ಶಾಸಕ ಕೆ.ವೈ.ನಂಜೇಗೌಡರ 1.32 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಇಡಿ

2023ರಲ್ಲಿ ನಡೆದ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯನ್ವಯ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು.;

Update: 2025-07-17 14:24 GMT

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮಾಲೂರಿನ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡಗೆ ಸೇರಿದ 1.32 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

2023ರಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯನ್ವಯ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು. ಈ ಸಂಬಂಧ ಕೆ.ವೈ.ನಂಜೇಗೌಡಗೆ ಸೇರಿದ ಕೋಲಾರ ತಾಲೂಕಿನ ಹುತ್ತೂರು ಹೋಬಳಿಯಲ್ಲಿರುವ ಕೋಚಿಮುಲ್, ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್​ ಕಚೇರಿ ಮೇಲೆಯೂ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. 

ಕೆ.ವೈ.ನಂಜೇಗೌಡ ಕೋಲಾರ ಹಾಲು ಒಕ್ಕೂಟ ಅಧ್ಯಕ್ಷರಾಗಿದ್ದು, ಕೆಎಂಎಫ್‌ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹೋದರ ಮತ್ತು ಬೆಂಗಳೂರು ಹಾಲು ಒಕ್ಕೂಟ ಅಧ್ಯಕ್ಷರಾಗಿರುವ ಡಿ.ಕೆ.ಸುರೇಶ್‌ ಸಹ ಕೆಎಂಎಫ್‌ ಅಧ್ಯಕ್ಷ ಗಾದಿಗೆ ಪೈಪೋಟಿ ನೀಡಿದ್ದಾರೆ. ಇಡಿ ಅಧಿಕಾರಿಗಳು ಇದೀಗ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವುದರಿಂದ ಪಕ್ಷದಲ್ಲಿಯೇ ಮುಜುಗರಕ್ಕೊಳಗಾಗುವಂತಾಗಿದೆ. 

ಕಾಂಗ್ರೆಸ್ ಶಾಸಕ ನಂಜೇಗೌಡ ಮತ್ತು ಇತರ ನಾಲ್ವರು ಸದಸ್ಯರು ನೇತೃತ್ವದ ಡೈರಿ ಸಹಕಾರಿ ಸಂಘವು ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿದೆ. ಮಂಡಳಿಯ ನಿರ್ಧಾರದಂತೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶಗಳನ್ನು ನೀಡಲಾಗಿದೆ. ಅಂತಿಮ ಫಲಿತಾಂಶವನ್ನು ಸಾರ್ವಜನಿಕಗೊಳಿಸದೆ ತರಬೇತಿಗೆ ಕಳುಹಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರತಿ ಸೀಟಿಗೆ 20 ರಿಂದ 30 ಲಕ್ಷ ರೂಪಾಯಿ ಹಣ ಪಡೆಯಲಾಗಿದೆ ಎಂದು ಇಡಿ ಹೇಳಿದೆ.

ಅವ್ಯವಹಾರದಲ್ಲಿ ಶಾಸಕ ಕೆವೈ ನಂಜೇಗೌಡ ನೇರ ಭಾಗಿಯಾಗಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ ಕರ್ನಾಟಕದ ಎರಡನೇ ಅತಿ ದೊಡ್ಡ ಹಾಲು ಉತ್ಪಾದಕ ಜಿಲ್ಲಾ ಸಂಸ್ಥೆ ಎಂಬುದು ಗಮನಾರ್ಹ. ಕೆ.ವೈ ನಂಜೇಗೌಡ ಸಮಿತಿ ಸದಸ್ಯರು ಮತ್ತು ಕಂದಾಯ ಅಧಿಕಾರಿಗಳ ಜತೆ ಶಾಮೀಲಾಗಿ ಒಂದೇ ತಿಂಗಳಲ್ಲಿ ನಾಲ್ಕು ಸಭೆಗಳಲ್ಲಿ ಹಲವರಿಗೆ 150 ಕೋಟಿ ರೂಪಾಯಿ ಮೌಲ್ಯದ ಸುಮಾರು 80 ಎಕರೆ ಜಮೀನು ಮಂಜೂರು ಮಾಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಹಲವು ಮಂದಿ ಲಾಭ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. 

ಅಷ್ಟೇ ಅಲ್ಲದೆ, ಅನಧಿಕೃತವಾಗಿ ಸರ್ಕಾರಿ ಜಮೀನು ಹಂಚಿಕೆ ಪ್ರಕರಣದಲ್ಲಿ ಕೆ. ವೈ ನಂಜೇಗೌಡ ಮತ್ತಿತರ ಆರೋಪಿಗಳಿಗೆ ಸಂಬಂಧಿಸಿದ 25 ಲಕ್ಷ ರೂ ನಗದು, 50 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ದಾಖಲೆಗಳನ್ನ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. 150 ಕೋಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎ ಕಾಯ್ದೆ 2002 ರಡಿ ಇಡಿ ಅಧಿಕಾರಿಗಳು ಜನವರಿ 8 ರಂದು ಶೋಧ ಕಾರ್ಯಾಚರಣೆ ನಡೆಸಿದ್ದರು.

Tags:    

Similar News