'ಮಾಂಗಲ್ಯ ಸರ ಉಳಿಸಿ' ಅಭಿಯಾನದಿಂದ ಎಚ್ಚೆತ್ತ ಸರ್ಕಾರ: ಮೈಕ್ರೋ ಫೈನಾನ್ಸ್ ಹಾವಳಿ ತಡೆಯಲು ಸುಗ್ರೀವಾಜ್ಞೆ ತರಲು ನಿರ್ಧಾರ
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಸಂಬಂಧ ಮಹಿಳೆಯರು ʼಮಾಂಗಲ್ಯ ಸರ ಉಳಿಸಿ ಅಭಿಯಾನʼ ಆರಂಭಿಸಿರುವ ಬೆನ್ನಿಗೇ ಎಚ್ಚೆತ್ತುಕೊಂಡಿರುವ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾನೂನು ತರಲಿದೆ.;
ರಾಜ್ಯದಲ್ಲಿ ಮಿತಿ ಮೀರುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿಗೆ ತಡೆ ಹಾಕಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಸಂಬಂಧ ಮಹಿಳೆಯರು ಮಾಂಗಲ್ಯ ಸರ ಉಳಿಸಿ ಅಭಿಯಾನ ಆರಂಭಿಸಿರುವ ಬೆನ್ನಿಗೇ ಎಚ್ಚೆತ್ತುಕೊಂಡಿರುವ ಸರ್ಕಾರ ಈ ಸಂಬಂಧ ಸುಗ್ರೀವಾಜ್ಞೆ ಮೂಲಕ ಕಾನೂನೊಂದನ್ನು ತರಲು ಯೋಜನೆ ರೂಪಿಸಿದೆ.
ಈ ಸಂಬಂಧ ಬೆಂಗಳೂರಿಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ʼಮೈಕ್ರೋ ಫೈನಾನ್ಸ್‌ನಿಂದ ಈಗಾಗಲೇ ತೊಂದರೆ ಆಗುತ್ತಿದೆ ಎಂದು ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ದೂರು ಕೊಟ್ಟಿದ್ದಾರೆ. ಈಗಿರುವ ಕಾನೂನಿನ ನಿಯಮಗಳು ಅಷ್ಟೂ ಕಠಿಣವಾಗಿಲ್ಲ ಎಂಬುದು ನಮ್ಮ ಗಮನಕ್ಕೂ ಬಂದಿದೆʼ ಎಂದು ಹೇಳಿದ್ದಾರೆ.
ಬ್ಯಾಂಕುಗಳ ನಿಯಮಾವಳಿಯಂತೆ ಹಣ ವಸೂಲಿ ಮಾಡುವುದಕ್ಕೆ ಕಾನೂನಿದೆ. ಅದೇ ರೀತಿ ಸಾಲ ಪಡೆದವರನ್ನು ರಕ್ಷಣೆ ಮಾಡುವುದಕ್ಕೂ ಕಾನೂನಿದೆ. ಆದರೆ ಸಾಲ ಪಡೆದವರನ್ನು ರಕ್ಷಣೆ ಮಾಡುವ ಕಾನೂನು ಅಷ್ಟು ಕಠಿಣವಾಗಿಲ್ಲ, ಅದು ಸಾಕಾಗುತ್ತಿಲ್ಲ ಎಂಬ ವರದಿಗಳು ಗೃಹ ಇಲಾಖೆಯಿಂದಲೇ ಬಂದಿವೆ. ಅಗತ್ಯ ಕಂಡು ಬಂದಲ್ಲಿ ಮುಂದಿನ ದಿನಗಳಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತರಲು ತೀಮಾನಿಸಿದ್ದೇವೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಸಾಲ ಪಡೆದವರ ಮೇಲೆ ಆಗುತ್ತಿರುವ ದೌರ್ಜನ್ಯ, ಕಿರುಕುಳ ನಿಲ್ಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಸಾಲ ಮರುಪಾವತಿ ಮಾಡದಿದ್ದರೆ ಹೀಗಾಗುತ್ತದೆ. ಸಾಲ ನೀಡಿದವರು ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಅವಕಾಶವಿದೆ. ಬ್ಯಾಂಕ್‌ನಲ್ಲಿ ಸಾಲ ಪಡೆಯುವಾಗ ಹತ್ತಾರು ಕಡೆಗಳಲ್ಲಿ ಸಹಿಯನ್ನು ಮಾಡಿಸಿಕೊಂಡಿರುತ್ತಾರೆ. ಸಹಿಯನ್ನು ಯಾಕೆ ಮಾಡುತ್ತಿದ್ದೇವೆ ಎಂಬುದು ಕೂಡ ಗ್ರಾಹಕರಿಗೆ ಗೊತ್ತಿರುವುದಿಲ್ಲ. ಆ ಆಧಾರದ ಮೇಲೆ ಅವರು ಹೋಗಿ ಮನೆ ರೇಡ್ ಮಾಡುವುದು ಮುಂತಾದವುಗಳನ್ನು ಮಾಡುತ್ತಿದ್ದಾರೆ. ಅದನ್ನು ಕಾನೂನಿನ ಪ್ರಕಾರವೇ ನಾವು ತಡೆಯಬೇಕು. ಈಗಾಗಲೇ ಕಾನೂನು ಸಚಿವರೊಂದಿಗೆ ನಾನು ಮಾತನಾಡಿದ್ದೇನೆ. ಈಗಾಗಲೇ ಕಾನೂನು ಸಚಿವರು ಗಮನ ಹರಿಸಿದ್ದಾರೆ. ಈ ಕುರಿತು ಹೇಳಿಕೆ ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಕಠಿಣ ಮಾಡುತ್ತೇವೆ ಎಂದಿದ್ದಾರೆ. ಮುಖ್ಯಮಂತ್ರಿಗಳು ಒಂದು ಸಭೆಯನ್ನೂ ಕರೆದಿದ್ದಾರೆ. ಆ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್ ದಂಧೆಗೆ ಕಡಿವಾಣ ಹಾಕಲು, ಹಾಗೂ ಬಡವರ ಶೋಷಣೆ ಮಾಡುವುದನ್ನು ತಪ್ಪಿಸಲು ಹೊಸ ಕಾನೂನೊಂದನ್ನು ರಚಿಸಿ ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ಯೋಚಿಸಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಮುಂದಿನ ವಿಧಾನಸಭಾ ಅಧಿವೇಶನದವರೆಗೆ ಕಾಯುವುದರಿಂದ ತಡವಾಗುವ ಕಾರಣದಿಂದ ಸುಗ್ರೀವಾಜ್ಞೆ ಮೂಲಕ ಕಾನೂನು ರೂಪಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ.
ದುಪ್ಪಟ್ಟು ಬಡ್ಡಿ
ಮೈಕ್ರೋ ಫೈನಾನ್ಸ್ ಮೂಲಕ ಸಾಲ ಕೊಟ್ಟು, ನಂತರ ದುಪ್ಪಟ್ಟು ಬಡ್ಡಿ ದರದಲ್ಲಿ ಸಾಲ ವಸೂಲಿ ಮಾಡುವ ದಂಧೆ ರಾಜ್ಯದಲ್ಲಿ ಮಿರಿ ಮೀರಿದೆ. ಹಲವು ಕಡೆಗಳಲ್ಲಂತೂ ವಸೂಲಿ ನೆಪದಲ್ಲಿ ಫೈನಾನ್ಸ್‌ಗಳು ಅಮಾನವೀಯವಾಗಿ ಮನೆ ಖಾಲಿ ಮಾಡಿಸಿರುವ ಘಟನೆಗಳು ನಡೆದಿವೆ. ಇದೇ ವೇಳೆ ಮೈಕ್ರೋ ಫೈನಾನ್ಸ್ ಹಾವಳಿಗೆ ತತ್ತರಿಸಿರುವ ಹಾವೇರಿ ಜಿಲ್ಲೆಯ ಗೃಹಿಣಿಯರು ತಮ್ಮ ಮಾಂಗಲ್ಯ ಸರವನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಳುಹಿಸಲು ಮುಂದಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಕಠಿಣ ಕಾನೂನು ಜಾರಿಗೆ ತರುವ ಭರವಸೆ ಕೊಟ್ಟಿದೆ.
'ಮಾಂಗಲ್ಯ ಸರ ಉಳಿಸಿ' ಅಭಿಯಾನ
ಇನ್ನು ಮೈಕ್ರೋ ಫೈನಾನ್ಸ್ ಹಾವಳಿಗೆ ತತ್ತರಿಸಿ ಹೋಗಿರುವ ಹಾವೇರಿ ಜಿಲ್ಲೆಯ ಗೃಹಣಿಯರು ರಾಜ್ಯ ರೈತ ಸಂಘದ ಸಹಾಯ ಪಡೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮೊರೆ ಹೋಗಿದ್ದಾರೆ. ಮೈಕ್ರೋ ಫೈನಾನ್ಸ್ ಕಾಟಕ್ಕೆ ಬೇಸತ್ತಿರುವ ಮಹಿಳೆಯರು ತಮ್ಮ ಮಾಂಗಲ್ಯವನ್ನೇ ಮುಖ್ಯಮಂತ್ರಿಗಳಿಗೆ ರವಾನಿಸಲು ಮುಂದಾಗಿದ್ದಾರೆ. ಜೊತೆಗೆ ಮೈಕ್ರೋ ಪೈನಾನ್ಸ್ ಹಾವಳಿ ತಪ್ಪಿಸಿ ಮಾಂಗಲ್ಯ ಉಳಿಸಿ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಹಾವೇರಿಯಿಂದ ಪೋಸ್ಟ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಂಗಲ್ಯ ಸರವನ್ನೇ ರವಾನಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ಅಳಲು ಹಂಚಿಕೊಂಡಿರುವ ಮಹಿಳೆಯರು, ಮನೆಯಲ್ಲಿ ನೆಮ್ಮದಿಯಾಗಿ ಇರುವಂತಿಲ್ಲ. ಮನೆಗೆ ಬಂದರೆ ಇವರ ಕಿರುಕುಳ, ಇವರು ಬಂದರೆ ಸುತ್ತಮುತ್ತಲಿನವರ ಕೇಳುವಂತಾಗಿದೆ. ನಾವು ಈಗಾಗಲೇ ತಾಲೂಕು ಕಚೇರಿಗೆ ಹಾಗೂ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ಆರೋಪಿಸಿದ್ದಾರೆ.
ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಇತ್ತೀಚೆಗೆ ನಾಯಿ ಕೊಡೆಗಳಂತೆ ಮೈಕ್ರೋ ಫೈನಾನ್ಸ್ ಕಂಪನಿಗಳು ಹುಟ್ಟಿಕೊಂಡಿವೆ. ಸಾಲ ಕೊಟ್ಟು ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಸಂಜೆ 7 ಗಂಟೆಯಿಂದ ರಾತ್ರಿ 11 ವರೆಗೆ ಮನೆಯ ಮುಂದೆ ಬಂದು ಹಣ ಮತ್ತು ಅದಕ್ಕೆ ಬಡ್ಡಿಯನ್ನು ಕಟ್ಟುವಂತೆ ಅವಮಾನಿಸುತ್ತಾರೆ. ಕೆಲವು ಮೈಕ್ರೋ ಫೈನಾನ್ಸ್‌ಗಳು, ಕೆಲ ಧರ್ಮಸ್ಥಳ ಸ್ವಸಹಾಯ ಗುಂಪುಗಳು ದೌರ್ಜನ್ಯ ಮಾಡುತ್ತಿವೆ. ಅವುಗಳನ್ನು ನಿಯಂತ್ರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜರುಗುವ ಘಟನೆಗಳಿಗೆ ನೀವೇ ಹೊಣೆ ಎಂದಿದ್ದಾರೆ.
ಮಹಿಳೆಯರ ಅಭಿಯಾನದಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ಜ. 25 ರಂದು ಆರೋಪ ಎದುರಿಸುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ನೋಟಿಸ್ ಕೊಟ್ಟು ಸಭೆಗೆ ಹಾಜರಾಗುವಂತೆ ಸೂಚಿಸಿದೆ. ಈ ಕುರಿತು ಆದೇಶ ಮಾಡಿರುವ ರಾಣಿಬೆನ್ನೂರು ತಹಶೀಲ್ದಾರ್ ಸಭೆಗೆ ಹಾಜರಾಗುವಂತೆ ಐಡಿಎಫ್‌ಸಿ ಬ್ಯಾಂಕ್, L & T ಫೈನಾನ್ಸ್, ಭಾರತ್ ಬ್ಯಾಂಕ್ (ಇಂಡಸ್ ಇಂಡ್ ಬ್ಯಾಂಕ್), ಪಿನ್‌ಕೇರ್ ಫೈನಾನ್ಸ್, ಮಣಿಪುರಂ ಫೈನಾನ್ಸ್, ಉಜ್ಜೀವನ ಫೈನಾನ್ಸ್, ಇಕ್ವಾಟಾಸ್ ಫೈನಾನ್ಸ್ ಸೇರಿದಂತೆ 17 ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ನೋಟೀಸ್ ಕೊಟ್ಟಿದ್ದಾರೆ.