Assembly Session | ಡಿ.9 ರಿಂದ ವಿಧಾನಮಂಡಲ ಬೆಳಗಾವಿ ಅಧಿವೇಶನ
ಚಳಿಗಾಲದ ಅಧಿವೇಶನದಲ್ಲೂ ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ ಹಾಗೂ ವಕ್ಫ್ ಆಸ್ತಿ ವಿವಾದ ಪ್ರತಿಧ್ವನಿಸುವ ಸಾಧ್ಯತೆ ಇದೆ. ಇದೇ ವಿಚಾರಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ಮೈತ್ರಿ ಪಕ್ಷಗಳು ಸಜ್ಜಾಗಿವೆ.;
ವಿಧಾನಮಂಡಲದ ಚಳಿಗಾಲದ ಅಧಿವೇಶನ ಡಿ. 9 ರಿಂದ 20 ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಧಿವೇಶನ ಕರೆಯುವ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಕಡತ ರವಾನಿಸಲಾಗಿದೆ. ಈಗಾಗಲೇ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಧಿವೇಶನಕ್ಕೆ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಳಗಾವಿಯಲ್ಲಿ 1924 ಡಿ.26 ಹಾಗೂ 27 ರಂದು ನಡೆದ 39ನೇ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಗಾಂಧಿ ಅವರು ಭಾಗವಹಿಸಿ ಭಾಷಣ ಮಾಡಿದ್ದರು. ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ 100ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಜೊತೆಗೆ ಬೆಳಗಾವಿಯಲ್ಲೇ ಡಿ. 26 ಹಾಗೂ 27 ರಂದು ಕಾಂಗ್ರೆಸ್ ರಾಷ್ಟ್ರೀಯ ಅಧಿವೇಶನ ನಡೆಸಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಮಂಡಲದ ಜಂಟಿ ಅಧಿವೇಶನ ಉದ್ಘಾಟಿಸಿ ಭಾಷಣ ಮಾಡಲು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಆಹ್ವಾನಿಸಲಾಗಿದೆ. ಆದರೆ, ಒಬಾಮಾ ಅವರ ಹಾಜರಿ ಇನ್ನು ಖಚಿತವಾಗಿಲ್ಲ.
ಕಳೆದ ಜುಲೈ 14ರಿಂದ 10 ದಿನಗಳ ಕಾಲ ಬೆಂಗಳೂರಿನ ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ನಡೆದಿತ್ತು. ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಹಾಗೂ ಆಡಳಿತಾರೂಢ ಕಾಂಗ್ರೆಸ್ ನಡುವೆ ವಾಕ್ಸಮರ, ಧರಣಿ ಪ್ರತಿಭಟನೆಗಳಿಗೆ ಅಧಿವೇಶನ ಆಹುತಿಯಾಗಿತ್ತು.
ಚಳಿಗಾಲದ ಅಧಿವೇಶನದಲ್ಲೂ ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ ಹಾಗೂ ವಕ್ಫ್ ಆಸ್ತಿ ವಿವಾದ ಪ್ರತಿಧ್ವನಿಸುವ ಸಾಧ್ಯತೆ ಇದೆ. ಇದೇ ವಿಚಾರಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಮೈತ್ರಿ ಪಕ್ಷಗಳು ಸಜ್ಜಾಗಿವೆ.