ಬಸವರಾಜ ಹೊರಟ್ಟಿ ನೇತೃತ್ವದ ನಿಯೋಗದಿಂದ ಅಮೆರಿಕಕ್ಕೆ ಪ್ರಯಾಣ: 'ಶಾಸಕಾಂಗ ಶೃಂಗಸಭೆ 2025'ರಲ್ಲಿ ಭಾಗಿ

ವಿಧಾನ ಪರಿಷತ್ತಿನ ಸದಸ್ಯರು, ಸಚಿವರುಗಳು, ರಾಜಕೀಯ ತಜ್ಞರು, ನೀತಿ ನಿರೂಪಕರು, ರಾಜಕೀಯ ಮುತ್ಸದ್ದಿಗಳು ಸೇರಿದಂತೆ ಸುಮಾರು 15,000 ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳಲಿದ್ದಾರೆ.;

Update: 2025-07-28 12:20 GMT

 ಬಸವರಾಜ ಹೊರಟ್ಟಿ

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಆಗಸ್ಟ್ 4 ರಿಂದ 6 ರವರೆಗೆ ಅಮೆರಿಕದ ಬೋಸ್ಟನ್ ನಗರದಲ್ಲಿ ನಡೆಯುವ ಪ್ರತಿಷ್ಠಿತ 'ಶಾಸಕಾಂಗ ಶೃಂಗಸಭೆ 2025'ರಲ್ಲಿ ಪಾಲ್ಗೊಳ್ಳಲು ಇಂದು (ಸೋಮವಾರ) ಬೆಳಗಿನ ಜಾವ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದಾರೆ.

ನಿಯೋಗದಲ್ಲಿ ಉಪಸಭಾಪತಿ ಎಂ.ಕೆ. ಪ್ರಾಣೇಶ್, ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ. ನಾರಾಯಣಸ್ವಾಮಿ, ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಧಾನ ಪರಿಷತ್ ಶಾಸಕರುಗಳಾದ ಭಾರತಿ ಶೆಟ್ಟಿ, ಬಲ್ಕೀಸ್ ಬಾನು, ಹೇಮಲತಾ ನಾಯಕ್ ಮತ್ತು ಮಂಜುನಾಥ ಭಂಡಾರಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ.

ಶೃಂಗಸಭೆಯ ಆಯೋಜನೆ ಮತ್ತು ಉದ್ದೇಶ

ರಾಜ್ಯ ಶಾಸಕರ ರಾಷ್ಟ್ರೀಯ ಸಮಾವೇಶ ಮತ್ತು ರಾಷ್ಟ್ರೀಯ ಶಾಸಕರ ಸಮಾವೇಶ ಭಾರತ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ಈ ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ವೇದಿಕೆಯಾಗಿದೆ. ಅಮೆರಿಕದಲ್ಲಿ ನಡೆಯುವ ಈ ಶೃಂಗಸಭೆಯಲ್ಲಿ ಭಾರತ ದೇಶದ ಸಂಸದರು, ವಿವಿಧ ರಾಜ್ಯಗಳ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರು, ಸಚಿವರುಗಳು, ರಾಜಕೀಯ ತಜ್ಞರು, ನೀತಿ ನಿರೂಪಕರು, ರಾಜಕೀಯ ಮುತ್ಸದ್ಧಿಗಳು ಸೇರಿದಂತೆ ಸುಮಾರು 15,000 ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮೂರು ದಿನಗಳ ಈ ಶೃಂಗಸಭೆಯಲ್ಲಿ ಪ್ರಜಾತಂತ್ರವನ್ನು ಗಟ್ಟಿಗೊಳಿಸುವಲ್ಲಿ ಶಾಸನ ಸಭೆಗಳ ಪಾತ್ರ, ಶಾಸನ ಸಭೆಗಳ ಪಕ್ಷಾತೀತ ನಿರ್ವಹಣೆ, ಶಾಸನ ಸಭೆಗಳಿಗೆ ಆರ್ಥಿಕ ಸ್ವಾಯತ್ತತೆ ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಗೋಷ್ಠಿಗಳು, ವಿಚಾರ ಸಂಕಿರಣಗಳು ಮತ್ತು ಸಂವಾದಗಳು ನಡೆಯಲಿವೆ. ಇದು ವಿವಿಧ ದೇಶಗಳ ಶಾಸಕಾಂಗ ವ್ಯವಸ್ಥೆಗಳ ನಡುವೆ ಅನುಭವ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಅಧ್ಯಯನ ಪ್ರವಾಸದ ವಿವರ

ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೊದಲು, ಹೊರಟ್ಟಿ ನೇತೃತ್ವದ ತಂಡವು ನ್ಯೂಯಾರ್ಕ್, ಡಲ್ಲಾಸ್, ಬಫೆಲೋ ನಗರ ಸೇರಿದಂತೆ ಅಮೆರಿಕದ ವಿವಿಧೆಡೆ ಅಧ್ಯಯನ ಪ್ರವಾಸ ನಡೆಸಲಿದೆ. ಆಗಸ್ಟ್ 3 ರಂದು ಬೋಸ್ಟನ್ ನಗರ ತಲುಪಲಿರುವ ನಿಯೋಗ, ಶೃಂಗಸಭೆ ಮುಗಿದ ನಂತರ ಆಗಸ್ಟ್ 7 ರಂದು ಬೋಸ್ಟನ್ ನಗರದಲ್ಲಿ ಮತ್ತಷ್ಟು ಅಧ್ಯಯನ ಪ್ರವಾಸ ನಡೆಸಲಿದೆ. ಬಳಿಕ, ಆಗಸ್ಟ್ 8ರ ರಾತ್ರಿ ಬೋಸ್ಟನ್ ನಗರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಈ ಪ್ರವಾಸವು ಕರ್ನಾಟಕದ ಶಾಸಕರಿಗೆ ಜಾಗತಿಕ ರಾಜಕೀಯ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹೊಸ ವಿಚಾರಗಳನ್ನು ರಾಜ್ಯದ ಅಭಿವೃದ್ಧಿಗೆ ಅಳವಡಿಸಿಕೊಳ್ಳಲು ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 

Tags:    

Similar News