HPPL Project | ಹೊನ್ನಾವರ ಬಂದರು ರಸ್ತೆಗೆ ಸರ್ವೆ: ಭುಗಿಲೆದ್ದ ಮೀನುಗಾರರ ಆಕ್ರೋಶ, ಹಲವರ ಬಂಧನ

ಬಂದರಿಗೆ ಸಂಪರ್ಕ ರಸ್ತೆ ನಿರ್ಮಿಸುವ ಸಂಬಂಧ ನಡೆಯುತ್ತಿದ್ದ ಸರ್ವೆ ಕಾರ್ಯಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ ಶಾಲಾ ಮಕ್ಕಳೊಂದಿಗೆ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.;

Update: 2025-02-26 10:07 GMT
ಹೊನ್ನಾವರದ ಕಾಸರಕೋಡು ಗ್ರಾಮದಲ್ಲಿ ಬಂದರು ಯೋಜನೆ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿ ಬಂದರು ಹಾಗೂ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಸ್ಥಳೀಯರಿಂದ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದೆ. ಮಂಗಳವಾರ ಬಂದರು ಸಂಪರ್ಕ ರಸ್ತೆ ನಿರ್ಮಾಣ ಸಂಬಂಧ ಸರ್ವೆಗೆ ಆಗಮಿಸಿದ್ದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ.

ಸರ್ವೆ ಕಾರ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಅವರು ನಿಷೇಧಾಜ್ಞೆ ಜಾರಿ ಮಾಡಿದ್ದರೂ  ಪ್ರತಿಭಟನೆ ನಡೆಸಿದ ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಹೊನ್ನಾವರ ಬಂದರು ನಿರ್ಮಾಣದಿಂದ ಸ್ಥಳೀಯ ಮೀನುಗಾರರಿಗೆ ಎದುರಾಗುವ ಸಮಸ್ಯೆಗಳ ಕುರಿತು 'ದ ಫೆಡರಲ್‌ ಕರ್ನಾಟಕ' 2024ಮಾರ್ಚ್‌ ತಿಂಗಳಲ್ಲಿ ಸರಣಿ ವರದಿ ಪ್ರಕಟಿಸಿತ್ತು.

ರಾಷ್ಟ್ರೀಯ ಹೆದ್ದಾರಿ 66ರ ಸಮೀಪವಿರುವ ಹಿರೇಮಠ ಸ್ಮಶಾನದಿಂದ ಕಾಸರಕೋಡ ಗ್ರಾಮದಲ್ಲಿನ ಸಮುದ್ರದವರೆಗೆ ಇರುವ ರಸ್ತೆಯನ್ನು ಅಭಿವೃದ್ಧಿಪಡಿಸಿ ಬಂದರು ಅಭಿವೃದ್ಧಿ ಯೋಜನಾ ಸ್ಥಳಕ್ಕೆ ಸಂಪರ್ಕ ಕಲ್ಪಿಸಲು ಸರ್ವೆ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಫೆ. 25ರಂದು ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಬಿಎನ್‌ಎಸ್‌ ಕಾಯ್ದೆ 2023 ರ ಕಲಂ 163 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರು. 

ಹೊನ್ನಾವರ ಬಂದರು ಯೋಜನೆ ವಿರೋಧಿಸಿ ಸಮುದ್ರಕ್ಕೆ ಇಳಿದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು

ಬಂದರಿಗೆ ಸಂಪರ್ಕ ರಸ್ತೆ ನಿರ್ಮಿಸುವ ಸಂಬಂಧ ನಡೆಯುತ್ತಿದ್ದ ಸರ್ವೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ ಶಾಲಾ ಮಕ್ಕಳೊಂದಿಗೆ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಪ್ರತಿಭಟನಾಕಾರರ ಬಿಡುಗಡೆಗೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದ್ದಾರೆ.

ಆದಾಗ್ಯೂ, ಟೊಂಕಾದಲ್ಲಿ ವಾಣಿಜ್ಯ ಬಂದರಿಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಪೊಲೀಸ್‌ ಬಿಗಿಭದ್ರತೆಯಲ್ಲಿ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದರು. ಈ ವೇಳೆ ರಾಜ್ಯ ಮೀನುಗಾರಿಕೆ ಸಚಿವ ಮಂಕಾಳ್ ವೈದ್ಯ ಅವರು ಸರ್ವೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ, ಮೀನುಗಾರರಿಗೆ ರಕ್ಷಣೆ ನೀಡಬೇಕು. ಬಂಧಿತ ಸ್ಥಳೀಯರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಅಂಕೋಲಾ ತಾಲೂಕಿನಲ್ಲೂ ವಿರೋಧ

ಬಾವಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಣಿ ಗ್ರಾಮದಲ್ಲಿ ಬಂದರು ನಿರ್ಮಾಣ ಸಂಬಂಧ ಜಿಯೋ ತಾಂತ್ರಿಕ ಸಂಶೋಧನಾ ಕಾರ್ಯ ವಿರೋಧಿಸಿ ಸೋಮವಾರ ನೂರಾರು ಜನರು ಪ್ರತಿಭಟನೆ ನಡೆಸಿದ್ದರು.

ಇಲ್ಲೂ ಕೂಡ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ನಿಷೇಧಾಜ್ಞೆ ಲೆಕ್ಕಿಸದೇ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಕೇಣಿ ಕಡಲ ತೀರದಲ್ಲಿ ನೂರಾರು ಜನರು ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಬಂದರು ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸ್‌ ಸರ್ಪಗಾವಲು

ಬಂದರು ವಿವಾದ ಏನು?

ಸಾಗರ ಮಾಲಾ ಅಭಿವೃದ್ಧಿ ಯೋಜನೆಯಡಿ ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದು ಹೊನ್ನಾವರದ ಕಾಸರಕೋಡು-ಶರಾವತಿ ನದಿ ಅಳಿವೆಯ ಸುತ್ತಮುತ್ತ ಬೃಹತ್ ಬಂದರು ನಿರ್ಮಾಣ ಕೈಗೆತ್ತಿಕೊಂಡಿತ್ತು. ಇದರಿಂದ ಕಾಸರಕೋಡು ಪಂಚಾಯ್ತಿ ವ್ಯಾಪ್ತಿಯ ಕಾಸರಕೋಡು, ಟೋಂಕಾ-1, ಟೋಂಕಾ-2, ಪಾವಿನಕುರ್ವೆ, ಮಲ್ಲುಕುರ್ವೆ ಮತ್ತು ಹೊನ್ನಾವರ ಗ್ರಾಮೀಣ ಎಂಬ ಐದು ಮೀನುಗಾರಿಕಾ ಗ್ರಾಮಗಳ 44 ಹೆಕ್ಟೇರ್ ಪ್ರದೇಶ ಬಂದರು ಯೋಜನೆಗೆ ಸೇರಲಿದ್ದು, ಆ ಗ್ರಾಮಗಳ ಮೀನುಗಾರರ ಕುಟುಂಬಗಳು ಮನೆ ಮತ್ತು ಉದ್ಯೋಗ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ.

ಆ ಹಿನ್ನೆಲೆಯಲ್ಲಿ ಬಂದರು ಯೋಜನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಂದರು ಹಾಗೂ ಸಂಪರ್ಕ ರಸ್ತೆ ನಿರ್ಮಾಣದಿಂದ ಸ್ಥಳೀಯ ಮೀನುಗಾರರ ಜೀವನೋಪಾಯಕ್ಕೆ ಕುತ್ತು ಬರಲಿದೆ. ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಆಮೆಗಳ ಸಂತಾನಾಭಿವೃದ್ಧಿ ಜಾಗಗಳನ್ನು ನಾಶಪಡಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಹೊನ್ನಾವರದಲ್ಲಿ ಜಾಗತಿಕವಾಗಿ ಗಮನ ಸೆಳೆದಿರುವ ಪಾರಂಪರಿಕ ಒಣ ಮೀನು ಉದ್ಯಮದ ಮೇಲೂ ಬಂದರು ಯೋಜನೆ ಪರಿಣಾಮ ಬೀರಲಿದೆ. ಒಣ ಮೀನು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಎರಡು ಸಾವಿರಕ್ಕೂ ಹೆಚ್ಚು ಮೀನುಗಾರ ಮಹಿಳೆಯರು ಹಾಗೂ ಅವರ ಕುಟುಂಬಗಳ ಭವಿಷ್ಯ ಅತಂತ್ರವಾಗಲಿದೆ ಎಂದು ಹೇಳಾಗಿದೆ.

ಬಂದರಿಗೆ ಸಂಪರ್ಕ ಕಲ್ಪಿಸಲು ಟೋಂಕಾ ಮತ್ತು ಕಾಸರಕೋಡು ನಡುವೆ ಚತುಷ್ಪಥ ರಸ್ತೆಗಾಗಿ ಸಾವಿರಾರು ಮೀನುಗಾರರು ಮನೆ ಮಠ ಕಳೆದುಕೊಳ್ಳಲಿದ್ದಾರೆ. ಮೀನುಗಾರರನ್ನು ಒಕ್ಕಲೆಬ್ಬಿಸಲು ಅಧಿಕಾರಿಗಳು ಪೊಲೀಸ್‌ ಬಲ ಪ್ರಯೋಗಿಸುತ್ತಿದ್ದಾರೆ. ಸುಮಾರು 6,000 ಮೀನುಗಾರರ ಕುಟುಂಬಗಳು ಮತ್ತು ಸುಮಾರು 23,500 ಮೀನುಗಾರರ ಬದುಕು ಮೂರಾಬಟ್ಟೆಯಾಗಲಿದೆ ಎಂದು ಪರಿಸರ ತಜ್ಞರು, ಪ್ರಗತಿಪರರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು.

ಬಂದರು ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಅಸ್ವಸ್ಥರಾದ ಮೀನುಗಾರ ಮಹಿಳೆಯರು

ಬಂದರು ಯೋಜನೆ ಉದ್ದೇಶ ಏನು?

ಕಲ್ಲಿದ್ದಲು, ಕಬ್ಬಿಣದ ಅದಿರು ಸಾಗಣೆ ಸೇರಿದಂತೆ ವಾರ್ಷಿಕ ಸುಮಾರು ಐದು ಮಿಲಿಯನ್ ಮೆಟ್ರಿಕ್ ಟನ್ ಸರಕು ಸಾಗಣೆ ವಹಿವಾಟು ನಡೆಸುವ ಉದ್ದೇಶದಿಂದ ಹೊನ್ನಾವರದ ಕಾಸರಕೋಡು ಗ್ರಾಮದಲ್ಲಿ ಬಂದರು ನಿರ್ಮಿಸಲು ಉದ್ದೇಶಿಸಲಾಗಿದೆ.

2010ರಲ್ಲಿ ಬಂದರು ನಿರ್ಮಾಣದ ಕುರಿತು ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆ ನಡುವೆ ಒಪ್ಪಂದವಾಗಿದೆ. ಅಂದಿನಿಂದಲೂ ಸ್ಥಳೀಯ ಮೀನುಗಾರರು ಯೋಜನೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.  2016ರಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯವು ಯೋಜನೆ ಸಲುವಾಗಿ ಮೀನುಗಾರರ ಎತ್ತಂಗಡಿ ಮಾಡುವಂತೆ ಆದೇಶಿಸಿತ್ತು. ಅಂದಿನಿಂದ ಸ್ಥಳೀಯ ಮೀನುಗಾರರು, ಪರಿಸರ ತಜ್ಞರು, ಪ್ರಗತಿಪರರು ಹಾಗೂ ನಾಗರಿಕ ಸಂಘಟನೆಗಳು ಯೋಜನೆ ವಿರುದ್ಧ ಹೋರಾಟ ತೀವ್ರಗೊಳಿಸಿವೆ.   

ಪ್ರತಿಭಟನಾನಿರತರ ಮೇಲೆ ಲಾಠಿ ಚಾರ್ಜ್, ಸುಳ್ಳು ಪ್ರಕರಣ ದಾಖಲು, ರೌಡಿ ಶೀಟರ್ ಪಟ್ಟ ಕಟ್ಟುವುದು, ಮಹಿಳೆಯರ ಮೇಲೆ ದಬ್ಬಾಳಿಕೆಯಂತಹ ಕಿರುಕುಳಗಳು ನಿರಂತರವಾಗಿ ನಡೆಯುತ್ತಿವೆ. ಈ ಎಲ್ಲಾ ಸಂಗತಿಗಳ ಬಗ್ಗೆ ʼದ ಫೆಡರಲ್‌ ಕರ್ನಾಟಕʼ ಕಳೆದ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಸರಣಿ ವರದಿ ಪ್ರಕಟಿಸಿತ್ತು.

Tags:    

Similar News