ವನ್ಯಜೀವಿ, ವನ ಸಂರಕ್ಷಣೆಗೆ ಅನಿಲ್ ಕುಂಬ್ಳೆ 'ರಾಯಭಾರಿ' ಬಲ: ಸಚಿವ ಈಶ್ವರ ಖಂಡ್ರೆ

ಅನಿಲ್ ಕುಂಬ್ಳೆ ಮಾತನಾಡಿ, ತಮ್ಮನ್ನು ಅರಣ್ಯ, ವನ್ಯಜೀವಿ ರಾಯಭಾರಿಯಾಗಿ ನೇಮಕ ಮಾಡಲು ಸರ್ಕಾರ ನಿರ್ಧರಿಸಿರುವುದಕ್ಕೆ ಧನ್ಯವಾದ ಅರ್ಪಿಸಿದರು.ಇಲಾಖೆಯ ಜೊತೆಗೂಡಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದರು.;

Update: 2025-06-03 07:56 GMT

 ಈಶ್ವರ ಖಂಡ್ರೆಯೊಂದಿಗೆ    ಅನಿಲ್‌ ಕುಂಬ್ಳೆ ಮಾತುಕತೆ

ಕರ್ನಾಟಕದ ವನ್ಯಜೀವಿ, ಅರಣ್ಯ ಸಂರಕ್ಷಣೆ ಮತ್ತು ಸಂವರ್ಧನೆ ಪ್ರಯತ್ನಗಳಿಗೆ ಈಗ ಖ್ಯಾತ ಮಾಜಿ ಕ್ರಿಕೆಟಿಗ ಮತ್ತು ಪರಿಸರ ಪ್ರೇಮಿ ಅನಿಲ್ ಕುಂಬ್ಳೆ ಅವರ ಬಲ ದೊರೆತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ತಮ್ಮನ್ನು ಭೇಟಿ ಮಾಡಿದ ಅನಿಲ್ ಕುಂಬ್ಳೆ ಅವರೊಂದಿಗೆ ಸಮಾಲೋಚಿಸಿದ ಬಳಿಕ ಮಾತನಾಡಿದ ಸಚಿವರು, ವನ್ಯಜೀವಿ, ಅರಣ್ಯ ಮತ್ತು ಪರಿಸರದ ಬಗ್ಗೆ ಅಪಾರ ಕಾಳಜಿ ಹಾಗೂ ಪ್ರೀತಿ ಹೊಂದಿರುವ ಅನಿಲ್ ಕುಂಬ್ಳೆ ಅವರು ಯಾವುದೇ ಸಂಭಾವನೆ ಇಲ್ಲದೆ ಅರಣ್ಯ ಮತ್ತು ವನ್ಯಜೀವಿ ರಾಯಭಾರಿ ಆಗಲು ಸಮ್ಮತಿಸಿದ್ದಾರೆ. ಇದು ಅವರ ಪರಿಸರ ಕಾಳಜಿ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ನಿಲ್ ಕುಂಬ್ಳೆ ಸಾಧನೆ

ತಮ್ಮ ಲೆಗ್ ಸ್ಪಿನ್ ಮೋಡಿಯಿಂದ ಭಾರತ ತಂಡದ ಹಲವು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಕುಂಬ್ಳೆ, ಕರ್ನಾಟಕದ ಅಷ್ಟೇ ಅಲ್ಲದೆ ಭಾರತದ ಹೆಮ್ಮೆಯ ಪುತ್ರ. ಜಿಮ್ ಲೇಕರ್ ಬಳಿಕ ಟೆಸ್ಟ್ ಪಂದ್ಯದ ಒಂದು ಇನ್ನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ ಮಾಂತ್ರಿಕ ಬೌಲರ್ ಅವರು. 110 ಟೆಸ್ಟ್ ಪಂದ್ಯಗಳನ್ನು ಆಡಿ 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ 'ಜಂಬೊ' ಎಂದೂ ಖ್ಯಾತರಾಗಿದ್ದಾರೆ. ಅದೇ ರೀತಿ, 264ಕ್ಕೂ ಅಧಿಕ ಏಕದಿನ ಪಂದ್ಯಗಳನ್ನಾಡಿರುವ ಅವರು 337 ವಿಕೆಟ್‌ಗಳನ್ನು ಕಬಳಿಸಿ ಕ್ರಿಕೆಟ್ ಪ್ರಿಯರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಸಚಿವರು ತಿಳಿಸಿದರು.

ಅನಿಲ್ ಕುಂಬ್ಳೆ ಅವರು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಪ್ರಚಾರ, ಪ್ರಸಾರ ಮಾಡಲಿದ್ದು, ಜನರಲ್ಲಿ ಜಾಗೃತಿ ಮೂಡಲಿದೆ ಎಂಬ ವಿಶ್ವಾಸವನ್ನು ಸಚಿವ ಖಂಡ್ರೆ ವ್ಯಕ್ತಪಡಿಸಿದರು. ಈ ಹಿಂದೆ ಕುಂಬ್ಳೆ ಅವರು ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವನ್ನೂ ಹೊಂದಿದ್ದಾರೆ ಎಂದು ಈ ಸಂದರ್ಭದಲ್ಲಿ ನೆನಪಿಸಿದರು. ಅನಿಲ್ ಕುಂಬ್ಳೆ ಅವರು ರಾಯಭಾರಿ ಆಗುತ್ತಿರುವುದು ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ಸಂವರ್ಧನೆಗೆ ಮತ್ತಷ್ಟು ಬಲ ನೀಡಲಿದೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಈ ಕುರಿತು ಪ್ರತಿಕ್ರಿಯಿಸಿದ ಅನಿಲ್ ಕುಂಬ್ಳೆ, ತಮ್ಮನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನೇಮಕ ಮಾಡಲು ಸರ್ಕಾರ ನಿರ್ಧರಿಸಿರುವುದಕ್ಕೆ ಧನ್ಯವಾದ ಅರ್ಪಿಸಿದರು. ಇಲಾಖೆಯ ಜೊತೆಗೂಡಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದರು. 

Tags:    

Similar News