ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭೂಕುಸಿತ ; ವಾಹನ ಸಂಚಾರ ಸ್ಥಗಿತ

ಜಿಲ್ಲಾಡಳಿತ ಮಣ್ಣು ತೆರವು ಕಾರ್ಯಾಚರಣೆ ಕೈಗೊಂಡಿದೆ. ಪದೇ ಪದೇ ಮಣ್ಣು ಕುಸಿಯುತ್ತಿರುವುದು ಆತಂಕ ಸೃಷ್ಟಿಸಿದೆ.;

Update: 2025-07-17 04:38 GMT

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರೀ ಮಳೆಗೆ ಭೂ ಕುಸಿತ ಸಂಭವಿಸಿದೆ.

ಕಡಬ ತಾಲೂಕಿನ ಮಣ್ಣಗುಂಡಿ ಬಳಿ ಗುಡ್ಡ ಕುಸಿದಿದ್ದು, ಇದರಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಜಿಲ್ಲಾಡಳಿತ ಮಣ್ಣು ತೆರವು ಕಾರ್ಯಾಚರಣೆ ಕೈಗೊಂಡಿದೆ. ಪದೇ ಪದೇ ಮಣ್ಣು ಕುಸಿಯುತ್ತಿರುವುದು ಆತಂಕ ಸೃಷ್ಟಿಸಿದೆ.

ಮಧ್ಯಾಹ್ನದವರೆಗೂ ಮಣ್ಣು ತೆರವು ಕಾರ್ಯ ಮುಂದುವರಿಯುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗದಲ್ಲಿ ತೆರಳುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಮನವಿ‌‌ ಮಾಡಿದ್ದಾರೆ.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ‌ ಸಂಚಾರ ಸುಗಮ

ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸಾಗುವ ಮಾರ್ಗದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಧರ್ಮಸ್ಥಳ ಕ್ರಾಸ್​​​ನಿಂದ ಸ್ವಲ್ಪ ಮುಂದೆ ಗುಡ್ಡ ಕುಸಿತ ಉಂಟಾಗಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ಹೋಗುವವರು ಬದಲಿ ಮಾರ್ಗ ಬಳಸಬೇಕಿದೆ.

ಬದಲಿ ಮಾರ್ಗ ಬಳಸಲು ಸಲಹೆ

ನೆಲ್ಯಾಡಿ ಬಳಿ ಎಡಕ್ಕೆ ಹೋಗಿ ಕೊಕ್ಕಡ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 75 ತಲುಪಬಹುದಾಗಿದೆ. ಆದರೆ ಇದು ಸಣ್ಣ ವಾಹನಗಳು ಮಾತ್ರ ಬಳಸಬಹುದಾದ ಬದಲಿ ಮಾರ್ಗವಾಗಿದೆ.

ಬೆಂಗಳೂರಿಂದ ಮಂಗಳೂರು ಕಡೆ ಬರುವವರು, ಕೊಕ್ಕಡ ಮೂಲಕವಾಗಿ ನೆಲ್ಯಾಡಿ ತಲುಪಬಹುದು‌.

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಬುಧವಾರ ಮಧ್ಯಾಹ್ನದಿಂದ ತಡರಾತ್ರಿವರೆಗೆ ನಿರಂತರ ಮಳೆಯಾಗಿದ್ದು, ಉಳ್ಳಾಲ ಬೈಲ್​​ನ ಕೆಲ ಮನೆಗಳಿಗೆ ನೀರು ನುಗ್ಗಿದೆ. ಕುಂಪಲ ನಿಸರ್ಗ ಲೇಔಟ್ ಕೆಲ ಮನೆಗಳಿಗೆ ನೀರು ನುಗ್ಗಿದೆ.

ಮಂಗಳೂರು ನಗರದ ಕೆಲವೆಡೆ ಗುಡ್ಡ ಕುಸಿತ ಸಂಭವಿಸಿದೆ. ನಗರ ಹೊರವಲಯದ ಅದ್ಯಪಾಡಿ – ಕೈಕಂಬ‌ ಸಂಪರ್ಕಿಸುವ ರಸ್ತೆಮೇಲೆ ಮಣ್ಣು ಬಿದ್ದಿದೆ.

ಮಂಗಳೂರಿನ ಸರ್ಕ್ಯೂಟ್ ಹೌಸ್‌ ರಸ್ತೆಯಲ್ಲಿ ಗುಡ್ಡ ಕುಸಿತ

ನಿರಂತರ ಮಳೆಗೆ ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ರಸ್ತೆ ಬದಿಯ ಗುಡ್ಡ ಕುಸಿದಿದ್ದು, ಆ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗಿದೆ.

ಕಾವೂರಿನ ಮುಲ್ಲಕ್ಕಾಡ್ ಫೋರ್ಡ್ ಮೇನ್ ನಲ್ಲಿ ಓಮನ ಶೆಟ್ಟಿಗಾ‌ರ್ ಅವರ ಮನೆಯ ಎದುರಿನ ಬಾವಿ ಕುಸಿದಿದ್ದು ಮನೆಯ ಅಂಗಳದಲ್ಲೂ ಬಿರುಕು ಕಾಣಿಸಿಕೊಂಡಿದೆ.

Tags:    

Similar News