Govt Land Grabbing | ದೊಡ್ಡಬಳ್ಳಾಪುರದಲ್ಲಿ ಅಧಿಕಾರಿಗಳಿಂದಲೇ ಭೂ ಅಕ್ರಮ; ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು
ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿಯ ಹುಲಿಕುಂಟೆ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಎಕರೆ ಸರ್ಕಾರಿ ಭೂಮಿಯನ್ನು ಡೆವಲಪರ್ಸ್ ಗೆ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.;
ಕಂದಾಯ ಇಲಾಖೆಯಲ್ಲಿ ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರ ಪ್ರಕರಣಗಳಿಗೆ ಕಡಿವಾಣ ಹಾಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ಸಲ್ಲಿಸಿದ್ದಾರೆ. ಕಂದಾಯ ಇಲಾಖೆಯಲ್ಲಿನ ಆಶಿಸ್ತಿನ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಸಚಿವ ಕೃಷ್ಣ ಬೈರೆಗೌಡ ಅವರು ವಿಫಲರಾಗಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿದರೂ ಸ್ಪಂದಿಸದೆ ಅಕ್ರಮ ವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಭೂ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.
ದೂರಿನ ವಿವರ ಏನು?
ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿಯ ಹುಲಿಕುಂಟೆ ಗ್ರಾಮದ ಸರ್ವೆ ಸಂಖ್ಯೆ 150 ರಲ್ಲಿ ಚನ್ನವೀರಯ್ಯ, ಗಂಗಯ್ಯ, ರಾಜಣ್ಣ, ಸಂಪತ್ ಕುಮಾರ್ ತಲಾ ಎರಡು ಎಕರೆ, ಸುಜಾತ, ಕಲಾವತಿ ಅವರು ತಲಾ ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. ಇವರಿಗೆ ಸರ್ಕಾರ ಸಾಗುವಳಿ ಮತ್ತು ಹಂಗಾಮಿ ಸಾಗುವಳಿ ಚೀಟಿ ಮಂಜೂರು ಮಾಡಿತ್ತು.
ಜಮೀನಿನ ಅನುಭೋಗದಲ್ಲಿದ್ದ ಈ ರೈತರು ಪಲ್ವಿತ್ ಡೆವಲಪರ್ಸ್ ಎಲ್ಎಲ್‌ಪಿಗೆ 2024 ಏ. 21ರಂದು ಜಿಪಿಎ ಪತ್ರದ ಮೂಲಕ ಮಾರಾಟ ಮಾಡಿದ್ದರು. ಡೆವಲಪರ್ಸ್ ಕಂಪನಿಯು ಖಾತಾ ಬದಲಾವಣೆಗಾಗಿ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಉಪ- ವಿಭಾಗಾಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡದೆ 2024 ನವೆಂಬರ್ 04 ರಂದು ಖಾತಾ ಬದಲಾವಣೆಗೆ ಆದೇಶ ಹೊರಡಿಸಿದ್ದರು.
ಈ ಜಮೀನುಗಳಿಗೆ ಪೋಡಿ ಮತ್ತು ಹದ್ದುಬಸ್ತು ಆಗಿರಲಿಲ್ಲ. ಪ್ರತ್ಯೇಕ ನಕ್ಷೆ ತಯಾರು ಮಾಡಿರಲಿಲ್ಲ. ಪಹಣಿಯಲ್ಲಿ 'ಪಿ' ಸಂಖ್ಯೆ ತೆಗೆದುಹಾಕಿರಲಿಲ್ಲ. ಈ ಹಂತದಲ್ಲಿ ಜಿಪಿಎ ಮೂಲಕ ಮಾರಾಟ ಮಾಡಿರುವುದು ಕಾನೂನು ಬಾಹಿರ. ಕಂದಾಯ ಇಲಾಖೆಯ ನಿಯಮದಡಿ ಸೂಕ್ತ ಪ್ರಕ್ರಿಯೆ ನಡೆಸದೇ ಬೇರೆ ಯಾರಿಗೂ ಜಮೀನು ಮಾರಾಟ ಮಾಡುವಂತಿಲ್ಲ. ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳು ಜಿಪಿಎ ಆಧಾರದ ಮೇಲೆ ಖಾತಾ ಬದಲಾಣೆಗೆ ಶಿಫಾರಸ್ಸು ಮಾಡುವಂತಿಲ್ಲ. ಹೀಗಿರುವಾಗ ಅಧಿಕಾರಿಗಳು, ಡೆವಲಪರ್ಸ್ ಜೊತೆ ಶಾಮೀಲಾಗಿ ಕಾನೂನು ಬಾಹಿರವಾಗಿ ಖಾತಾ ಬದಲಾವಣೆಗೆ ಆದೇಶ ಹೊರಡಿಸಿದ್ದಾರೆ. ದೊಡ್ಡಬಳ್ಳಾಪುರ ಉಪ ವಿಭಾಗದ ಎಲ್ಲಾ ವಿಚಾರಣೆಗಳ ಕಡತಗಳನ್ನು ತನಿಖೆಗೊಳಪಡಿಸಿ, ಕಾನೂನು ಬಾಹಿರ ಚಟುವಟಿಗಳಲ್ಲಿ ತೊಡಗಿರುವ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನು ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಎ ಸಿ, ತಹಶೀಲ್ದಾರ್ ಅಮಾನತಿಗೆ ಆಗ್ರಹ
ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಜಂಟಿ ಕರಾರು ಮಾಡಿಕೊಂಡು ಹತ್ತಾರು ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಮೆಸರ್ಸ್ ಪಲ್ವಿತ್ ಡೆವಲಪರ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಕೂಡ ಶಾಮಿಲಾಗಿ ಕರ್ತವ್ಯಲೋಪ ಎಸಗಿರುವುದರಿಂದ ಈ ಬಗ್ಗೆ ಪರಿಶೀಲಿಸಿ ಸರ್ಕಾರಿ ಜಮೀನನ್ನು ಮರಳಿ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರದಿಂದ ಮಂಜೂರಾದ ಈ ಜಮೀನನ್ನು ಪೋಡಿ, ದುರಸ್ತಿ ಮಾಡದೆ ಕಾನೂನುಬಾಹಿರವಾಗಿ ಖಾಸಗಿ ಡೆವಲಪರ್ಸ್ ಗೆ ಖಾತೆ ಮಾಡಿಕೊಟ್ಟಿರುವ ದೊಡ್ಡಬಳ್ಳಾಪುರದ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಎನ್, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಜಮೀನನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.