ಜಾನುವಾರು ಗಣತಿ: ಬೆಂಗಳೂರು ಗ್ರಾಮಾಂತರವೇ ರಾಜ್ಯಕ್ಕೆ ಮೊದಲು
ಜಾನುವಾರು ಸಮೀಕ್ಷೆ ಫೆಬ್ರವರಿ 2025ರ ವರೆಗೆ ನಡೆದಿತ್ತು. ಈ ಸಮೀಕ್ಷಾ ವರದಿ ಪಶುಸಂಗೋಪನೆ ಅಭಿವೃದ್ಧಿ ಮತ್ತು ಆರೋಗ್ಯ, ಉತ್ಪಾದಕತೆ ಹೆಚ್ಚಿಸಲು ನೀತಿ, ಕಾರ್ಯಕ್ರಮ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ.;
21 ನೇ ರಾಜ್ಯ ಜಾನುವಾರು ಗಣತಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 2,90,551 ರೈತರು ಪಶುಸಂಗೋಪನೆಯಲ್ಲಿ ತೊಡಗಿಕೊಂಡಿದ್ದಾರೆ. ಪಶು ಇಲಾಖೆಯಲ್ಲಿ ಒಟ್ಟು 105 ಪಶು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದಾರೆ. 21ನೇ ಜಾನುವಾರು ಗಣತಿ ಪ್ರಕಾರ, 1,70,720 ದನಗಳು, 14,924 ಎಮ್ಮೆಗಳು, 1,17,715 ಕುರಿಗಳು, 95,000 ಮೇಕೆಗಳು ಜಿಲ್ಲೆಯಲ್ಲಿದೆ. 2,93,93 ಲಕ್ಷದ 93,876 ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆಯನ್ನು ನೀಡಲಾಗಿದೆ ಎಂದು ಪಶು ಸಂಗೋಪನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಜಗದೀಶ್ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5.5 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಜಾನುವಾರು ವಿಮೆ ಸೌಲಭ್ಯವನ್ನು ಎ.ಪಿ.ಎಲ್ ಪಡಿತರ ಚೀಟಿಗೆ ಶೇಖಡ 50 ರಷ್ಟು, ಬಿ.ಪಿ.ಎಲ್ ಪಡಿತರ ಚೀಟಿಗೆ ಶೇಖಡ 75 ರಷ್ಟು ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಯಾವಾಗ ಚಾಲನೆ?
21ನೇ ರಾಷ್ಟ್ರೀಯ ಜಾನುವಾರು ಗಣತಿ ಸಮೀಕ್ಷೆಗೆ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಕಳೆದ ವರ್ಷ ಚಾಲನೆ ನೀಡಿದ್ದರು. ಜಾನುವಾರು ಗಣತಿ ಸಮೀಕ್ಷೆಯಲ್ಲಿ ರಾಜ್ಯದಲ್ಲಿನ ಎಲ್ಲಾ ಜಾನುವಾರುಗಳ ಸವಿವರ ಸಂಗ್ರಹಿಸಲಾಗಿತ್ತು. ಜಾನುವಾರು ಸಮೀಕ್ಷೆ ಫೆಬ್ರವರಿ 2025ರ ವರೆಗೆ ನಡೆದಿತ್ತು. ಈ ಸಮೀಕ್ಷಾ ವರದಿ ಪಶುಸಂಗೋಪನೆ ಅಭಿವೃದ್ಧಿ ಮತ್ತು ಆರೋಗ್ಯ, ಉತ್ಪಾದಕತೆ ಹೆಚ್ಚಿಸಲು ನೀತಿ, ಕಾರ್ಯಕ್ರಮ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ.
ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಸಮೀಕ್ಷೆ ನಡೆಸಲಾಗುತ್ತದೆ. ಸಾಕು ಜಾನುವಾರುಗಳು, ಪೌಲ್ಟ್ರಿ, ಬಿಡಾಡಿ ಜಾನುವಾರುಗಳ ಗಣತಿ ಮಾಡಲಾಗಿದ್ದು, ಗಣತಿಯಲ್ಲಿ ಜಾನುವಾರುಗಳ ಜಾತಿಗಳು, ತಳಿ, ವಯಸ್ಸು, ಲಿಂಗ ಮತ್ತು ಮಾಲೀಕತ್ವದ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. 2019ರಲ್ಲಿ ನಡೆದ ಜಾನುವಾರು ಗಣತಿಯಲ್ಲಿ ರಾಜ್ಯದಲ್ಲಿ ಒಟ್ಟು 3.03 ಕೋಟಿ ಜಾನುವಾರುಗಳಿದ್ದವು. ಆದರೆ, ಈ ಬಾರಿಯ ಜಾನುವಾರ ಗಣತಿಯ ಜಿಲ್ಲಾವಾರು ಅಂಶಗಳು ಇನ್ನಷ್ಟೇ ತಿಳಿದುಬರಬೇಕಿದೆ.