ಯತ್ನಾಳ್‌ಗೆ ವೀರಶೈವ ಮಹಾಸಭಾ ಕಟು ಎಚ್ಚರಿಕೆ; ಆರ್‌ಎಸ್‌ಎಸ್ ಮೇಲೆ ಪರೋಕ್ಷ ವಾಗ್ದಾಳಿ
‘ನಾಲಿಗೆ ಕುಲ ಹೇಳುತ್ತದೆ’ ಎಂಬ ಮಾತಿನಂತೆ ನಿಮ್ಮ ನಡವಳಿಕೆಗಳನ್ನು ಗಮನಿಸಿದಾಗ ನೀವು ವೀರಶೈವ ಲಿಂಗಾಯತರೇ ಎಂಬ ಅನುಮಾನ ಮೂಡುತ್ತದೆ ಎಂದು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಎಚ್ಚರಿಕೆ ನೀಡಿದೆ.;
ಒಂದಲ್ಲೊಂದು ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಈಗ ಸಂಕಷ್ಟ ಎದುರಾಗಿದೆ. ಬಿಜೆಪಿಯ ಕೆಲ ನಾಯಕರ ವಿರುದ್ಧ ಹೇಳಿಕೆ ಕೊಡುವ ಭರದಲ್ಲಿ ಮಾಡಿಕೊಂಡಿದ್ದ ಯಡವಟ್ಟಿನ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಹುಚ್ಚಾಟದ ಹೇಳಿಕೆಗಳನ್ನು ಕೊಟ್ಟರೆ ಪರಿಣಾಮ ಬೇರೆಯಾಗಿರುತ್ತದೆ ಎಂದು ಅವರದ್ದೆ ಸಮುದಾಯದ ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಎಚ್ಚರಿಕೆ ನೀಡಿದೆ. ಯತ್ನಾಳ್ ಮಾತ್ರವಲ್ಲದೆ ಆರ್‌ಎಸ್‌ಎಸ್ ಮೇಲೂ ಪರೋಕ್ಷ ವಾಗ್ದಾಳಿಯನ್ನು ಮಹಾಸಭಾ ಮಾಡಿದೆ.
‘ನಾಲಿಗೆ ಕುಲ ಹೇಳುತ್ತದೆ’ ಎಂಬ ಮಾತಿನಂತೆ ನಿಮ್ಮ ಹೇಳಿಕೆಗಳು ಮತ್ತು ನಡವಳಿಕೆಗಳನ್ನು ಗಮನಿಸಿದಾಗ ನೀವು ವೀರಶೈವ ಲಿಂಗಾಯತರೇ ಎಂಬ ಅನುಮಾನ ಮೂಡುತ್ತದೆ. ವೀರಶೈವ ಲಿಂಗಾಯಿತರಿಗೆ ಇರಬೇಕಾದ ಆಚಾರವಾಗಲಿ, ಸಂಸ್ಕಾರವಾಗಲಿ ನಿಮ್ಮಲ್ಲಿ ಇರದೇ ಇರುವುದು ದುರದೃಷ್ಟಕರ. ಅಗ್ಗದ ಪ್ರಚಾರ ಮತ್ತು ತಮ್ಮ ರಾಜಕೀಯ ತೆವಲಿಗಾಗಿ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಲಿಂಗಾಯತ ಸಮುದಾಯಕ್ಕೆ ಸೇರಿರುವ ಶಾಸಕ ಯತ್ನಾಳ್‌ಗೆ ಎಚ್ಚರಿಕೆ ಕೊಟ್ಟಿದೆ. ಇದೇ ಸಂದರ್ಭದಲ್ಲಿ ಆರ್‌ಎಸ್‌ಎಸ್ ವಿರುದ್ಧ ವೀರಶೈವ ಲಿಂಗಾಯತ ಮಹಾಸಭಾ ಪರೋಕ್ಷ ವಾಗ್ದಾಳಿಯನ್ನು ಮಾಡಿದೆ.
ಯತ್ನಾಳ್ ಬಾಯಿಯಿಂದ ಹೇಳಿಸುತ್ತಿದೆ
ಬಿಜೆಪಿ ಶಾಸಕ ಯತ್ನಾಳ್ ಬಾಯಿಯಿಂದ ಬಸವಣ್ಣನವರ ಮೇಲೆ ಕೀಳು ಹೇಳಿಕೆಗಳನ್ನು ಕೊಡಿಸಲಾಗುತ್ತಿದೆ ಎಂದು ಪರೋಕ್ಷವಾಗಿ ಆರ್‌ಎಸ್‌ಎಸ್ ಮೇಲೆ ಲಿಂಗಾಯತ ವೀರಶೈವ ಮಹಾಸಭಾ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದೆ. ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೆಸರಿನಲ್ಲಿ ಮಹಾಸಭಾ ಕೊಟ್ಟಿರುವ ಪ್ರಕಟಣೆಯಲ್ಲಿ, ‘ನಿಮ್ಮ ಹೇಳಿಕೆ ಹಾಗೂ ನಡವಳಿಕೆಯನ್ನು ಗಮನಿಸಿದರೆ ತಮ್ಮ ಹಿಂದೆ ಇರಬಹುದಾದವರು ಯಾರೆಂಬುದನ್ನು ನಾವು ಅರ್ಥಮಾಡಿ ಕೊಳ್ಳಬಹುದಾಗಿದೆ. ಇದು ಸಮಾಜವನ್ನು ಒಡೆಯುವ ಕೃತ್ಯವಲ್ಲದೇ ಮತ್ತೇನು ಅಲ್ಲ. ಇಂದು ಬಸವಣ್ಣನವರ ವಿಚಾರಗಳು ವಿಶ್ವದಾದ್ಯಂತ ಮುನ್ನೆಲೆಗೆ ಬರುತ್ತಿರುವುದನ್ನು ಸಹಿಸದ ಆ ಒಂದು ವರ್ಗ ತಮ್ಮಿಂದ ಇಂತಹ ಹೇಳಿಕೆಗಳನ್ನು ಹೇಳಿಸುತ್ತಿದೆ ಎಂದು ಭಾವಿಸಬೇಕಾಗುತ್ತದೆ. ಅಂದು ಬಸವಣ್ಣನವರು ಮತ್ತು ಅವರ ವಿಚಾರಗಳಿಗೆ ಅಂತ್ಯ ಹಾಡಲು ಪ್ರಯತ್ನಿಸಿದ ಸಂಘಟನೆಯ ನೇತೃತ್ವ ವಹಿಸಿದವರ ಸಂಘಟನೆಯಲ್ಲಿರುವ ತಮ್ಮಿಂದ ನೀರೀಕ್ಷಿಸುವುದಾದರೂ ಎನನ್ನ? ಕನಿಷ್ಠ ಈ ಸಮಾಜದಲ್ಲಿ ಜನಿಸಿದ್ದಕ್ಕಾದರೂ ಈ ಧರ್ಮದ ಬೆಳಕಾಗಿರುವ ಬಸವಣ್ಣನವರ ಬಗ್ಗೆ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದನ್ನು ತಕ್ಷಣ ನಿಲ್ಲಿಸಬೇಕು’ ಎಂದು ಪರೋಕ್ಷವಾಗಿ ಬಿಜೆಪಿಯ ಮಾತೃ ಸಂಸ್ಥೆಯಾಗಿರುವ ಆರ್‌ಎಸ್‌ಎಸ್ ಮೇಲೆ ವಾಗ್ದಾಳಿಯನ್ನು ಮಾಡಲಾಗಿದೆ.
ಇನ್ನುಮುಂದೆ ಹುಚ್ಚಾಟಗಳನ್ನು ಸಹಿಸಿಕೊಳ್ಳುವುದಿಲ್ಲ
ಇಲ್ಲಿಯವರೆಗೆ ತಾವು ಸಮಾಜದವರು ಎಂಬ ಒಂದೇ ಒಂದು ಕಾರಣಕ್ಕೆ ತಮ್ಮ ಹುಚ್ಚಾಟಗಳನ್ನು ಸಹಿಸಿಕೊಂಡಿದ್ದೇವೆ. ಇಂತಹ ಹುಚ್ಚಾಟಗಳಿಗೆ ಇತಿಶ್ರೀ ಹಾಡುವುದು ಸಮಾಜ ಹಾಗೂ ತಮ್ಮ ದೃಷ್ಟಿಯಿಂದ ಒಳ್ಳೆಯದು ಎಂದು ಭಾವಿಸುತ್ತೇವೆ. ಮಹಾಸಭೆಗೆ ಇಂತಹ ಹುಚ್ಚಾಟಗಳನ್ನು ನಿಲ್ಲಿಸಲು ಬರುತ್ತದೆ ಎಂದು ಈ ಮೂಲಕ ತಮಗೆ ಎಚ್ಚರಿಕೆ ನೀಡುತ್ತಿದ್ದೇವೆ. ಇಲ್ಲವಾದರೆ ಸಮಾಜವೇ ತಮ್ಮನ್ನು ಹೊಳೆಗಲ್ಲ ಹಾಳು ಬಾವಿಗೆ ನೂಕುತ್ತದೆ. ನಾಲಿಗೆಯ ಮೇಲೆ ಹಿಡಿತವಿರಲಿ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಶಾಮನೂರು ಶಿವಶಂಕರಪ್ಪ ಯತ್ನಾಳ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಬಸವಣ್ಣನ ಹಾಗೆ ಹೊಳಿಗೆ ಜಿಗಿಬೇಕು ಎಂದಿದ್ದ ಯತ್ನಾಳ್
ವಕ್ಫ್ ಕುರಿತ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುವ ಭರದಲ್ಲಿ ‘ಬಸವಣ್ಣನವರಂಗ ಹೋಗಿ ಹೋಳ್ಯಾಗ್ ಜಿಗಿಬೇಕು. ಇಲ್ಲಾಂದ್ರೆ ಹೋರಾಟ ಮಾಡಬೇಕು’ ಎನ್ನುತ್ತಾ ಹಿಂದೂಗಳು ಆಸ್ತಿ ರಕ್ಷಣೆ ಮಾಡಿಕೊಳ್ಳಬೇಕು ಎಂದಿದ್ದರು. ಬಸವಣ್ಣನವರನ್ನು ಪಲಾಯನವಾದಿ ಎಂಬರ್ಥದಲ್ಲಿ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ ಎಂಬ ಆರೋಪ ಎದುರಾಗಿತ್ತು. ಆದರೆ ನಾನು ಮಾತನಾಡಿದ್ದು ಸರಿಯಿದೆ ಎಂದು ಯತ್ನಾಳ್ ಸ್ಪಷ್ಟನೆ ಕೊಟ್ಟಿದ್ದರು. ಆದರೆ ಯತ್ನಾಳ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.