The Federal Interview | ಸಮಾನ ವೇತನ ಘೋಷಿಸಿ; ಇಲ್ಲದಿದ್ದರೆ ಹೋರಾಟ: ಸಾರಿಗೆ ನೌಕರರ ಒಕ್ಕೂಟದಿಂದ ಸರ್ಕಾರಕ್ಕೆ ಎಚ್ಚರಿಕೆ

ಶಕ್ತಿ ಯೋಜನೆಯಿಂದ ನೌಕರರ ಮೇಲೆ ತ್ತಡ ಹೆಚ್ಚಾಗಿದೆ. ಆದರೆ ಇಲಾಖೆ ಸಿಬ್ಬಂದಿಗೆ ಬಹಳಷ್ಟು ಲಾಭವಾಗಿದೆ. ಸಾರಿಗೆ ನೌಕರರಿಗೆ ವೇತನ ಹೆಚ್ಚಳವಲ್ಲ, ಸಮಾನ ವೇತನ ವ್ಯವಸ್ಥೆ ಜಾರಿಗೆ ಬರಬೇಕು ಎಂದವರು ಒತ್ತಾಯಿಸಿದ್ದಾರೆ.;

By :  Anil Basur
Update: 2025-02-03 04:39 GMT

‘ನಾವು ಕೇಳುತ್ತಿರುವುದು ಸಮಾನ ವೇತನ. ವೇತನ ಪರಿಷ್ಕರಣೆಯನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ’ ಎಂದು ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಆರ್‌. ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.

ದ ಫೆಡರಲ್ ಕರ್ನಾಟಕ’ಕ್ಕೆ ಕೊಟ್ಟಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುವ ಭರವಸೆಯಿದೆ’ ಎಂದಿದ್ದಾರೆ.

ಶಕ್ತಿ ಯೋಜನೆಗೆ ಮೊದಲು ಕೋವಿಡ್ ಕಾರಣದಿಂದಾಗಿ ಸಾರಿಗೆ ಇಲಾಖೆ ನಷ್ಟದಲ್ಲಿತ್ತು. ಜೊತೆಗೆ ಸರ್ಕಾರ ನಮ್ಮ ಸಾರಿಗೆ ಸಂಸ್ಥೆಗಳನ್ನು ಮಲತಾಯಿ ಧೋರಣೆಯಿಂದ ನೋಡುತ್ತಿರುವ ಕಾರಣದಿಂದಾಗಿ ಬಹಳಷ್ಟು ಹುದ್ದೆಗಳು ಖಾಲಿ ಇದ್ದವು. ಇದಲ್ಲದೆ ಬಿಎಂಟಿಸಿ ಹೊರತು ಪಡಿಸಿ, ಕೆಎಸ್‌ಆರ್‌ಟಿಸಿ ಮತ್ತಿತರ ಸಾರಿಗೆ ಸಂಸ್ಥೆಗಳು ಹೊಸ ಬಸ್‌ಗಳನ್ನು  ಖರೀದಿ ಮಾಡಿರಲಿಲ್ಲ. ಹಾಗಾಗಿ ಸ್ಕ್ರ್ಯಾಪ್ (ಹಳೆಯ) ಬಸ್‌ಗಳ ಸಂಖ್ಯೆ  ಹೆಚ್ಚಾಗಿದ್ದವು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿರಲಿಲ್ಲ. ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸುತ್ತಿತ್ತು ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ಶಕ್ತಿ ಯೋಜನೆಯಿಂದ ಲಾಭ

ಆದರೆ ಶಕ್ತಿ ಯೋಜನೆ (ಮಹಿಳೆಯರಿಗೆ ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ) ಬಂದ ನಂತರ ಬ್ಯಾಕ್ ಲಾಗ್, ಅನುಕಂಪದ ಆಧಾರದ ಮೇಲೆ ಭರ್ತಿ ಮಾಡುವ ಹುದ್ದೆಗಳು ಹಾಗೂ ನೇರ ನೇಮಕಾತಿ ಮೂಲಕ ಸುಮಾರು 10 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಸರ್ಕಾರ ತುಂಬಿಸಿಕೊಂಡಿತು. ಹೊಸ ಬಸ್‌ಗಳನ್ನು ಖರೀದಿ ಮಾಡಿತು. ಇದರಿಂದಾಗಿ ನಮಗೆ ಸಹಾಯವಾಯಿತು. ಶಕ್ತಿ ಯೋಜನೆಯಿಂದ ನೌಕರರ ಮೇಲೆ ಸ್ವಲ್ಪ ಒತ್ತಡ ಹೆಚ್ಚಾಗಿದೆ. ಹಾಗೂ ಕಷ್ಟವೂ ಆಗುತ್ತಿದೆ. ಆದರೆ ಇಲಾಖೆ ಸಿಬ್ಬಂದಿಗೆ ಬಹಳಷ್ಟು ಲಾಭವಾಗಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.

"ಪ್ರಮುಖವಾಗಿ ನಮ್ಮದು ʼಸರಿ ಸಮಾನʼ ವೇತನದ ಬೇಡಿಕೆ ಇದೆ. 2020 ಡಿಸೆಂಬರ್ 10 ರಂದು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಫ್ರೀಡಮ್ ಪಾರ್ಕ್ ವರೆಗೆ ಬಹುದೊಡ್ಡ ರಾಲಿಯನ್ನು ನಾವು ಮಾಡಿದ್ದೆವು. ಆಗಿನ (ಬಿಜೆಪಿ) ಸರ್ಕಾರ ಬೇಡಿಕೆ ಈಡೇರಿಸುವ ಬದಲು ಧರಣಿ ಮಾಡಿದ ನೌಕರರನ್ನು ವಜಾ, ವರ್ಗಾವಣೆ ಹಾಗೂ ಅಮಾನತು ಮಾಡಿತ್ತು. ಅದರಿಂದ ಸಿಬ್ಬಂದಿಗೆ ಬಹಳಷ್ಟು ತೊಂದರೆಗಳಾದವು. ಈಗ ಹೋರಾಟದ ಮೂಲಕ ವಜಾ ಆಗಿದ್ದ ಸಿಬ್ಬಂದಿ ಮರು ನೇಮಕವಾಗಿದ್ದಾರೆ. ಅಮಾನತು ರದ್ದಾಗಿದ್ದು, ವರ್ಗಾವಣೆ ಆಗಿದ್ದ ಸಿಬ್ಬಂದಿ ಮರಳಿ ತಮ್ಮ ಮಾತೃ ಸಂಸ್ಥೆಗೆ ಬಂದಿದ್ದಾರೆ," ಎಂದು ಚಂದ್ರಶೇಖರ್‌ ವಿವರಿಸಿದರು.

"ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತದೆ ಎಂಬ ನಂಬಿಕೆಯಿದೆ. ವೇತನ ಪರಿಷ್ಕರಣೆ ಮಾಡುವುದಿದ್ದರೆ ಇಷ್ಟರಲ್ಲಾಗಲೇ ಸರ್ಕಾರ ಮಾಡುತ್ತಿತ್ತು. ಆದರೆ ನಾವು ಕೇಳುತ್ತಿರುವ ಸಮಾನ ವೇತನ ಕೊಡುವ ಸಲುವಾಗಿಯೇ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಭರವಸೆಯಿದೆ. ಬರುವ ಬಜೆಟ್‌ನಲ್ಲಿ ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ಸರಿ ಸಮಾನ ವೇತನ ಘೋಷಣೆ ಆಗುತ್ತದೆ ಎಂದು ನಾವು ನಂಬಿ ಕುಳಿತಿದ್ದೇವೆ,:" ಎಂದು ಅವರು ಆಶಿಸಿದರು.

"ಸರ್ಕಾರ ಏನಾದರೂ ನಮ್ಮ ಬೇಡಿಕೆಯನನ್ನು ಈಡೇರಿಸದಿದ್ದರೆ ಪ್ರಜಾಪ್ರಭುತ್ವದ ಅಡಿಯಲ್ಲಿ ಶಾಂತಿಯುತ ಪ್ರತಿಭಟನೆಯ ಮೂಲಕ ಹೋರಾಟ ಮಾಡುವ ಹಾದಿ ನಮ್ಮೆದುರಿಗೆ ಇದ್ದೇ ಇದೆ," ಎಂದು ಕೆಎಸ್ಆರ್‌ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.‌

ಚಂದ್ರಶೇಖರ್‌ ಅವರು ನೀಡಿದ ವಿಶೇಷ ಸಂದರ್ಶನದ ವಿಡಿಯೋ ವಿವರ ಇಲ್ಲಿದೆ.

Full View


Tags:    

Similar News