ಮಲೆನಾಡಿನಲ್ಲಿ ಮೋದಿಗೆ ಬಂಡಾಯದ ಬಿಸಿ | ಈಶ್ವರಪ್ಪ, ರೇಣುಕಾಚಾರ್ಯ ಗೈರು
ಶಿವಮೊಗ್ಗದಲ್ಲಿ ಸೋಮವಾರ ನಡೆದ ಪ್ರಧಾನಿ ಮೋದಿಯವರ ಮಧ್ಯಕರ್ನಾಟಕ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ, ಮಾಜಿ ಸಚಿವ ಮತ್ತು ಯಡಿಯೂರಪ್ಪ ಬಲಗೈಬಂಟ ಎಂ ಪಿ ರೇಣುಕಾಚಾರ್ಯ ಗೈರಾಗಿ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.
ಶಿವಮೊಗ್ಗ: ಸೋಮವಾರ ಶಿವಮೊಗ್ಗ ನಗರದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಬಿಜೆಪಿಯ ಕೆ ಎಸ್ ಈಶ್ವರಪ್ಪ ಮತ್ತು ಎಂ ಪಿ ರೇಣುಕಾಚಾರ್ಯ ಗೈರಾಗಿದ್ದು, ಮಾಜಿ ಸಚಿವ ಕುಮಾರ್ ಬಂಗಾರಪ್ಪ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ತಮ್ಮ ಪುತ್ರನಿಗೆ ಹಾವೇರಿ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ, ಸೋಮವಾರದ ಮೋದಿ ಸಭೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದರು. ಅದೇ ರೀತಿ, ದಾವಣಗೆರೆ ಕ್ಷೇತ್ರದಲ್ಲಿ ಹಾಲಿ ಸಂಸದ ಸಿದ್ದೇಶ್ವರ ಪತ್ನಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸುತ್ತಿರುವ ಯಡಿಯೂರಪ್ಪ ಅವರ ಬಲಗೈಬಂಟ, ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಕೂಡ ಪ್ರಧಾನಿ ಮೋದಿ ಸಭೆಯಿಂದ ದೂರವೇ ಉಳಿದು ಬಂಡಾಯದ ಬಾವುಟ ಹಾರಿಸಿದ್ದಾರೆ.
ಹಾವೇರಿ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್ ಟಿಕೆಟ್ ನೀಡಲಿಲ್ಲ ಎಂದು ಆಕ್ರೋಶಗೊಂಡಿದ್ದ ಈಶ್ವರಪ್ಪ ಅವರು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರು. ಅದಾಗ್ಯೂ, ನರೇಂದ್ರ ಮೋದಿ ವಿರುದ್ಧ ತಮ್ಮ ವಿರೋಧವೇನೂ ಇಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದರು. ನಾನು ಮೋದಿ ಪರ ಧ್ವನಿ ಎತ್ತುತ್ತೇನೆ. ಆದರೆ ಮೋದಿ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ ಎಂದು ಹೇಳಿದ್ದ ಈಶ್ವರಪ್ಪ, ಅವರ ಮನವೊಲಿಕೆಗಾಗಿ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ನಿರಂತರ ಪ್ರಯತ್ನ ನಡೆಸಿದ್ದರು. ಆದರೆ ಆ ಸಂಧಾನ ವಿಫಲವಾಗಿದ್ದವು.
ದೇಶದ ಜನರು ಮೋದಿಯನ್ನುಯ ದೇವರಂತೆ ನೋಡುತ್ತಿದ್ದಾರೆ. ನಾನು ಮೋದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಜನತೆಯ ಪರವಾಗಿ ಅವರಿಗೆ ಸ್ವಾಗತಿಸುತ್ತೇನೆ. ಶಿವಮೊಗ್ಗದಿಂದ ಗೆದ್ದು ನಾನು ಪ್ರಧಾನಿ ಮೋದಿ ಬಳಿ ಹೋಗುತ್ತೇನೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದರು.
ಮೋದಿ ಕಾರ್ಯಕ್ರಮ ಬಿಟ್ಟು ಮಠ ಮಾನ್ಯ ಸುತ್ತಿದರು!
ಮೋದಿ ಅವರ ಕಾರ್ಯಕ್ರಮದಿಂದ ದೂರವೇ ಉಳಿದು, ತಾವು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿರುವ ಕೆ ಎಸ್ ಈಶ್ವರಪ್ಪ, ಶಿವಮೊಗ್ಗದ ವೀರಶೈವ ಲಿಂಗಾಯತ ಮಠಗಳಿಗೆ ಭೇಟಿ ನೀಡಿದ್ದಾರೆ.
ಯಡಿಯೂರಪ್ಪ ಮತ್ತು ಅವರ ಮಕ್ಕಳ ಕಪಿಮುಷ್ಟಿಯಲ್ಲಿ ಭಾರತೀಯ ಜನತಾ ಪಾರ್ಟಿ ಸಿಲುಕಿದೆ. ಅವರ ಹಿಡಿತದಿಂದ ಪಕ್ಷ ಸರ್ವನಾಶವಾಗುವುದನ್ನು ತಪ್ಪಿಸಲು ತಾವು ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಹಿರಿಯ ಪುತ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಕಣಕ್ಕಿಳಿಯುವುದು ಅನಿವಾರ್ಯವಾಗಿದೆ. ತಮ್ಮ ಈ ನಿರ್ಧಾರಕ್ಕೆ ರಾಜ್ಯದ ಮೂಲೆಮೂಲೆಯಿಂದ ಪಕ್ಷದ ನಾಯಕರು, ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ ಎಂದಿದ್ದ ಈಶ್ವರಪ್ಪ, ತಮ್ಮ ಎದೆ ಬಗೆದರೆ ಒಂದು ಕಡೆ ಶ್ರೀರಾಮ, ಮತ್ತೊಂದು ಕಡೆ ಮೋದಿ ಕಾಣುತ್ತಾರೆ. ಆದರೆ, ಯಡಿಯೂರಪ್ಪ ಎದೆ ಬಗೆದರೆ ಅಲ್ಲಿ ಒಂದು ಕಡೆ ಅವರ ಇಬ್ಬರು ಮಕ್ಕಳು ಮತ್ತು ಮತ್ತೊಂದು ಕಡೆ ಶೋಭಾ ಕರಂದ್ಲಾಜೆ ಕಾಣಿಸುತ್ತಾರೆ ಎಂದು ಲೇವಡಿ ಮಾಡಿದ್ದರು.
ಆದರೆ, ತಮ್ಮ ಎದೆಯಲ್ಲಿ ಕಾಣಿಸುತ್ತಾರೆ ಎಂದ ಮೋದಿಯವರು ತಮ್ಮ ಮನೆಯ ಕೂಗಳತೆ ದೂರದಲ್ಲಿ ಬಂದು ರ್ಯಾಲಿ ನಡೆಸಿದರೂ, ಈಶ್ವರಪ್ಪ ಆ ಕಡೆ ತಿರುಗಿಯೂ ನೋಡದೆ ಶಿವಮೊಗ್ಗ ಕ್ಷೇತ್ರದ ಮಠಮಾನ್ಯಗಳ ಭೇಟಿಯ ತಮ್ಮ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು.
ಈಶ್ವರಪ್ಪ ಅವರು ಕಾರ್ಯಕ್ರಮಕ್ಕೆ ಹಾಜರಾಗದಿದ್ದರೂ, ಬಿಎಸ್ ಯಡಿಯೂರಪ್ಪ ಅವರ ಭಾವಚಿತ್ರದೊಂದಿಗೆ ಈಶ್ವರಪ್ಪ ಅವರ ಚಿತ್ರವನ್ನೂ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದೆ. ಆದರೆ, ಕಾರ್ಯಕ್ರಮದ ವೇದಿಕೆಯಲ್ಲಿ 40 ಮಂದಿ ಪ್ರಮುಖರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು. ಅದರಲ್ಲಿ ಈಶ್ವರಪ್ಪ ಅವರಿಗೆ ಯಾವುದೇ ಆಸನವನ್ನು ಕಾಯ್ದಿರಿಸಲಾಗಿರಲಿಲ್ಲ ಎನ್ನಲಾಗಿದೆ.
ಮೋದಿ ಕಾರ್ಯಕ್ರಮ ಬಿಟ್ಟು ಬರ್ತಡೇ ಪಾರ್ಟಿ !
ಶಿವಮೊಗ್ಗದ ನೆರೆಯ ಹೊನ್ನಾಳಿ ಶಾಸಕ ಹಾಗೂ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಕೂಡ ಮೋದಿ ರ್ಯಾಲಿಯಿಂದ ದೂರವೇ ಉಳಿದಿದ್ಧಾರೆ. ದಾವಣಗೆರೆ ಕ್ಷೇತ್ರದ ಟಿಕೆಟ್‌ಗಾಗಿ ಕಳೆದ ಒಂದು ವರ್ಷದಿಂದ ಪ್ರಯತ್ನ ನಡೆಸಿದ್ದ ಅವರಿಗೆ ಟಿಕೆಟ್ ಕೈತಪ್ಪಿದೆ. ಅಲ್ಲಿ ಹಾಲಿ ಸಂಸದ ಸಿದ್ದೇಶ್ವರ್ ಅವರಿಗೆ ಎದುರಾಗಿರುವ ಆಡಳಿತ ವಿರೋಧಿ ಅಲೆಯಿಂದ ಬಚಾವಾಗಲು ಬಿಜೆಪಿ ಅವರ ಪತ್ನಿಗೆ ಟಿಕೆಟ್ ಘೋಷಿಸಿದೆ. ಆದರೆ, ಪಕ್ಷದ ಈ ತೀರ್ಮಾನದ ವಿರುದ್ಧ ಮಾಜಿ ಸಚಿವರೂ ಪಕ್ಷದ ಹಿರಿಯ ನಾಯಕರೂ ಆದ ಎಂ ಪಿ ರೇಣುಕಾಚಾರ್ಯ ಮತ್ತು ಎಸ್ ಎ ರವೀಂದ್ರನಾಥ್ ಮತ್ತಿತರರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು.
ಆ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯ, ಎಸ್ ಎ ರವೀಂದ್ರನಾಥ್ ಅವರ ಬಣವು ನರೇಂದ್ರ ಮೋದಿ ಅವರ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದು, ಸಿದ್ದೇಶ್ವರ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಮಾತ್ರ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲು ತೀರ್ಮಾನಿಸಿರುವುದಾಗಿ ಹೇಳಿದ್ದರು.
ಅಭ್ಯರ್ಥಿಯನ್ನು ಬದಲಾವಣೆ ಮಾಡದಿದ್ದಲ್ಲಿ ಬಂಡಾಯ ಅಭ್ಯರ್ಥಿ ಕಣಕ್ಕೆ ಇಳಿಸೋ ಸಾಧ್ಯತೆಯೂ ಇದೆ ಎಂಬ ಸುಳಿವನ್ನೂ ರೇಣುಕಾಚಾರ್ಯ ಬಣ ನೀಡಿದೆ. ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಿಸೋದು ನಮ್ಮ ಗುರಿ, ಆದರೆ ಸಿದ್ದೇಶ್ವರ್ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಜಿಎಂ ಸಿದ್ದೇಶ್ವರ್ ಅವರು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಹಾಗಾಗಿ ಅವರ ಕುಟುಂಬದ ಪರವಾಗಿ ನಾವು ಕೆಲಸ ಮಾಡಲ್ಲ ಎಂದು ಅವರು ಎಚ್ಚರಿಸಿದ್ದರು.
ಈ ನಡುವೆ, ಸೋಮವಾರ (ಮಾ.18) ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ರೇಣುಕಾಚಾರ್ಯ, ರವೀಂದ್ರನಾಥ್ ಮೊದಲಾದವರು ಗೈರಾಗಿದ್ದಾರೆ. ರೇಣುಕಾಚಾರ್ಯ ಅವರು ಹೊನ್ನಾಳಿಯಲ್ಲಿರುವ ತಮ್ಮ ಮನೆಯಲ್ಲಿ ಸ್ಥಳೀಯ ಮುಖಂಡರೊಬ್ಬರ ಹುಟ್ಟುಹಬ್ಬ ಆಚರಿಸಿದ್ದಾರೆ. ಆ ಬಗ್ಗೆ ಸ್ವತಃ ರೇಣುಕಾಚಾರ್ಯ ಅವರೇ ಟ್ವೀಟ್ ಕೂಡಾ ಮಾಡಿದ್ದಾರೆ. ಮೋದಿ ಕಾರ್ಯಕ್ರಮ ನಡೆಯುತ್ತಿದ್ದ ಶಿವಮೊಗ್ಗ ನಗರದಿಂದ ಕೇವಲ 40 ಕಿ.ಮೀ. ದೂರದಲ್ಲಿ ಹೊನ್ನಾಳಿಯ ತಮ್ಮ ನಿವಾಸದಲ್ಲೇ ಇದ್ದರೂ ರೇಣುಕಾಚಾರ್ಯ ಅವರು, ಕಾರ್ಯಕ್ರಮದತ್ತ ಸುಳಿಯದೆ ತಮ್ಮ ಮಿತ್ರರ ಬರ್ತಡೇ ಕೇಕ್ ಕಟ್ಟು ಮಾಡುವುದರಲ್ಲಿ ಬ್ಯುಸಿಯಾಗಿದ್ದರು.
ಲೋಕಸಭೆ ಚುನಾವಣೆ ಪ್ರಚಾರಕ್ಕೆಂದು ಮೂರು ದಿನದ ಅಂತರದಲ್ಲಿ ಕರ್ನಾಟಕಕ್ಕೆ ಮತ್ತೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಶ್ವರಪ್ಪ ಅವರ ಗೈರಿನಿಂದಾಗಿ ಬಂಡಾಯದ ಬಿಸಿ ತಟ್ಟಿದೆ.
ಸೋಮವಾರ ಮಧ್ಯಾಹ್ನ 3ರ ಹೊತ್ತಿಗೆ ತೆಲಂಗಾಣದಿಂದ ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ಮುಖಂಡರು ಬರ ಮಾಡಿಕೊಂಡರು.
ಕುಮಾರ್ ಬಂಗಾರಪ್ಪ ಅಚ್ಚರಿಯ ಹಾಜರಿ
2023 ರ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದ ಕುಮಾರ್ ಬಂಗಾರಪ್ಪ ಅವರು ಅಚ್ಚರಿ ಎಂಬಂತೆ ಸೋಮವಾರ ದಿಢೀರನೇ ಮೋದಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ತನ್ನ ಸೋಲಿಗೆ ಸ್ಥಳೀಯ ಬಿಜೆಪಿ ಮುಖಂಡರೇ ಕಾರಣ ಎಂದು ಕುಮಾರ್ ಬಂಗಾರಪ್ಪ ಅವರು ಪಕ್ಷದಿಂದ ದೂರ ಉಳಿದಿದ್ದರು.
ಲೋಕಸಭಾ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಕಣಕ್ಕಿಳಿಸಲಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳೂ ನಡೆದಿದ್ದವು. ಆದರೆ, ಕುಮಾರ್ ಈ ಬಗ್ಗೆ ಎಲ್ಲಿಯೂ ಯಾವುದೇ ಹೇಳಿಕೆ ನೀಡಿರಲಿಲ್ಲ. ಈ ನಡುವೆ, ಶಿವಮೊಗ್ಗದ ಕಾಂಗ್ರೆಸ್ ಟಿಕೆಟ್ ಗೀತಾ ಶಿವರಾಜ್‌ಕುಮಾರ್ ಅವರ ಪಾಲಾಗಿತ್ತು.
ಆ ನಡುವೆ, ಕುಮಾರ್ ಬಂಗಾರಪ್ಪ ಅವರಿಗೆ ಬಿಜೆಪಿಯಿಂದ ಉತ್ತರಕನ್ನಡ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಗಳ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆದಿದ್ದವು. ಉತ್ತರಕನ್ನಡ ಕ್ಷೇತ್ರಕ್ಕೆ ಈವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಇದೀಗ, ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಹಾಜರಾಗುವ ಮೂಲಕ ತಮ್ಮ ಸುತ್ತಲೂ ಹಬ್ಬಿಕೊಂಡಿರುವ ಊಹಾಪೋಹಗಳಿಗೆ ಕುಮಾರ್ ಬಂಗಾರಪ್ಪ ತೆರೆ ಎಳೆದಿದ್ದಾರೆ. ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ ಕುಮಾರ್ ಅವರನ್ನು ಬಿಜೆಪಿ ನಾಯಕರು ಆದರದಿಂದ ಸ್ವಾಗತಿಸಿದರು.