ ನಾಯಕ ಅವರು.
ಒಕ್ಕಲಿಗರ ಓಲೈಕೆ: ಒಕ್ಕಲಿಗರನ್ನುಓಲೈಸಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಕಲ ಸಂಪನ್ಮೂಲಗಳನ್ನು ಬಳಸಿಕೊಂಡಿದ್ದಾರೆ. 14 ಲೋಕಸಭೆ ಸ್ಥಾನಗಳ ಪೈಕಿ 11 ಕಡೆಗಳಲ್ಲಿ ಒಕ್ಕಲಿಗ ಅಭ್ಯರ್ಥಿಗಳು ಇತರೆ ಸಮುದಾಯದ ಅಭ್ಯರ್ಥಿಗಳ ವಿರುದ್ಧ ಸೆಣಸುತ್ತಿದ್ದಾರೆ. ಒಕ್ಕಲಿಗರ ನಾಯಕತ್ವಕ್ಕೆ ನಡೆಯುತ್ತಿರುವ ಹೋರಾಟವನ್ನು ಗಮನಿಸಿದರೆ, ಶಿವಕುಮಾರ್ ಅವರು ತಮ್ಮ ಎದುರಾಳಿ ಕುಮಾರಸ್ವಾಮಿ ವಿರುದ್ಧ ಮೇಲುಗೈ ಸಾಧಿಸುತ್ತಿದ್ದಾರೆ. ಆದಿಚುಂಚನಗಿರಿ ಮಠದ ಮುಖ್ಯಸ್ಥ ನಿರ್ಮಲಾನಂದ ಸ್ವಾಮಿ ಅವರ ದೂರವಾಣಿ ಕದ್ದಾಲಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಶಿವಕುಮಾರ್, ಕುಮಾರಸ್ವಾಮಿ ಅವರನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ.
ದಲಿತರ ಓಲೈಕೆ: ರಾಜ್ಯದಲ್ಲಿ ದೇವರಾಜ ಅರಸು ಅವರ ನಂತರ ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕ ಎನ್ನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ಗುಂಪುಗಳು, ಅಲ್ಪಸಂಖ್ಯಾತರು ಮತ್ತು ದಲಿತರ ಮನವೊಲಿಸಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ. ಹಿರಿಯ ದಲಿತ ನಾಯಕ ವಿ. ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ ಬಗ್ಗೆ ತಮ್ಮ ನಿಲುವು ಮೃದುಗೊಳಿಸಿದ್ದಾರೆ. ಅವರು ಮೈಸೂರಿನಲ್ಲಿ ನಡೆದ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಏತನ್ಮಧ್ಯೆ, ಕಾಂಗ್ರೆಸ್ಸಿನ ಆಂತರಿಕ ಸಮೀಕ್ಷೆ ಪ್ರಕಾರ, ದಲಿತ ಮತಗಳು ಏಳು ಮೀಸಲು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಉತ್ತೇಜನ ನೀಡಬಹುದು.
ʻಕರ್ನಾಟಕದಲ್ಲಿ ದಲಿತ ಕ್ರೋಡೀಕರಣ ನಡೆಯುತ್ತಿರುವಂತೆ ತೋರುತ್ತಿದೆ. ಇದು ಕಾಂಗ್ರೆಸ್‌ಗೆ ಬಲ ನೀಡುತ್ತದೆ,ʼ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು. ರಾಯಚೂರು ಮತ್ತು ಬಳ್ಳಾರಿ ಅಲ್ಲದೆ ಕಲಬುರಗಿ, ವಿಜಯಪುರ, ಚಿತ್ರದುರ್ಗ, ಕೋಲಾರ ಮತ್ತು ಚಾಮರಾಜನಗರದಲ್ಲಿ ಇದು ಕಾಂಗ್ರೆಸ್ ಪರವಾಗಿ ಕೆಲಸ ಮಾಡಬಹುದು ಎಂದು ರಾಜ್ಯಸಭೆ ಮಾಜಿ ಸದಸ್ಯ ಎಲ್ ಹನುಮಂತಯ್ಯ ಫೆಡರಲ್‌ಗೆ ತಿಳಿಸಿದರು. ಬಲಗೈ ದಲಿತರು ಕಾಂಗ್ರೆಸ್‌ಗೆ ಮತ ಹಾಕಿದರೆ, ಎಡಗೈ ಸಮುದಾಯ ಬಿಜೆಪಿಯನ್ನು ಆಯ್ಕೆ ಮಾಡುತ್ತದೆ ಎಂದು ಬಿಜೆಪಿಯ ಒಂದು ಗುಂಪು ವಾದಿಸುತ್ತದೆ. ಆದರೆ, ಈ ಬಾರಿ ದಲಿತರ ಮತಗಳು ಕಾಂಗ್ರೆಸ್ ಪಾಲಾಗಲಿವೆ ಎಂಬುದು ಕೆಲವು ದಲಿತ ಮುಖಂಡರ ಅಭಿಪ್ರಾಯ.
ಬಿಲ್ಲವ ತೊಂದರೆ: ಮೋದಿ ಅವರ ಭೇಟಿ ವೇಳೆ ಮಂಗಳೂರಿನಲ್ಲಿ ಬಿಜೆಪಿ ಬೃಹತ್ ಸಮಾವೇಶ ಆಯೋಜಿಸಿತ್ತು. ಅದನ್ನು ರದ್ದುಪಡಿಸಿ ಮೋದಿ ಮೈಸೂರಿನಲ್ಲಿ ರೋಡ್ ಶೋ ನಡೆಸಿದರು. ರಾಜಕೀಯ ಪ್ರಾತಿನಿಧ್ಯವನ್ನು ಬಯಸುತ್ತಿರುವ ಬಿಲ್ಲವ ಸಮುದಾಯವನ್ನು ಸಮಾಧಾನಪಡಿಸಲು ಈ ಬದಲಾವಣೆ ಆಗಿದೆ ಎಂದು ಬಿಜೆಪಿಯ ಮೂಲಗಳು ಹೇಳುತ್ತವೆ. ʻಬಿಜೆಪಿ ಭರವಸೆ ಈಡೇರಿಸಿಲ್ಲ ಮತ್ತು ಬಿಲ್ಲವರನ್ನು ಲಘುವಾಗಿ ಪರಿಗಣಿಸಲಾಗಿದೆ ಎಂಬ ಭಾವನೆ ಕರಾವಳಿಯ ಬಿಲ್ಲವರ ನಿಷ್ಠೆಯಲ್ಲಿ ಸಂಭಾವ್ಯ ಬದಲಾವಣೆಗೆ ಕಾರಣವಾಗುತ್ತಿದೆʼ ಎಂದು ಬಿಲ್ಲವ ಸಮುದಾಯದ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳುತ್ತಾರೆ. ಬಿಲ್ಲವರ ಮನ ಗೆಲ್ಲಲು ಬಿಜೆಪಿ ಪ್ರಯತ್ನಿಸಿದೆ. ಆದರೆ, ಅಸಮಾಧಾನವನ್ನು ಶಮನಗೊಳಿಸಲು ವಿಫಲವಾಗಿದೆ ಎಂದು ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಹಿಂದುತ್ವ vs ಜಾತಿ: ಕಾಂಗ್ರೆಸ್ ಆರಂಭದಲ್ಲಿ ಜಾತಿ ಗಣತಿಯನ್ನು ಬಿಡುಗಡೆ ಮಾಡುವ ಮೂಲಕ ಮತ್ತು ಮೀಸಲು ಘೋಷಿಸುವ ಮೂಲಕ ಬಿಜೆಪಿಯ ಹಿಂದುತ್ವ ಕಾರ್ಡ್ ಎದುರಿಸಲು ಬಯಸಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶವನ್ನು ಪರಿಗಣಿಸಿ, ಗ್ಯಾರಂಟಿ ಗಳು ಮತ್ತು ತೆರಿಗೆ ಹಂಚಿಕೆಯಲ್ಲಿ ತಾರತಮ್ಯವನ್ನು ಪ್ರಶ್ನಿಸುವ ಮೂಲಕ ಬಿಜೆಪಿ ವಿರುದ್ಧ ಹೋರಾಡಲು ನಿರ್ಧರಿಸಿತು. ಆದರೆ, ಮೋದಿ ಯವರ ಹಿಂದುತ್ವ ಮತ್ತು ರಾಮಮಂದಿರ ನಿರೂಪಣೆಯನ್ನು ಕಾಂಗ್ರೆಸ್ ಜಾತಿ ನಿರೂಪಣೆಯೊಂದಿಗೆ ಎದುರಿಸಲು ನಿರ್ಧರಿಸಿತು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.
28 ಲೋಕಸಭೆ ಕ್ಷೇತ್ರಗಳ ಪೈಕಿ ಕನಿಷ್ಠ 17 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌ಗೆ ಇದೆಲ್ಲದರಿಂದ ಲಾಭವಾಗಿದೆ.