ಅಧಿಕಾರ ಯಾರ ಪಾಲಾಗುತ್ತದೆ ಎಂಬುದನ್ನು ಕಾದು ನೋಡಿ ಎಂದ ಪರಮೇಶ್ವರ್
ಧರ್ಮಸ್ಥಳ ವಿಚಾರ ಕುರಿತ ಪ್ರತಿಪಕ್ಷ ಬಿಜೆಪಿ ಸದಸ್ಯರು ಪ್ರಸ್ತಾಪಿಸಿದಾಗ ಪರಮೇಶ್ವರ್, ಅಧಿಕಾರ ಯಾರ ಪಾಲಾಗಲಿದೆ ಎಂಬ ವಿಚಾರದಲ್ಲಿ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.;
ಗೃಹ ಸಚಿವ ಡಾ. ಜಿ. ಪರಮೇಶ್ವರ್
ರಾಜ್ಯದಲ್ಲಿ ಮುಖ್ಯಮಂತ್ರಿ ವಿಚಾರ ಆಗಾಗ್ಗೆ ಚರ್ಚೆ ನಡೆಯುತ್ತಲೇ ಇದ್ದು, ಮುಂದಿನ ದಿನದಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಿ ಎಂದು ಸೂಕ್ಷ್ಮವಾಗಿ ಹೇಳುವ ಮೂಲಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತೊಮ್ಮೆ ಚರ್ಚೆ ಹುಟ್ಟು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಧರ್ಮಸ್ಥಳ ವಿಚಾರ ಕುರಿತ ಚರ್ಚೆಗೆ ಉತ್ತರ ನೀಡುತ್ತಿದ್ದ ವೇಳೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಅಧಿಕಾರ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ತಾವು ಸಂಘರ್ಷದ ಹಾದಿಯನ್ನಲ್ಲ, ಸಂಯಮದ ಹಾದಿಯನ್ನು ಹಿಡಿಯುವುದಾಗಿ ಹೇಳಿ, ಎಸ್‌ಐಟಿ ತನಿಖಾ ವಿಚಾರದಲ್ಲಿ ಸಂಯಮದಿಂದರಲು ವಿರೋಧ ಪಕ್ಷದ ನಾಯಕರಿಗೆ ಸಲಹೆ ನೀಡಿದರು.
ಆಗ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, "ನೀವು ಸಂಯಮದಿಂದ ಅಂತ ಹೇಳುತ್ತೀರಿ. ಪಕ್ಕದಲ್ಲೇ ಇರುವವರು (ಡಿ.ಕೆ. ಶಿವಕುಮಾರ್) ಸಂಘರ್ಷ ಎನ್ನುತ್ತಾರೆ. ಆಶ್ಚರ್ಯ ಆಗುತ್ತಿದೆ," ಎಂದು ಕಿಚಾಯಿಸಿದರು.
ಆಗ ಬಿಜೆಪಿ ಸದಸ್ಯ ಸುನಿಲ್ ಕುಮಾರ್ ಚರ್ಚೆ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಡೆ ಕೈ ತೋರಿಸಿ ಅವರು, ಅವರು (ಡಿ.ಕೆ.ಶಿವಕುಮಾರ್) ಒದ್ದು ಅಧಿಕಾರ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ. ಆದರೆ, ನೀವು ಸಂಯಮದಿಂದ ಎಂದು ಹೇಳುತೀರಿ. ಅಧಿಕಾರ ಯಾರ ಪಾಲಾಗುತ್ತದೆ? ಎಂದು ಲೇವಡಿ ಮಾಡಿದರು.
ಆಗ ಪರಮೇಶ್ವರ್ ಅವರು ʼಕಾದು ನೋಡಿ," ಎಂದರು. ಈ ಮೂಲಕ ತೆರೆಗೆ ಸರಿದಿದ್ದ ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಮತ್ತೆ ಚರ್ಚೆಗೆ ಹುಟ್ಟು ಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳ್ಳುವ ವೇಳೆಗೆ ಪಕ್ಷದಲ್ಲಿಯೇ ಮುಖ್ಯಮಂತ್ರಿ ಬದಲಾವಣೆ ಕುರಿತು ವ್ಯಾಪಕ ಚರ್ಚೆ ನಡೆಯಿತು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ನಡುವೆ ತೀವ್ರ ಕಿತ್ತಾಟಕ್ಕೂ ಕಾರಣವಾಯಿತು. ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಗಾದಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಬದಲಾವಣೆಯ ಒಪ್ಪಂದವಾಗಿತ್ತು ಎಂದು ಹೇಳಲಾಗಿದೆ. ಇದೇ ಕಾರಣಕ್ಕಾಗಿ ಎರಡು ಬಣಗಳ ನಡುವೆ ಕಸರತ್ತು ನಡೆಯಿತು. ಇದಕ್ಕೆ ಪುಷ್ಠಿ ನೀಡುವಂತೆ ಹಲವು ಶಾಸಕರು, ಸಚಿವರು ಸಹ ಹೇಳಿಕೆ ನೀಡಿದ್ದರು. ಇದು ರಾಜ್ಯಾದ್ಯಂತ ತೀವ್ರ ಕೋಲಾಹಲವನ್ನುಂಟು ಮಾಡಿತು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣದ ನಡುವಿನ ತೆರೆಮರೆಯ ಕಾದಾಟವು ಅತಿರೇಕ ಎನಿಸಿದಾಗ ಪಕ್ಷದ ಹೈಕಮಾಡ್ ಮಧ್ಯಪ್ರವೇಶಿಸಿತು. ದೆಹಲಿಯಿಂದ ಬಂದ ವರಿಷ್ಠರು ಎರಡು ಬಣಗಳ ನಡುವೆ ಸಭೆಗಳನ್ನು ನಡೆಸಿ ತಾತ್ಕಾಲಿಕ ಶಮನ ಮಾಡಿಸಿದ್ದಾರೆ. ಅಧಿಕಾರಕ್ಕೆ ಪಕ್ಷದಲ್ಲಿ ಕಾದಾಟ ನಡೆದರೆ ಅದರ ಲಾಭವನ್ನು ಬಿಜೆಪಿ ಪಡೆದುಕೊಳ್ಳಲಿದೆ. ಹೀಗಾಗಿ ಯಾರೂ ಸಹ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಸೂಚನೆ ನೀಡಿದ್ದಾರೆ. ಇದೀಗ ಪರಮೇಶ್ವರ್ ಹೇಳಿಕೆಯು ಮತ್ತೆ ಮುಖ್ಯಮಂತ್ರಿ ಗಾದಿಯ ಚರ್ಚೆಗೆ ಗ್ರಾಸವಾಗಿದೆ.