Loksabha Election 2024: ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನ

Update: 2024-04-04 04:59 GMT

ರಾಜ್ಯದಲ್ಲಿ ಲೋಕಸಭೆ ಚುನಾವಣೆ ಅಖಾಡ ರಂಗೇರಿದ್ದು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಏಪ್ರಿಲ್ 26ಕ್ಕೆ ರಾಜ್ಯದ 14 ಕ್ಷೇತ್ರಗಳಲ್ಲಿ ನಡೆಯಲಿರುವ ಮೊದಲನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ (ಏ 4) ಕಡೆಯ ದಿನವಾದ್ದರಿಂದ ಅಖಾಡಕ್ಕಿಳಿಯುವ ಎಲ್ಲಾ ಅಭ್ಯರ್ಥಿಗಳು ಕೊನೆ ದಿನದಂದು ನಾಮಪತ್ರ ಸಲ್ಲಿಕೆಗೆ ಮುಗಿಬೀಳಲಿದ್ದಾರೆ.

ಉಮೇದುವಾರಿಕೆ ಸಲ್ಲಿಕೆಗೆ ಕೊನೆಯ ದಿನಕ್ಕೂ ಮುನ್ನ ಬುಧವಾರ ಬಿಜೆಪಿ, ಕಾಂಗ್ರೆಸ್ನ ಘಟಾನುಘಟಿ ಅಭ್ಯರ್ಥಿಗಳು ಸೇರಿದಂತೆ 87 ಅಭ್ಯರ್ಥಿಗಳು 116 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ನಿಖಿಲ್ ಕುಮಾರಸ್ವಾಮಿ, ಯಧುವೀರ್ ಒಡೆಯರ್ ಸೇರಿದಂತೆ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಜೆ.ಡಿಎಸ್ ಹಾಗೂ ಬಿಜೆಪಿ ಮುಖಂಡರುಗಳು ಸಾಥ್ ನೀಡಲಿದ್ದಾರೆ.

ಬುಧವಾರ ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದು, ಇವತ್ತು ಕುಮಾರಸ್ವಾಮಿ ನಾಮಪತ್ರ ಸಲ್ಲಿಗೆ ಸಾಥ್ ನೀಡ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.

ಬೆಂಗಳೂರು ಗ್ರಾಮಾಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್, ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಬಳಿಕ ಬೃಹತ್ ಮೈತ್ರಿ ಸಮಾವೇಶ ನಡೆಯಲಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ. ಕೆ ಸುಧಾಕರ್ ನಾಮಪತ್ರ ಸಲ್ಲಿಸಲಿದ್ದಾರೆ.

ಗುರುವಾರ ಕೋಲಾರದಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವ ಕಾರ್ಯಕ್ರಮ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸುತ್ತಲೂ 200 ಮೀಟರ್ ದೂರದಲ್ಲೇ ಪ್ರವೇಶ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಬೆಳಗ್ಗೆ 11:30 ಕ್ಕೆ ನಾಮಪತ್ರ ಸಲ್ಲಿಸಲಿದ್ದು, ಮಧ್ಯಾಹ್ನ 12 ಕ್ಕೆ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಾಥ್ ನೀಡಲಿದ್ದಾರೆ. ಜೆಡಿಎಸ್ ಅಭ್ಯರ್ಥಿಗೆ ನಿಖಿಲ್ ಕುಮಾರಸ್ವಾಮಿ, ಅರವಿಂದ ಲಿಂಬಾವಳಿ, ಛಲವಾದಿ ನಾರಾಯಣಸ್ವಾಮಿ ಸಾಥ್ ನೀಡಲಿದ್ದಾರೆ.

Tags:    

Similar News