Loksabha Election 2024 | ಅಭ್ಯರ್ಥಿಗಳ ಆಯ್ಕೆ ಸಂಕಷ್ಟದಲ್ಲಿ ಸಿಲುಕಿದ ಬಿಜೆಪಿ

ಕಾಂಗ್ರೆಸ್ 28 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ವಿರೋಧ ಪಕ್ಷವಾದ ಬಿಜೆಪಿಗೆ ಪಟ್ಟಿ ಪ್ರಕಟಣೆಯೇ ಒಂದು ರೀತಿಯಲ್ಲಿ ಸವಾಲಾಗಿ ಪರಿಣಮಿಸಿದೆ.

Update: 2024-03-12 02:00 GMT
ಟಿಕೆಟ್‌ ಹಂಚಿಕೆತಯಲ್ಲಿ ಬಿಜೆಪಿ ಸಂಕಷ್ಟಕ್ಕೆ ಸಿಲುಕಿದೆ.

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆಗೂ ಮುನ್ನವೇ ಕರ್ನಾಟಕದಲ್ಲಿ ಬಿಜೆಪಿ ಹಾಲಿ ಸಂಸದರ ವಿರುದ್ಧ ಪ್ರತಿರೋಧ ಹಾಗೂ ಟಿಕೆಟ್ ಆಕಾಂಕ್ಷಿಗಳ ನಡುವೆ ಪೈಪೋಟಿ- ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.

ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ 28 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ವಿರೋಧ ಪಕ್ಷವಾದ ಬಿಜೆಪಿಗೆ ಒಂದು ರೀತಿಯಲ್ಲಿ ಸವಾಲಾಗಿ ಪರಿಣಮಿಸಿದೆ. ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಪ್ರತಿಪಕ್ಷ ಬಿಜೆಪಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಸಮಸ್ಯೆಗಳೊಂದಿಗೆ ಸೆಣೆಸಾಡುತ್ತಿದೆ. ಕಾರಣ ಸರಳ; ಇರುವ ಕ್ಷೇತ್ರಗಳು ಕೇವಲ 28, ಆದರೆ ಟಿಕೆಟ್‌ ಆಕಾಂಕ್ಷಿಗಳು ನೂರಾರು!

ಚುನಾವಣೆ ಗೆಲ್ಲಲು ಪ್ರಧಾನಿ ಮೋದಿ ವರ್ಚಸ್ಸಷ್ಟೇ ಸಾಕು!

ಪ್ರಧಾನಿ ಮೋದಿಯವರ ನಾಮಬಲದ ಮೇಲೆಯೇ ಚುನಾವಣೆ ಗೆದ್ದುಬಿಡಬಹುದು ಎಂದು ನಂಬಿರುವ ಬಿಜೆಪಿಯ ಪ್ರತಿಯೊಬ್ಬ ನಾಯಕರೂ ತಮ್ಮ ನೆಚ್ಚಿನ ಕ್ಷೇತ್ರಗಳಿಂದ ಸ್ಪರ್ಧಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿಯೇ ಕರ್ನಾಟಕದಲ್ಲಿ ಬಿಜೆಪಿಯು 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 10 ಕಡೆ ಭಾರೀ ಪೈಪೋಟಿ ಎದುರಿಸುತ್ತಿದೆ. ಈ ಪೈಕಿ ಬಹಳಷ್ಟು ಮಂದಿ ಹಾಲಿ ಸಂಸದರಾಗಿದ್ದು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಅವರು ಹಣಾಹಣಿ ಪ್ರಯತ್ನ ನಡೆಸುತ್ತಿದ್ದಾರೆ. ಟಿಕೆಟ್‌ ಗಿಟ್ಟಿಸಿಕೊಳ್ಳಲು ರಾಜ್ಯ ಹಾಗೂ ಕೇಂದ್ರ ನಾಯಕರ ಮೊರೆ ಹೋಗುತ್ತಿದ್ದಾರೆ.

ಬಿಸಿ ತುಪ್ಪದಂತಾಗಿರುವ ಕ್ಷೇತ್ರಗಳು

ಬೀದರ್, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ಹಾವೇರಿ, ಮೈಸೂರು, ಧಾರವಾಡ, ಬೆಂಗಳೂರು ಉತ್ತರ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತು ತುಮಕೂರು ಕ್ಷೇತ್ರಗಳ ಸದ್ಯ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿವೆ.

ಈ ಬಾರಿ ಟಿಕೆಟ್‌ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾದ ಬಿ.ಎಸ್.‌ ಯಡಿಯೂರಪ್ಪ ಅಭ್ಯರ್ಥಿಗಳ ಮನವೊಲಿಸಲು, ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಪಕ್ಷದೊಳಗಿನ ಬಣ ರಾಜಕಾರಣ ಕೂಡ ಮುನ್ನೆಲೆಗೆ ಬಂದಿದ್ದು, ಪಕ್ಷದ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಶೋಭಾ ಕರಂದ್ಲಾಜೆ ವಿರುದ್ಧ ‘ಗೋ ಬ್ಯಾಕ್’ ಅಭಿಯಾನ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದೆ ಹಾಗೂ ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ‘ಗೋ ಬ್ಯಾಕ್’ ಅಭಿಯಾನ ಆರಂಭವಾಗಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮುಜುಗರವಾಗುವ ಸ್ಥಿತಿ ನಿರ್ಮಾಣವಾಗಿದೆ.

ಪಕ್ಷದ ಮುಖಂಡರು ಎಷ್ಟೇ ಪ್ರಯತ್ನ ಪಟ್ಟರೂ ಶೋಭಾ ಕರಂದ್ಲಾಜೆ ವಿರುದ್ಧದ ಅಸಮಾಧಾನ ಶಮನಗೊಳಿಸಲು ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ಶೋಭಾ ವಿರುದ್ಧದ ಧ್ವನಿ ತೀವ್ರವಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ಪ್ರತಿಭಟನೆಯ ಕಾವು ಏರುತ್ತಿದೆ.

ʼದಿ ಫೆಡರಲ್ ಕರ್ನಾಟಕʼ ಈಗಾಗಲೇ ವರದಿ ಮಾಡಿದಂತೆ, ಹಿರಿಯ ನಾಯಕ ಮತ್ತು ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಈ ಕ್ಷೇತ್ರದಿಂದ ಸ್ಪರ್ಧಾಕಾಂಕ್ಷಿಯಾಗಿದ್ದಾರೆ. ಆದರೆ, ಮೂಲಗಳ ಪ್ರಕಾರ, ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಅವರ ಬೆಂಬಲವನ್ನು ಹೊಂದಿರುವ ಶೋಭಾ ಕರಂದ್ಲಾಜೆ ಈ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವ ವಿಶ್ವಾಸದಲ್ಲಿದ್ದಾರೆ.

ಬೆಂಗಳೂರು ಉತ್ತರಕ್ಕೆ ಕರಂದ್ಲಾಜೆ - ಸದಾನಂದ ಗೌಡ ನಡುವೆ ಪೈಪೋಟಿ

ಕುತೂಹಲಕಾರಿ ಸಂಗತಿಯೆಂದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಕಣಕ್ಕಿಳಿಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಹಿಂದೆ ಚುನಾವಣಾ ರಾಜಕೀಯ ತೊರೆಯುವ ಇಚ್ಛೆ ವ್ಯಕ್ತಪಡಿಸಿದ್ದ ಈ ಕ್ಷೇತ್ರದ ಹಾಲಿ ಸಂಸದ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಿದ್ದು, “ಮತ್ತೆ ಸ್ಪರ್ಧಿಸುವ ಎಲ್ಲಾ ಅರ್ಹತೆ ತನಗೆ ಇರುವುದಾಗಿಯೂ ತಾವು ಮತ್ತೆ ಸ್ಪರ್ಧಿಸುವ ಇಚ್ಛೆ ಉಳ್ಳವರಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ. “ನಾನು ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಮತ್ತೆ ಸ್ಪರ್ಧಿಸುವ ವಿಶ್ವಾಸವಿದೆ” ಎಂದು ಅವರು ಹೇಳಿಕೊಂಡಿದ್ದಾರೆ.

ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿದಾಗ ನಡೆಯುತ್ತಿರುವ ಬೆಳವಣಿಗೆಯನ್ನು ವಿವರಿಸಿದ್ದು ಹೀಗೆ; “ನನಗೆ ಲೋಕಸಭೆ ಟಿಕೆಟ್ ವಂಚಿಸಲು ಷಡ್ಯಂತ್ರ ನಡೆಯುತ್ತಿದೆ. ಕೆಲವರು ನಾನು ಅಭ್ಯರ್ಥಿಯಾಗುವುದನ್ನು ವಿರೋಧಿಸಿ ಸಂಚು ಮಾಡುತ್ತಿದ್ದಾರೆ. ಪಕ್ಷಕ್ಕೆ ಮತ್ತು ಬಿಜೆಪಿ ಸರ್ಕಾರಕ್ಕೆ ನಾನು ಸಲ್ಲಿಸಿದ ಸೇವೆಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಕ್ಷದ ನಾಯಕತ್ವವು ಮಾಹಿತಿಯನ್ನು ಸಂಗ್ರಹಿಸುತ್ತಿದೆ".

ಪ್ರತಾಪ್ ಸಿಂಹ ಸ್ಥಾನ ವಂಚಿತರಾಗುತ್ತಾರೆಯೇ? ಅವರು ಎರಡು ಬಾರಿ ಪ್ರತಿನಿಧಿಸಿರುವ ಕ್ಷೇತ್ರ ಮೈಸೂರು ರಾಜಮನೆತನದ ಪಾಲಾಗುತ್ತದೆಯೇ? ಎಂಬ ಪ್ರಶ್ನೆ ಮೈಸೂರು-ಕೊಡಗು ಮತದಾರರನ್ನು ಕಾಡುತ್ತಿದೆ. ಮೈಸೂರು-ಕೊಡಗು ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿರುವ ಹಾಲಿ ಸಂಸದ ಪ್ರತಾಪ ಸಿಂಹ ಅವರು ಈ ಬಾರಿ ಅವಕಾಶವಂಚಿತರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಬಿಜೆಪಿ ಮೂಲಗಳೇ ಹೇಳುತ್ತಿವೆ. ಅವರಿಂದ ತೆರವಾಗುವ ಸ್ಥಾನವನ್ನು ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ತುಂಬುವ ಸಾಧ್ಯತೆಗಳಿವೆ.

ರಾಜಮನೆತನದವರು ಲೋಕಸಭೆಗೆ ತೆರಳಿದರೆ, ರಾಜ್ಯಕ್ಕೆ ಭೂಷಣ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಆದರೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಅವರು ಪ್ರತಾಪ್‌ ಸಿಂಹ ಅವರ ಬೆಂಬಲಕ್ಕೆ ನಿಂತಿದ್ದು, ಪ್ರತಾಪ್‌ ಸಿಂಹ ಅವರಿಗೆ ಶಕ್ತಿ ಬಂದಂತಾಗಿದೆ. ಪ್ರಹ್ಲಾದ್ ಜೋಶಿ ಅವರು ಪ್ರತಾಪ್ ಸಿಂಹ ಪರ ಹೋರಾಟ ನಡೆಸುತ್ತಿದ್ದರೆ, ಸ್ವತಃ ಧಾರವಾಡದಿಂದ ಅವರಿಗೇ ಟಿಕೆಟ್ ಸಿಗುವ ವಿಶ್ವಾಸವಿಲ್ಲ ಎಂದು ಬಿಜೆಪಿಯ ಮೂಲಗಳು ಹೇಳುತ್ತವೆ. ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಜೋಷಿ ಅವರಿಗೆ ಪ್ರತಿಸ್ಪರ್ಧಿಯಾಗಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯನ್ನು ಪಕ್ಷದ ಮೂಲಗಳು ತಳ್ಳಿಹಾಕುತ್ತಿಲ್ಲ.

ಹಾವೇರಿ; ಹಲವಾರು ಆಕಾಂಕ್ಷಿಗಳು

ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಹಾವೇರಿ, ಇದೀಗ ಲೋಕಸಭಾ ಚುನವಾಣಾ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಈ ಕ್ಷೇತ್ರದಿಂದ ತಮ್ಮ ಪುತ್ರ ಕೆ ಇ ಕಾಂತೇಶ್‌ಗೆ ಟಿಕೆಟ್ ನೀಡುವಂತೆ ಪಕ್ಷದ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಈ ಪ್ರತಿಷ್ಠಿತ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ ಹೆಸರೂ ಸದ್ದು ಮಾಡುತ್ತಿದೆ ಎಂದು ಬಿಜೆಪಿ ಮೂಲಗಳು ಬಹಿರಂಗಪಡಿಸಿವೆ. ಬಿಎಸ್ ಯಡಿಯೂರಪ್ಪ ಅವರು ಕೆಎಸ್ ಈಶ್ವರಪ್ಪ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ತಮ್ಮ ಪುತ್ರ ಕೆ ಇ ಕಾಂತೇಶ್‌ಗೆ ಟಿಕೆಟ್ ನೀಡುವ ಅಗತ್ಯತೆಯ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಕೆ ಎಸ್ ಈಶ್ವರಪ್ಪ ಅವರು ತಮ್ಮ ಕೊನೆಯ ದೆಹಲಿ ಭೇಟಿಯ ಸಮಯದಲ್ಲಿ ಹೈಕಮಾಂಡ್ ಮುಂದೆ ತಮ್ಮ ವಾದವನ್ನು ಮಂಡಿಸಿದ್ದರು. ಆದರೆ, ಅವರು ಈ ಪ್ರಸ್ತಾಪವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಹಾವೇರಿ ಕ್ಷೇತ್ರದಿಂದ ಟಿಕೆಟ್ ಬಯಸಿ ‘ಸ್ಥಳೀಯ’ ಅಸ್ಮಿತೆಯ ಕಾರ್ಡ್‌ ಚಲಾಯಿಸಿದ್ದಾರೆ.

ಅನಂತ ಕುಮಾರ್‌ ಹೆಗಡೆ ಕಟು ಹಿಂದುತ್ವದ ಪ್ರತಿಪಾದಕ

ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯ ಕಾರಣದಿಂದ 'ನಿಷ್ಕ್ರಿಯ'ರಾಗಿದ್ದ ಉತ್ತರ ಕನ್ನಡದ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತೆ ಕಾರ್ಯಪ್ರವೃತ್ತರಾಗಿದ್ದಾರೆ. ಬಿಜೆಪಿಯ ಕಟು ಹಿಂದುತ್ವ ಪ್ರತಿಪಾದಕ ಎಂದು ಜನಪ್ರಿಯವಾಗಿರುವ ಅನಂತ್ ಕುಮಾರ್ ಹೆಗಡೆ ಜನರ ಮತೀಯ ಭಾವನೆಗಳನ್ನು ಕೆರಳಿಸುವ ಮೂಲಕ ಪಕ್ಷದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ, ಇದು ರಾಜ್ಯದ ಹಿಂದೂ ಕಟ್ಟರ್ ವಾದಿಗಳಿಗೆ ಹೆಚ್ಚಾಗಿ ಮೆಚ್ಚಿಗೆಯಾಗುತ್ತಿದೆ.

"ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮೂರನೇ ಎರಡರಷ್ಟು ಬಹುಮತವನ್ನು ಖಚಿತಪಡಿಸಿ, ಹಿಂದುತ್ವ ಸಮಾಜದ ಪರವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯ" ಎಂದು ಹೇಳಿ ಮತ್ತೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಆದರೆ ಅದನ್ನು ಅವರು ಗರ್ವದಿಂದಲೇ ಸಮರ್ಥಿಸಿಕೊಂಡಿದ್ದಾರೆ. ಈ ನಡುವೆ ಈ ಕ್ಷೇತ್ರದಿಂದ ಅನಂತ ಕುಮಾರ್‌ ಹೆಗಡೆಯಂತೆಯೇ ಉಗ್ರ ಹಿಂದುತ್ವದ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಕಣಕ್ಕಿಳಿಸುವ ಕುರಿತು ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಕರ್ನಾಟಕದ ಮಾಜಿ ಸ್ಪೀಕರ್ ಮತ್ತು ಬಿಜೆಪಿಯ ಹಿರಿಯ ನಾಯಕ ವಿಶ್ವೇಶ ಹೆಗಡೆ ಕಾಗೇರಿ ಕೂಡ ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು, ಅವರಿಗೆ ಪಕ್ಷದ ಹಿರಿಯ ನಾಯಕರ ಆಶೀರ್ವಾದವಿದೆ ಎಂದು ಹೇಳಿಕೊಂಡಿದ್ದಾರೆ.

ವಿ ಸೋಮಣ್ಣಗೆ ವಿರೋಧ

ಹೊರಗಿನವರಿಗೆ ಟಿಕೆಟ್ ನೀಡಬಾರದು ಎಂದು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ನಡೆದ ‘ಗೋ ಬ್ಯಾಕ್’ ಶೋಭಾ ಅಭಿಯಾನದ ನಂತರ ತುಮಕೂರಿನಲ್ಲಿ ಪಕ್ಷಕ್ಕೆ ಈಗ ಮುಜುಗರ ಉಂಟುಮಾಡುವ ಬೆಳವಣಿಗೆಗಳು ನಡೆಯುತ್ತಿವೆ. ಮಾಜಿ ಸಚಿವ ವಿ.ಸೋಮಣ್ಣ ಆಕಾಂಕ್ಷಿಯಾಗಿದ್ದಾರೆ. ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಜೆಸಿ ಮಾಧುಸ್ವಾಮಿಗೆ ಟಿಕೆಟ್ ನೀಡುವಂತೆ ನೂರಾರು ಕಾರ್ಯಕರ್ತರು ಪಕ್ಷದ ಮುಖಂಡರ ವಿರುದ್ಧ ಪ್ರತಿಭಟನೆ ನಡೆಸಿದರು.

ಖೂಬಾಗೆ ಈ ಬಾರಿ ಟಿಕೆಟ್ ಸಿಗುತ್ತಾ?

ಬೀದರ್ ಕ್ಷೇತ್ರದಲ್ಲಿ ಹಾಲಿ ಸಂಸದ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಔರಾದ್ ಶಾಸಕ ಪ್ರಭು ಚೌಹಾಣ್ ಅವರು ಖೂಬಾ ಅವರಿಗೆ ಟಿಕೆಟ್‌ ನೀಡುವುದನ್ನು ವಿರೋಧಿಸುತ್ತಿದ್ದಾರೆ. ಬೀದರ್ ಪ್ರತಿನಿಧಿಸಲು ಹೊಸ ಮುಖವನ್ನು ಹುಡುಕಲು ಪಕ್ಷಕ್ಕೆ ಮನವಿ ಮಾಡಿದ್ದಾರೆ.

ಅನಾರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಹಾಲಿ ಸಂಸದ ರಮೇಶ್‌ ಜಿಗಜಿಣಗಿ ಅವರಿಗೆ ಈ ಬಾರಿ ಟಿಕೆಟ್‌ ದೊರೆಯಲಾರದು ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ತಾವು ಆರೋಗ್ಯವಾಗಿರುವುದಾಗಿಯೂ ಮತ್ತು ತಮಗೆ ಎಲ್ಲರೂ ಭಾವಿಸಿರುವಂತೆ ಹೃದಯಾಘಾತವಾಗಿಲ್ಲ. ಇದು ತಮ್ಮ ವಿರುದ್ಧ ನಡೆಯುತ್ತಿರುವ ಷಢ್ಯಂತ್ರ ಎಂದು ಹೇಳಿರುವ ಜಿಗಜಿಣಗಿ, ತಾವು ವಿಜಯಪುರದಿಂದ ಸ್ಪರ್ಧೆಗೆ ಇಳಿಯುವುದಾಗಿ ಹೇಳಿಕೊಂಡಿದ್ದಾರೆ.

ವಿಜಯಪುರ ಕ್ಷೇತ್ರದಲ್ಲಿ ಜಿಗಜಿಣಗಿ ಅವರನ್ನು ಕೈಬಿಟ್ಟರೆ ಮಾಜಿ ಸಚಿವ, ಹಿರಿಯ ಮುಖಂಡ ಗೋವಿಂದ ಕಾರಜೋಳ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಹೇಳಬಹುದು ಎಂದು ಊಹಿಸಲಾಗಿದೆ. ವಿಜಯಪುರದಿಂದ ಜಿಗಜಿಣಗಿ ಅವರಿಗೆ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

"ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿಗಳ ಪರ ಜನಪರ ಅಲೆಯನ್ನು ಲೋಕಸಭಾ ಚುನಾವಣೆಗೆ ಪೂರಕವಾಗಿ ತಿರುಗಿಸುವ ಕಾಂಗ್ರೆಸ್ ಚುನಾವಣಾ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ಎಚ್ಚರಿಕೆಯ ಮಾರ್ಗವನ್ನು ಆರಿಸಿಕೊಂಡಿದೆ ಮತ್ತು ತನ್ನ ಚುನಾವಣಾ ಭದ್ರಕೋಟೆಗಳನ್ನು ಬಲಪಡಿಸಲು ಹಾಲಿ ಸಂಸದರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ, ಈ ನಂಬಿಕೆಯ ಹೊರತಾಗಿಯೂ ಸಿ ಟಿ ರವಿ, ಶೋಭಾ ಕರಂದ್ಲಾಜೆ, ಸದಾನಂದ ಗೌಡ, ವಿ ಸೋಮಣ್ಣ, ಪ್ರತಾಪ್ ಸಿಂಹ, ಅನಂತ್ ಕುಮಾರ್ ಹೆಗಡೆ, ಭಗವಂತ ಖೂಬಾ, ಪ್ರಹ್ಲಾದ್ ಜೋಶಿ ಮುಂತಾದವರು ತಮ್ಮ ಭವಿಷ್ಯದ ನಿರೀಕ್ಷೆಯಲ್ಲಿದ್ದಾರೆ.

Tags:    

Similar News