Karnataka Bandh | ಬಂದ್‌ಗೆ ನೀರಸ ಪ್ರತಿಕ್ರಿಯೆ; ಸರ್ಕಾರದ ವಿರುದ್ಧ ಹೋರಾಟ ಹತ್ತಿಕ್ಕಿದ ಆರೋಪ
ಪ್ರತಿಭಟನೆ ನಡೆಸಲು ಮುಂದಾಗುವ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯದ ಎಲ್ಲಾ ಕಡೆ ಕನ್ನಡ ಪರ ಹೋರಾಟಗಾರರಿಗೆ ನೋಟಿಸ್ ನೀಡಲಾಗಿದೆ. ಸರ್ಕಾರ ಹೋರಾಟವನ್ನು ಹತ್ತಿಕ್ಕುತ್ತಿದೆ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಾ.ರಾ.ಗೋವಿಂದ್ ದೂರಿದ್ದಾರೆ.;
ಬೆಳಗಾವಿಯಲ್ಲಿ ಎಂಇಎಸ್ ಪುಂಡರ ದೌರ್ಜನ್ಯ ಖಂಡಿಸಿ, ಮಹಾದಾಯಿ ಹಾಗೂ ಮೇಕೆದಾಟು ನೀರಾವರಿ ಯೋಜನೆಗಳ ಜಾರಿಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗಾವಿ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆ ಹೊರತುಪಡಿಸಿ ಉಳಿದೆಡೆ ಬಂದ್ ಪರಿಣಾಮಕಾರಿಯಾಗಿಲ್ಲ. ಬೆಳಿಗ್ಗೆ ಆರು ಗಂಟೆಯಿಂದಲೇ ರಸ್ತೆಗಿಳಿದ ಕನ್ನಡ ಪರ ಹೋರಾಟಗಾರರು ಹಲವೆಡೆ ಬಂದ್ ಮಾಡಿಸಲು ಯತ್ನಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಪೊಲೀಸರು ಹಾಗೂ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಹಲವೆಡೆ ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಬಂದ್ ಹತ್ತಿಕ್ಕಲು ರಾಜ್ಯ ಸರ್ಕಾರ ಪೊಲೀಸ್ ಬಲ ಬಳಸಿದ ಕುರಿತು ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಆನಂದರಾಬ್ ವೃತ್ತದಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ಬಸ್ ಸಂಚಾರ ತಡೆಯಲಾಯಿತು. ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದರು.
ಇನ್ನು ಕನ್ನಡ ಸಂಘಟನೆಗಳಿಂದಲೇ ಕರ್ನಾಟಕ ಬಂದ್‌ಗೆ ಅಪಸ್ವರ ಕೇಳಿ ಬಂದಿದ್ದರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಎಸ್ಆರ್‌ಟಿಸಿ, ಬಸ್, ಆಟೊ, ಓಲಾ ಹಾಗೂ ಉಬರ್ ಸೇರಿದಂತೆ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿತ್ತು.
ಕನ್ನಡಪರ ಹೋರಾಟ ಹತ್ತಿಕ್ಕಿದ ಸರ್ಕಾರ
ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಕುರಿತು ಮಾತನಾಡಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಾ.ರಾ.ಗೋವಿಂದ್, ಕನ್ನಡ ಭಾಷೆ, ನೆಲ ಮತ್ತು ಜಲದ ಪರವಾಗಿ ದಶಕಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ. ವಾಟಾಳ್ ನಾಗರಾಜ್ ಅವರು ಕಳೆದ 60 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ನಾನು 40 ವರ್ಷಗಳಿಂದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ, ಈಗಿನ ಪರಿಸ್ಥಿತಿ ಹಿಂದೆಂದೂ ಕಂಡಿರಲಿಲ್ಲ. ರಾಜ್ಯ ಸರ್ಕಾರ ಕನ್ನಡಕ್ಕಾಗಿ ನಡೆಯುತ್ತಿರುವ ಹೋರಾಟವನ್ನೇ ಹತ್ತಿಕ್ಕಲು ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆ ನಡೆಸಲು ಮುಂದಾಗುವ ಹೋರಾಟಗಾರರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ರಾಜ್ಯದ ಎಲ್ಲಾ ಕಡೆ ಕನ್ನಡ ಪರ ಹೋರಾಟಗಾರರಿಗೆ ನೋಟಿಸ್ ನೀಡಲಾಗಿದೆ. ಹಾಗಾಗಿ ಬಂದ್ ಪರಿಣಾಮಕಾರಿಯಾಗಿ ಆಗಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಪುಂಡರನ್ನು ಗಡಿಪಾರು ಮಾಡಿ
ಕನ್ನಡದ ನೆಲ ಜಲ, ಭಾಷೆ ಹಾಗೂ ಕನ್ನಡಿಗರ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವವರ ಮೇಲೆ ಪೊಲೀಸರು ದೌರ್ಜನ್ಯ ಮಾಡುತ್ತಿರುವುದನ್ನು ನಾವು ಸಹಿಸಲ್ಲ. ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ತಾಕತ್ತಿದ್ದರೆ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಮಾಡಿದ ಮರಾಠಿ ಪುಂಡರನ್ನು ಗಡಿಪಾರು ಮಾಡಲಿ ಎಂದು ಸಾ.ರಾ. ಗೋವಿಂದ್ ಸವಾಲು ಹಾಕಿದರು.
ನಾವು ಈಗಲೇ ಹೋರಾಟ ನಿಲ್ಲಿಸುತ್ತೇವೆ. ಸರ್ಕಾರದಿಂದ ಸಾಧ್ಯವಾದರೆ ಎಂಇಎಸ್ ನಿಷೇಧ ಮಾಡಲಿ, ಮಹದಾಯಿ, ಮೇಕೆದಾಟು ಯೋಜನೆ ಜಾರಿ ಮಾಡಲಿ ಎಂದು ಹೇಳಿದ ಅವರು, ಆರು ತಿಂಗಳಲ್ಲಿ ಮಹದಾಯಿ ಯೋಜನೆ ಜಾರಿ ಮಾಡುತ್ತೇವೆ, ಇಲ್ಲದಿದ್ದರೆ ಅಧಿಕಾರದಿಂದ ಕೆಳಗಿಳಿಯುತ್ತೇವೆ ಎಂದು ಹೇಳುವ ಧೈರ್ಯ ಸರ್ಕಾರದ ಯಾವ ನಾಯಕರಿಗೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದಲ್ಲಿ ನೀರಿಗೆ ಹಾಹಾಕಾರ ಎದುರಾಗಿದೆ. ಪ್ರಧಾನಿ ಮೋದಿ ಅವರು ಇಷ್ಟೂ ದಿನ ರಾಜ್ಯವನ್ನು ಕಡೆಗಣಿಸಿದ್ದಾರೆ. ಇದರ ಬಗ್ಗೆ ರಾಜ್ಯ ಸಂಸದರು ದನಿ ಎತ್ತಿದ್ದಾರಾ?, ಪ್ರಧಾನಿ ಬಳಿ ರಾಜ್ಯದ ಪರ ಮಾತನಾಡುವ ತಾಕತ್ತು, ದಮ್ ರಾಜ್ಯ ಬಿಜೆಪಿ ನಾಯಕರಿಗೆ ಇದೆಯಾ ಎಂದು ಅವರು ವಾಗ್ದಾಳಿ ನಡೆಸಿದರು.
ಅಧಿಕಾರಕ್ಕೋಸ್ಕರ ಏನೆಲ್ಲಾ ಮಾಡುತ್ತೀದ್ದೀರಾ, ಒಂದು ದಿನವಾದರೂ ಕನ್ನಡ ನಾಡಿಗಾಗಿ, ಕನ್ನಡಿಗರ ರಕ್ಷಣೆಗಾಗಿ ಕಾಳಜಿ ತೋರಿಸಿ ಎಂದು ಗೋವಿಂದ್ ಪ್ರಶ್ನಿಸಿದರು.
ಕನ್ನಡಿಗರಿಗೆ ಬಂದ್ ಬೇಕಾಗಿದೆ
ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಬಂದ್ ಬಗ್ಗೆ ಇಪ್ಪತ್ತು ದಿನಗಳಿಂದ ಚರ್ಚೆಯಾಗುತ್ತಿದೆ. ಹೋಟೆಲ್, ಚಿತ್ರೋದ್ಯಮ, ಸಾರಿಗೆ ಸಂಘಟನೆಗಳಿಗೆ ಬಂದ್ ಬೇಡವಾಗಿರಬಹುದು. ಆದರೆ, ಇದು ಕನ್ನಡಿಗರಿಗೆ ಬೇಕಾಗಿದೆ. ಕರ್ನಾಟಕದ ರಕ್ಷಣೆಗಾಗಿ ಬೇಕಾಗಿದೆ. ನಾವು ಕನ್ನಡನಾಡಿಗಾಗಿ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ನೆಲ-ಜಲ, ಭಾಷೆಗೆ ಸಂಬಂಧಿಸಿ ಸಾಕಷ್ಟು ಬೇಡಿಕೆಗಳಿವೆ. ಇಷ್ಟು ವರ್ಷ ಅಧಿಕಾರ ನಡೆಸಿದ ಸರ್ಕಾರಗಳು ಯಾವುದನ್ನಾದರೂ ಈಡೇರಿವೇ. ಈಡೇರಿಸಿದ್ದರೆ ನಾವೇಕೆ ಬಂದ್‌ಗೆ ಕರೆ ನೀಡುತ್ತಿದ್ದೆವು ಎಂದು ಪ್ರಶ್ನಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅವಧಿಯಲ್ಲಿ ಕರ್ನಾಟಕ ಬಂದ್ ಅವಶ್ಯಕತೆ ಕುರಿತು ಕೆಲವರು ಪ್ರಶ್ನಿಸುತ್ತಿದ್ದಾರೆ. ಮಾ.22 ರಂದು ಪರೀಕ್ಷೆ ಇಲ್ಲದಿರುವುದನ್ನು ಶಿಕ್ಷಣ ಸಚಿವರಿಂದ ದೃಢಪಡಿಸಿಕೊಂಡೇ ಬಂದ್‌ಗೆ ಕರೆ ನೀಡಿದ್ದೆವು. ಸುಖಾಸುಮ್ಮನೆ ಹೇಳಿಕೆ ನೀಡುವುದನ್ನು ಬಿಟ್ಟು, ಕನ್ನಡ ನಾಡು ನುಡಿ, ಜಲ-ನೆಲದ ಬಗ್ಗೆ ಹೋರಾಟಕ್ಕೆ ಬನ್ನಿ ಎಂದು ಹೇಳಿದರು.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಹೋರಾಟಗಾರರು ವಾಹನ ಸವಾರರಿಗೆ ಹೂವು ನೀಡಿ ಪ್ರತಿಭಟನೆ ನಡೆಸಿದರು
ವಾಹನ ಸವಾರರಿಗೆ ಹೂ ನೀಡಿ ಪ್ರತಿಭಟನೆ
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಪರ ಹೋರಾಟಗಾರರು ರಸ್ತೆಯಲ್ಲಿ ನಿರಾತಂಕವಾಗಿ ಸಾಗುತ್ತಿದ್ದ ಬಸ್ ಹಾಗೂ ದ್ವಿಚಕ್ರ ವಾಹನ ಚಾಲಕರಿಗೆ ಹೂಗಳನ್ನು ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ರೇಸ್ ಕೋರ್ಸ್ ರಸ್ತೆಯಲ್ಲಿ ಆಂಧ್ರಪ್ರದೇಶದ ಸಾರಿಗೆ ಬಸ್‌ಗಳನ್ನು ತಡೆದು, ಕಪ್ಪು ಮಸಿಯಲ್ಲಿ ಕೇಂದ್ರದ ವಿರುದ್ಧ ಬರಹಗಳನ್ನು ಬರೆದು ಆಕ್ರೋಶ ವ್ಯಕ್ತಪಡಿಸಿದರು.