ಅಕ್ರಮ ಗಣಿಗಾರಿಕೆ ಆಸ್ತಿ ಜಪ್ತಿಗೆ ಕಾನೂನು ಅಸ್ತ್ರ: ರಾಜ್ಯಪಾಲ ಅಂಕಿತ
ಈ ಐತಿಹಾಸಿಕ ಕಾನೂನು, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಗುತ್ತಿಗೆದಾರರು, ಸಾಗಾಣಿಕೆದಾರರು, ರಫ್ತುದಾರರು, ಮತ್ತು ಇತರ ಮಧ್ಯವರ್ತಿಗಳು ನಡೆಸಿದ ಸಂಘಟಿತ ಅಪರಾಧ ಹಾಗೂ ವ್ಯವಸ್ಥಿತ ಒಳಸಂಚಿನಿಂದ ಗಳಿಸಿದ ಆಸ್ತಿಯನ್ನು ಜಪ್ತಿ ಮಾಡಲು ಸರ್ಕಾರಕ್ಕೆ ವಿಶೇಷ ಅಧಿಕಾರ ನೀಡಲಿದೆ.;
ಅಕ್ರಮ ಗಣಿಗಾರಿಕೆ ಆಸ್ತಿ ಜಪ್ತಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆಯಿಂದ ಸೃಷ್ಟಿಯಾದ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಮುಟ್ಟುಗೋಲು ಹಾಕಿಕೊಳ್ಳಲು ಅನುವು ಮಾಡಿಕೊಡುವ ಮಹತ್ವದ ಕಾನೂನಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
"ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ಅಧಿನಿಯಮ, 2025"ಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ಇದು ಸೆಪ್ಟೆಂಬರ್ 9 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಗದಗದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಈ ಐತಿಹಾಸಿಕ ಕಾನೂನು, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಗುತ್ತಿಗೆದಾರರು, ಸಾಗಾಣಿಕೆದಾರರು, ರಫ್ತುದಾರರು, ಮತ್ತು ಇತರ ಮಧ್ಯವರ್ತಿಗಳು ನಡೆಸಿದ ಸಂಘಟಿತ ಅಪರಾಧ ಹಾಗೂ ವ್ಯವಸ್ಥಿತ ಒಳಸಂಚಿನಿಂದ ಗಳಿಸಿದ ಆಸ್ತಿಯನ್ನು ಜಪ್ತಿ ಮಾಡಲು ಸರ್ಕಾರಕ್ಕೆ ವಿಶೇಷ ಅಧಿಕಾರ ನೀಡಲಿದೆ. ಇದಕ್ಕಾಗಿ ಪ್ರತ್ಯೇಕವಾಗಿ 'ವಸೂಲಾತಿ ಆಯುಕ್ತ'ರನ್ನು ನೇಮಿಸಲಾಗುತ್ತದೆ. ಈ ಆಯುಕ್ತರು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡವರ ಚರ ಮತ್ತು ಸ್ಥಿರಾಸ್ತಿಗಳನ್ನು ಗುರುತಿಸಿ, ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ವಸೂಲಾತಿ ಮಾಡುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ.
ಕಾನೂನು ಜಾರಿಯ ಹಿನ್ನೆಲೆ
ಅಕ್ರಮ ಗಣಿಗಾರಿಕೆ ಕುರಿತು ನಂದಿ ಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ, ಎಚ್.ಕೆ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಆಗಸ್ಟ್ 13 ರಂದು ತನ್ನ ವರದಿಯನ್ನು ಹಾಗೂ ಕರಡು ಮಸೂದೆಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಿತ್ತು. ಸಚಿವ ಸಂಪುಟವು ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಿ, ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನುಮೋದನೆ ನೀಡಿತ್ತು.
ಈ ಮಸೂದೆಯನ್ನು ಆಗಸ್ಟ್ 18ರಂದು ವಿಧಾನಸಭೆಯಲ್ಲಿ ಮತ್ತು ಆಗಸ್ಟ್ 22ರಂದು ವಿಧಾನ ಪರಿಷತ್ತಿನಲ್ಲಿ ಮಂಡಿಸಿ, ಉಭಯ ಸದನಗಳ ಒಪ್ಪಿಗೆ ಪಡೆಯಲಾಗಿತ್ತು. ಇದೀಗ ರಾಜ್ಯಪಾಲರು ಅಂಕಿತ ಹಾಕುವ ಮೂಲಕ ಈ ಕಾನೂನು ಜಾರಿಗೆ ಬಂದಿದೆ.
"ಈ ಐತಿಹಾಸಿಕ ನಿರ್ಣಯದಿಂದ ರಾಜ್ಯದಲ್ಲಿ ಆರ್ಥಿಕ ಶಿಸ್ತು ತರಲು ಸಾಧ್ಯವಾಗಲಿದೆ. ಕನ್ನಡಿಗರ ಆಸ್ತಿಯನ್ನು ಕನ್ನಡಿಗರಿಗೆ ಮರಳಿಸುವ ನಮ್ಮ ಸರ್ಕಾರದ ಉದ್ದೇಶ ಈಡೇರಿದೆ. ನಾವು ನೀಡಿದ್ದ ವಾಗ್ದಾನವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದ್ದೇವೆ" ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.