BJP Infighting | ಬಿಜೆಪಿಯಲ್ಲೀಗ ಲಿಂಗಾಯತ ನಾಯಕತ್ವ ಕದನ: ವಿಜಯೇಂದ್ರ ವಿರುದ್ಧ ಯತ್ನಾಳ್ ಜಾತಿ ದಾಳ
ಲಿಂಗಾಯತ ನಾಯಕತ್ವ ಅನಾಯಾಸವಾಗಿ ಬಿ.ಎಸ್. ಯಡಿಯೂರಪ್ಪ ಅವರಿಂದ ಪುತ್ರ ವಿಜಯೇಂದ್ರ ಅವರಿಗೆ ಹೋಗುವುದನ್ನು ತಪ್ಪಿಸಲು ಯತ್ನಾಳ್ ಭಾರೀ ಯತ್ನ ನಡೆಸಿದ್ದಾರೆ. ಆ ಕಾರಣಕ್ಕಾಗಿಯೇ, ಯಡಿಯೂರಪ್ಪ ಅವರ ಲಿಂಗಾಯತ ಜಾತಿ ಮೂಲವನ್ನೇ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.;
ಬಸನಗೌಡ ಪಾಟೀಲ್ ಯತ್ನಾಳ್, ಬಿ ವೈ ವಿಜಯೇಂದ್ರ, ಬಿ ಎಸ್ ಯಡಿಯೂರಪ್ಪ
ರಾಜ್ಯ ಬಿಜೆಪಿಯ ಬಣ ರಾಜಕೀಯ ಇನ್ನೊಂದು ಮಜಲಿಗೆ ಬಂದು ನಿಂತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಅವರ ವಿರುದ್ಧ ತೊಡೆ ತಟ್ಟುತ್ತಲೇ ಇರುವ ಅತೃಪ್ತರ ಬಣದ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಗಳಿಂದ ಬಿಜೆಪಿಯನ್ನು ಪ್ರಬಲವಾಗಿ ಬೆಂಬಲಿಸಿದ್ದ ಲಿಂಗಾಯತ ಸಮುದಾಯವೇ ಇಬ್ಬಣವಾಗುವ ಸಾಧ್ಯತೆಗಳಿವೆ.
ಕಳೆದ ಎರಡು ದಶಗಳಿಂದ ಬಿಜೆಪಿಯನ್ನು ಪ್ರಬಲವಾಗಿ ಬೆಂಬಲಿಸುತ್ತಿರುವ ಲಿಂಗಾಯತರ ನಾಯಕತ್ವದ ಮೇಲೆ ಉಭಯ ಬಣಗಳ ಕಣ್ಣು ಬಿದ್ದಿದೆ. ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರ ಬೆನ್ನ ಹಿಂದೆ ನಿಂತು ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ಖಾತೆ ತೆರೆಯಲು ಅನುವು ಮಾಡಿಕೊಟ್ಟಿತ್ತು ಹಾಗೂ ಯಡಿಯೂರಪ್ಪ ಅವರೇ ಲಿಂಗಾಯತರ ಪ್ರಶ್ನಾತೀತ ನಾಯಕ ಎಂದು ಬಿಂಬಿತರಾಗಿದ್ದರು. ಈಗ ಅದೇ ಸ್ಥಾನವನ್ನು ಯಡಿಯೂರಪ್ಪ ಪುತ್ರ ವಿಜಯೇಂದ್ರ ಗಳಿಸಲು ನಡೆಸುತ್ತಿರುವ ಯತ್ನ ಯತ್ನಾಳ್ ಬಣಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಆ ಕಾರಣಕ್ಕಾಗಿ ಲಿಂಗಾಯತ ನಾಯಕತ್ವವನ್ನು ವಿಜಯೇಂದ್ರ ವಹಿಸುವುದನ್ನು ತಡೆಯಲು ಯತ್ನಾಳ್ ಭಾರೀ ಯತ್ನ ನಡೆಸಿದ್ದಾರೆ. ಆ ಕಾರಣಕ್ಕಾಗಿಯೇ, ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ತಪ್ಪಿಸಲು ನಡೆಸುತ್ತಿದ್ದ ತಮ್ಮ ಪ್ರಯತ್ನಕ್ಕೆ ತುಸು ಅಲ್ಪವಿರಾಮ ನೀಡಿದ್ದು, ಈಗ ಯಡಿಯೂರಪ್ಪ ಅವರ ಲಿಂಗಾಯತ ಜಾತಿ ಮೂಲವನ್ನೇ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.
ಆ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗಿಂತ ಲಿಂಗಾಯತ ನಾಯಕತ್ವ ಪ್ರಮುಖ ಎಂಬ ಅಂಶವನ್ನು ಉಭಯ ಬಣಗಳೂ ಅರಿತುಕೊಂಡಿದ್ದು, ಯಡಿಯೂರಪ್ಪ ಮತ್ತು ವಿಜಯೇಂದ್ರ ಬೆಂಬಲದ ಲಿಂಗಾಯತ ಸಮಾವೇಶ ಮಾಡಲು ಅವರ ಆಪ್ತರು ಮುಂದಾದರೆ, ಪ್ರತಿಯಾಗಿ ಲಿಂಗಾಯತರ ಸಮಾವೇಶ ಮಾಡುವುದಾಗಿ ಯತ್ನಾಳ್ ಅವರೂ ಘೋಷಣೆ ಮಾಡಿದ್ದಾರೆ. ಅಂತೂ ಈಗ ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವದ ಕಾವು ಹೆಚ್ಚಾಗಿದೆ. ಆ ಮೂಲಕ ಭವಿಷ್ಯದಲ್ಲಿ ಬಿಜೆಪಿಯಲ್ಲಿ ಪ್ರಭುತ್ವ ಸಾಧಿಸಲು ಉಭಯ ಬಣಗಳು ಯತ್ನಿಸುತ್ತಿರುವುದು ಈಗ ಜಾಹೀರಾಗಿದೆ.
ಬಿ.ಎಸ್. ಯಡಿಯೂರಪ್ಪ ಅವರೊಬ್ಬ ಲಿಂಗಾಯತರೇ ಅಲ್ಲ ಎನ್ನುವ ಯತ್ನಾಳ್ ಹೇಳಿಕೆ, ಹಾಗೂ ವಿಜಯೇಂದ್ರ ಬಣದ ನಾಯಕ ಎಂ.ಪಿ. ರೇಣುಕಾಚಾರ್ಯ ಅವರ ವೀರಶೈವ ಲಿಂಗಾಯತ ಮಹಾಸಂಗಮ ಸಭೆ ನಿರ್ಧಾರ ಹಾಗೂ ಪ್ರತ್ಯೇಕ ಲಿಂಗಾಯತ ಸಮಾವೇಶ ಮಾಡುವ ಯತ್ನಾಳ್ ಹೇಳಿಕೆ, ಇವೆಲ್ಲವೂ ಒಂದು ರೀತಿಯಲ್ಲಿ ಲಿಂಗಾಯತ ನಾಯಕರಲ್ಲೇ ಬಣಗಳನ್ನು ಸೃಷ್ಟಿಸುವುದರ ಜತೆಗೆ ಬಿಜೆಪಿಯನ್ನು ಒಂದು ದಶಕದಿಂದ ಬೆಂಬಲಿಸಿದ್ದ ಲಿಂಗಾಯತ ಸಮುದಾಯವೇ ಎರಡೂ ಬಣಗಳ ಜತೆ ಗುರುತಿಸಿಕೊಳ್ಳುವ ಮೂಲಕ ಇಬ್ಭಾಗವಾಗುತ್ತಿದೆಯೇ ಎಂಬ ಪ್ರಶ್ನೆಗಳು ಬಿಜೆಪಿ ಪಕ್ಷದೊಳಗೆ ಉದ್ಭವವಾಗಿವೆ.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಬೇಕೆಂಬ ಪಟ್ಟನ್ನು ಹಿಡಿದಿದ್ದ ಯತ್ನಾಳ್ ಮತ್ತವರ ತಂಡದ ರಮೇಶ್ ಜಾರಕಿಹೊಳಿ ಮತ್ತಿತರರು ಹೈಕಮಾಂಡ್ ಮಧ್ಯಪ್ರವೇಶದಿಂದ ಒಂದು ಹಂತಕ್ಕೆ ಸುಮ್ಮನಾಗಿದ್ದಾರೆ. ಆದರೆ, ವಿಜಯೇಂದ್ರ ಮತ್ತವರ ತಂದೆ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸಿ ಲಿಂಗಾಯತರ ಸಮಾವೇಶ ಮಾಡಲು ರೇಣುಕಾಚಾರ್ಯ ಮತ್ತಿತರರು ಹೊರಟಿರುವುದು ಈಗ ಯತ್ನಾಳ್ ಅವರನ್ನು ಮತ್ತೆ ಸಿಟ್ಟಿಗೆಬ್ಬಿಸಿದೆ.
ಮಂಗಳವಾರ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯಿತ ನಾಯಕರು, ವಿವಿಧ ಸಂಘಟನೆಗಳ ಮುಖಂಡರ ಸಭೆಯನ್ನು ರೇಣುಕಾಚಾರ್ಯ ಕರೆದಿದ್ದರು. ಅಧಿಕೃತವಾಗಿ ವಿಜಯೇಂದ್ರ ಈ ಸಭೆಯ ನಿರ್ಣಯಗಳಲ್ಲಿ ಭಾಗಿಯಾಗಿಲ್ಲವಾದರೂ, ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವ ರೇಣುಕಾಚಾರ್ಯ "‘ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರನ್ನು ಬೆಂಬಲಿಸಿ ವೀರಶೈವ ಲಿಂಗಾಯತ ಮಹಾಸಂಗಮ ಸಭೆ ನಡೆಸಲಾಗುವುದು" ಎಂದು ಘೋಷಿಸಿರುವುದು ಬಿಜೆಪಿಯ ಬಣ ಜಗಳ, ಆ ಪಕ್ಷದ ಬೆಂಬಲ ವಲಯದಲ್ಲಿರುವ ಲಿಂಗಾಯತರಲ್ಲೇ ಒಡಕು ಉಂಟು ಮಾಡುವ ಹಂತಕ್ಕೆ ಬಂದು ನಿಂತಿದೆ. "ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಸಮುದಾಯದ ನಾಯಕರು. ಅವರನ್ನು ಗೌರವಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗಗಳಲ್ಲೂ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿಕೆ ನೀಡಿದ್ದಾರೆ.
ಒಂದು ರೀತಿಯಲ್ಲಿ ಲಿಂಗಾಯತರಲ್ಲಿ ವಿಜಯೇಂದ್ರ ಬಣದ ಛಾಪನ್ನು ಅವರ ತಂದೆ ಬಿ.ಎಸ್. ಯಡಿಯೂರಪ್ಪ ಅವರಂತೆಯೇ ಮೂಡಿಸಬೇಕೆನ್ನುವ ವರಸೆ ಇದಾಗಿದೆ. ಆದರೆ, ಅಧಿಕೃತವಾಗಿ "ಲಿಂಗಾಯತರ ಸಂಖ್ಯೆಯನ್ನು ಸಿದ್ದರಾಮಯ್ಯ ಸರ್ಕಾರ ನಡೆಸಿದ್ದ ಜಾತಿ ಗಣತಿ ವರದಿಯಲ್ಲಿ ತಪ್ಪಾಗಿ ಬಿಂಬಿಸಲಾಗಿದೆ," ಎಂದು ಹೇಳುವ ಮೂಲಕ ಲಿಂಗಾಯತರ ಓಲೈಕೆಗೆ ಮತ್ತು ಲಿಂಗಾಯತರ ನಾಯಕನಾಗಿ ವಿಜಯೇಂದ್ರ ಅವರನ್ನು ರೂಪಿಸುವ ತಂತ್ರಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.
ಯತ್ನಾಳ್ ಪ್ರತ್ಯಸ್ತ್ರ
ವಿಜಯೇಂದ್ರ ಬಣದ ನಡೆಯಿಂದ ಕುಪಿತರಾಗಿರುವ ಹಾಗೂ ಯಡಿಯೂರಪ್ಪ ಅವರ ಕಡುವಿರೋಧಿಯಾಗಿರುವ ಯತ್ನಾಳ್, ಗಂಭೀರವಾದ ಹೇಳಿಕೆ ನೀಡಿದ್ದಾರೆ.
ಲಿಂಗಾಯತ ನಾಯಕತ್ವಕ್ಕೆ ಪ್ರಯತ್ನಿಸುತ್ತಿರುವ ವಿಜಯೇಂದ್ರ ಅವರನ್ನು ಮೂಲೆಗೆ ಸರಿಸಿ, ಲಿಂಗಾಯತ ನಾಯಕತ್ವಕ್ಕೆ ಪ್ರಯತ್ನಿಸುತ್ತಿರುವ ಯತ್ನಾಳ್, ಈಗ ಯಡಿಯೂರಪ್ಪ ಅವರ ಮೇಲೆ ಕಟುವಾಗಿ ಆರೋಪ ಮಾಡಿದ್ದಾರೆ. "ಯಡಿಯೂರಪ್ಪ ಅವರು ಲಿಂಗಾಯತರೇ ಅಲ್ಲ. ಅವರು ಬಳೆಗಾರ ಶೆಟ್ಟರು. ಅವರ ಹುಟ್ಟೂರಾದ ಮಂಡ್ಯದ ಬೂಕನಕೆರೆಗೆ ಹೋಗಿ ಕೇಳಿದರೆ, ನಿಜ ಗೊತ್ತಾಗುತ್ತದೆ," ಎಂದು ಹೇಳುವ ಮೂಲಕ ತಾವು ಮಾತ್ರ ನಿಜವಾದ ಲಿಂಗಾಯತ ನಾಯಕರು ಎಂಬ ಸಂದೇಶ ರವಾನಿಸಲು ಯತ್ನಾಳ್ ಪ್ರಯತ್ನಿಸಿದ್ದಾರೆ.
‘ವೀರೇಂದ್ರ ಪಾಟೀಲ, ಜೆ.ಎಚ್.ಪಟೇಲ್ ನಂತರ ಸಮುದಾಯದಲ್ಲಿ ಯಾರೂ ನಾಯಕರು ಇರಲಿಲ್ಲ. ಜನರು ಅನಿವಾರ್ಯವಾಗಿ ಯಡಿಯೂರಪ್ಪ ಅವರನ್ನು ಒಪ್ಪಿದ್ದರು. ಆದರೆ ಯಡಿಯೂರಪ್ಪ ಅವರು ವೀರಶೈವರು ಮತ್ತು ಪಂಚಮಸಾಲಿಗಳಿಗೆ ಮೀಸಲಾತಿ ನೀಡದೆ, ಮೋಸ ಮಾಡಿದರು," ಎಂದು ಟೀಕಿಸಿದ್ದಾರೆ.
"ಯಡಿಯೂರಪ್ಪ ಅವರು ಲಿಂಗಾಯತರ ಹೆಸರು ಹೇಳಿ ಬಿಜೆಪಿಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದರೆ, ಕಾಂಗ್ರೆಸ್‌ನಲ್ಲೂ ಶಾಮನೂರು ಶಿವಶಂಕರಪ್ಪ ಬ್ಲಾಕ್ ಮೇಲ್ ರಾಜಕಾರಣ ಮಾಡುತ್ತಿದ್ದಾರೆ" ಎಂದು ಆರೋಪಿಸಿರುವ ಯತ್ನಾಳ್, ತಮ್ಮ ಆಕ್ಷೇಪ ಇರುವುದು ಕುಟುಂಬ ರಾಜಕಾರಣದ ಬಗ್ಗೆ ಮಾತ್ರ ಎಂದು ಹೇಳಿದ್ದಾರೆ.
ಜತೆಗೆ, ಒಂದು ವೇಳೆ ಯಡಿಯೂರಪ್ಪ ಬಣದವರು ಲಿಂಗಾಯತ ಸಮಾವೇಶ ಮಾಡಿದರೆ, ಹತ್ತು ದಿನದ ಬಳಿಕ ತಾವು ಪ್ರತ್ಯೇಕ ಲಿಂಗಾಯತ ಸಮಾವೇಶ ಮಾಡುವುದಾಗಿಯೂ ಯತ್ನಾಳ್ ಪ್ರಕಟಿಸಿದ್ದಾರೆ. ಆ ಮೂಲಕ ಲಿಂಗಾಯತ ನಾಯಕತ್ವಕ್ಕೆ ಪ್ರಯತ್ನಿಸುತ್ತಿರುವ ವಿಜಯೇಂದ್ರ ಅವರನ್ನು ಹೇಗಾದರೂ ತಡೆಯುವ ಹಾಗೂ ದಶಕಗಳಿಂದ ಯಡಿಯೂರಪ್ಪ ಕುಟುಂಬ ಅನುಭವಿಸುತ್ತಿರುವ ಲಿಂಗಾಯತ ಬೆಂಬಲವನ್ನು ಒಡೆಯಲು ಯತ್ನಾಳ್ ಅವರು ಪ್ರಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಮಾತಿನ ಸಮರ
ಈ ನಡುವೆ ಯಡಿಯೂರಪ್ಪ ಅವರ ಜಾತಿ ಮೂಲವನ್ನೇ ಪ್ರಶ್ನಿಸಿರುವ ಯತ್ನಾಳ್ ಅವರ ಹೇಳಿಕೆಗೆ ರೇಣುಕಾಚಾರ್ಯ ಕಟುವಾಗಿ ಟೀಕಿಸಿದ್ದಾರೆ. "ನಾವ್ಯಾರು ಯಡಿಯೂರಪ್ಪ, ವಿಜಯೇಂದ್ರರಿಂದ ಹಣ ಪಡೆದಿಲ್ಲ. ನಾಯಿ ನರಿಗಳೆಲ್ಲಾ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿದ್ದಾರೆ," ಎಂದು ಯತ್ನಾಳ್ ಅವರನ್ನು ಬೊಟ್ಟುಮಾಡಿ ಹೇಳಿಕೆ ನೀಡಿದ್ದರು.
ಈ ಬಗ್ಗೆ ಪ್ರತಿಹೇಳಿಕೆ ನೀಡಿರುವ ಯತ್ನಾಳ್, ‘ನಾಯಿಗಳಿಗೆ ನಿಯತ್ತು ಇದೆ. ಆದರೆ ಹಂದಿಗಳಿಗೆ ನಿಯತ್ತು ಇಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಪರ ರೇಣುಕಾಚಾರ್ಯ ಇಂದು ಮಾತನಾಡುತ್ತಿದ್ದಾರೆ. ಆದರೆ, ಅಂದು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಗೋವಾಗೆ ಹೋಗಿ ಸಂಚು ಮಾಡಿದ್ದು ಇದೇ ರೇಣುಕಾಚಾರ್ಯ’ ಎಂದು ಜರೆದಿದ್ದಾರೆ.
ಲಿಂಗಾಯತರ ನಾಯಕ ಯಡಿಯೂರಪ್ಪ
ಈಗಲೂ ಯಡಿಯೂರಪ್ಪ ಅವರೇ ಲಿಂಗಾಯತರ ಪ್ರಶ್ನಾತೀತ ನಾಯಕ ಎಂಬುದನ್ನು ಸಾಬೀತುಪಡಿಸಲು ರೇಣುಕಾಚಾರ್ಯ ಯತ್ನಿಸಿದ್ದಾರೆ. ‘ಯಡಿಯೂರಪ್ಪ ಅವರು ವೀರಶೈವ ಲಿಂಗಾಯತರ ಮಹಾನಾಯಕ. ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಾಯಿ ಉಚ್ಚೆ ಹೊಯ್ದರೆ ಕಲ್ಲಿನ ತೂಕ ಕಡಿಮೆ ಆಗುವುದಿಲ್ಲ, ಯಡಿಯೂರಪ್ಪ ರಾಜಕಾರಣಕ್ಕೆ ಬಂದು ರಾಜ್ಯದಲ್ಲಿ ಪಕ್ಷ ಕಟ್ಟುವಾಗ ಈ ಬೊಗಳೆ ಮನುಷ್ಯ ಇನ್ನೂ ರಾಜಕಾರಣ ನೋಡಿರಲಿಲ್ಲ. ಯತ್ನಾಳಗೆ ಬುದ್ಧಿಭ್ರಮಣೆ ಆಗಿದೆಯಾ? ಹುಚ್ಚಾಸ್ಪತ್ರೆಗೆ ಸೇರಿಸಬೇಕಾ?ʼ ಎಂದು ವ್ಯಂಗ್ಯವಾಡಿದ್ದಾರೆ.
ಇವೆಲ್ಲಾ ಬೆಳವಣಿಗೆಗಳ ನಡುವೆ, ಲಿಂಗಾಯತರ ಉಪ ಪಂಗಡ ಪಂಚಮಸಾಲಿ ಹಿಂದುಳಿದ ವರ್ಗಗಳ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಯತ್ನಾಳ್ ಅದೇ ದಾಳವನ್ನು ಉರುಳಿಸುತ್ತಿದ್ದಾರೆ ಎನ್ನಲಾಗಿದೆ. ಲಿಂಗಾಯತ ಸಮೂದಾಯದಲ್ಲಿ ಪಂಚಮಸಾಲಿಗಳು (ಉತ್ತರ ಕರ್ನಾಟಕ ಭಾಗದಲ್ಲಿ) ಶೇ.60 ರಷ್ಟಿದ್ದಾರೆ ಎನ್ನುವುದು ಯತ್ನಾಳ್ ಬಣದ ನಾಯಕರ ವಾದವಾಗಿದೆ. ಆ ಮೂಲಕ, ಕುಟುಂಬ ರಾಜಕೀಯ ಮಾಡುತ್ತಿರುವ ಯಡಿಯೂರಪ್ಪ ತಮ್ಮ ಪುತ್ರನಿಗೆ ಲಿಂಗಾಯತ ನಾಯಕತ್ವವನ್ನು ವಹಿಸುವ ಬಗ್ಗೆ ಯತ್ನಾಳ್ ತಂಡ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದೆ.
ಯಾರೆಲ್ಲಾ ಇದ್ದಾರೆ?
ಲಿಂಗಾಯತ ಮುಖಂಡರಾದ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವ ವಿ. ಸೋಮಣ್ಣ ಮತ್ತಿತರ ನಾಯಕರು ಯತ್ನಾಳ್ ಹಿಂದೆ ಇದ್ದಾರೆ.
ಇಂತಹ ಪ್ರಮುಖ ಲಿಂಗಾಯತ ನಾಯಕರಲ್ಲದೆ, ಸಿ.ಟಿ. ರವಿ, ಮತ್ತಿತರ ನಾಯಕರೂ ಒಂದಲ್ಲ ಒಂದು ರೀತಿಯಲ್ಲಿ ಯಡಿಯೂರಪ್ಪ ಅವರ ʼಕುಟುಂಬ ರಾಜಕಾರಣʼವನ್ನು ಪ್ರಶ್ನಿಸುತ್ತಲೇ ಇದ್ದಾರೆ. ಅವರೆಲ್ಲರೂ ತೆರೆಮರೆಯಲ್ಲಿ ಯತ್ನಾಳ್ ಅವರಿಗೆ ಬೆಂಬಲಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.