ಬಿಎಸ್‌ವೈ ವಿರುದ್ಧ ಬಂಡಾಯ| ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಅಮಾನತು

ಈಶ್ವರಪ್ಪ ಎರಡು ಬಾರಿ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಒಮ್ಮೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಕಟ್ಟಾ ಹಿಂದುತ್ವವಾದಿ ನಾಯಕ ಮತ್ತು ಕುರುಬ ಸಮುದಾಯದ ನಾಯಕನಾಗಿ ಮನ್ನೆಲೆಗೆ ಬಂದವರು. ಬಿ.ಬಿ.ಶಿವಪ್ಪ, ಹೆಚ್.ಎನ್.ಅನಂತಕುಮಾರ್ ಮುಂತಾದವರ ಜೊತೆಗೂಡಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಲು ಬಿಎಸ್ ಯಡಿಯೂರಪ್ಪ ಅವರ ಜೊತೆಗೂಡಿ ಶ್ರಮಿಸಿದ ಅವರು ಬಿಜೆಪಿಯ ನಿಷ್ಠಾವಂತ ನಾಯಕರೆಂದು ಪರಿಗಣಿಸಲ್ಪಟ್ಟವರು.;

Update: 2024-04-22 18:45 GMT

‘ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಪಾರು ಮಾಡಲು’ ಎಂಬ ಘೋಷವಾಕ್ಯದೊಂದಿಗೆ ಕಣಕ್ಕಿಳಿದಿದ್ದ ಬಂಡಾಯ ಅಭ್ಯರ್ಥಿ, ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಆರು ವರ್ಷಗಳ ಅವಧಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಉಚ್ಛಾಟನೆ ಮಾಡಿದೆ. ಪಕ್ಷದ ನಿರ್ದೇಶನವನ್ನು ಧಿಕ್ಕರಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಈಶ್ವರಪ್ಪ ನಿರ್ಧರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈಶ್ವರಪ್ಪ ಎರಡು ಬಾರಿ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಕಟ್ಟಾ ಹಿಂದುತ್ವವಾದಿ ನಾಯಕ ಮತ್ತು ಕುರುಬ ಸಮುದಾಯದ ನಾಯಕನಾಗಿ ಮನ್ನೆಲೆಗೆ ಬಂದವರು. ಜನಸಂಘದ ದಿನಗಳಿಂದಲೂ ಬಿ.ಬಿ.ಶಿವಪ್ಪ, ಹೆಚ್.ಎನ್.ಅನಂತಕುಮಾರ್ ಮುಂತಾದವರ ಜೊತೆಗೂಡಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಲು ಬಿಎಸ್ ಯಡಿಯೂರಪ್ಪ ಅವರ ಜೊತೆಗೂಡಿ ಶ್ರಮಿಸಿದ ಅವರು ಬಿಜೆಪಿಯ ನಿಷ್ಠಾವಂತ ನಾಯಕರೆಂದು ಪರಿಗಣಿಸಲ್ಪಟ್ಟವರು.

ಈಶ್ವರಪ್ಪ ಅವರ ಕಾರ್ಯವೈಖರಿ ಪಕ್ಷದ ಶಿಸ್ತಿನ ಸ್ಪಷ್ಟ ಉಲ್ಲಂಘನೆ ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಶುಕ್ರವಾರ ಸಂಜೆ ಉಚ್ಚಾಟನೆ ಆದೇಶದಲ್ಲಿ ತಿಳಿಸಿದ್ದಾರೆ. ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಸ್ವತಂತ್ರವಾಗಿ ಸ್ಪರ್ಧಿಸುವ ಮೂಲಕ ಈಶ್ವರಪ್ಪ ಬಿಜೆಪಿಗೆ ಮುಜುಗರ ಉಂಟುಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಲಾಗಿತ್ತು, ಆದರೆ ನಾಮಪತ್ರ ಹಿಂಪಡೆಯುವ ದಿನಾಂಕ ಏಪ್ರಿಲ್ 22 ಆಗಿದ್ದು ಈಶ್ವರಪ್ಪ ಅವರು ಪಕ್ಷದ ಮನವಿಗೆ ಸೊಪ್ಪು ಹಾಕಿರಲಿಲ್ಲ. ಹಾಗಾಗಿ ಪಾಟೀಲ್ ಹೊರಡಿಸಿರುವ ಆದೇಶದಂತೆ ಈಶ್ವರಪ್ಪ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ತಕ್ಷಣದಿಂದ ತೆರವುಪಡಿಸಲಾಗಿದೆ.

BSY v/s ಈಶ್ವರಪ್ಪ

ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದಲ್ಲಿ (ಬಿಜೆಪಿ) ಪ್ರಮುಖ ನಾಯಕರಾದ ಬಿಎಸ್ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪ ಅವರ ನಡುವೆ ರಾಜಕೀಯ ವೈಷಮ್ಯ ಉಂಟಾಗಿದ್ದು,ಈ ಬಿರುಕಿಗೆ ಪ್ರಮುಖ ಕಾರಣವಾಗಿದೆ.

ರಾಜ್ಯದಲ್ಲಿ ಬಿಜೆಪಿಯ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಕೆಎಸ್ ಈಶ್ವರಪ್ಪ ಅವರು ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ . ವಿಜಯೇಂದ್ರ ನೇತೃತ್ವದ ಬಣದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಪಕ್ಷದ ಬೆಳವಣಿಗೆಗೆ ಈಶ್ವರಪ್ಪ ಮಹತ್ವದ ಕೊಡುಗೆ ನೀಡಿದರೂ ಯಡಿಯೂರಪ್ಪ ಪಾಳಯದಿಂದ ಅವರನ್ನು ದೂರವಿಡಲಾಗುತ್ತಿದೆ ಎನ್ನಲಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಲಿಲ್ಲ, ಅವರ ಮಗನಿಗೂ ಟಿಕೆಟ್ ನಿರಾಕರಿಸಲಾಯಿತು. ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕೆ.ಇ. ಕಾಂತೇಶ್‌ಗೆ ಟಿಕೆಟ್ ನೀಡಬೇಕು ಎಂದು ಈಶ್ವರಪ್ಪ ಬಯಸಿದ್ದರೂ ಪಕ್ಷ ಅದನ್ನು ನಿರಾಕರಿಸಿತ್ತು.

ಈ ಬೆಳವಣಿಗೆಗಳಿಂದಾಗಿ ಈಶ್ವರಪ್ಪ ಅವರು ಬಿಎಸ್‌ವೈ ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ವಿರುದ್ಧ ತೊಡೆತಟ್ಟಲು ಕಾರಣವಾಗಿದೆ. ಈಶ್ವರಪ್ಪನವರ ಉಮೇದುವಾರಿಕೆಯು ಬಿಎಸ್‌ವೈ ಅವರ ಮಗನಿಗೆ ಆತಂಕ ಸೃಷ್ಟಿಸಿದ್ದು ಹಿಂದುಳಿದ ವರ್ಗ ಮತ್ತು ಹಿಂದುತ್ವವಾದಿಗಳ ಮತಗಳನ್ನು ತಮ್ಮೆಡೆ ತಿರುಗಿಸುವ ಚಾಕಚಕ್ಯತೆ ಹೊಂದಿದ್ದಾರೆ.

ಎದೆ ತೆರೆದರೆ ಒಂದು ಕಡೆ ಶ್ರೀರಾಮ, ಇನ್ನೊಂದು ಕಡೆ ಮೋದಿ ನೋಡುತ್ತೇನೆ ಎಂದು ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಪ್ರಚಾರ ಸಭೆಗಳಲ್ಲಿ ಘೋಷಿಸುತ್ತಿದ್ದು, ನರೇಂದ್ರ ಮೋದಿ ಭಾವಚಿತ್ರವನ್ನೂ ಬಳಸುತ್ತಿದ್ದಾರೆ. ಆದರೆ, ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ್ತಿತರ ನಾಯರು ಈಶ್ವರಪ್ಪ ಅವರು ಮೋದಿ ಚಿತ್ರ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಮೋದಿ ಚಿತ್ರ ಬೇಡ ಎಂದು ಹೇಳಲು ಮೋದಿ ಯಾರೊಬ್ಬರ ಅಪ್ಪನ ಮನೆಯ ಆಸ್ತಿಯಲ್ಲ" ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದರು. "ಪ್ರಧಾನಿ ಮೋದಿ ವಿಶ್ವನಾಯಕ.ನರೇಂದ್ರ ಮೋದಿಯನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ" ಎಂದು ಈಶ್ವರಪ್ಪ ತಿರುಗೇಟು ನೀಡಿದ್ದರು.

ಶಕ್ತಿ ಪ್ರದರ್ಶನ:

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಈಶ್ವರಪ್ಪ ಎರಡು ವಾರಗಳ ಹಿಂದೆ ಶಿವಮೊಗ್ಗದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದರು. ಸಾವಿರಾರು ಕಾರ್ಯಕರ್ತರೊಂದಿಗೆ ಶಕ್ತಿ ಪ್ರದರ್ಶನ ನಡೆಸಿದ ಈಶ್ವರಪ್ಪ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಾಮಪತ್ರ ಸಲ್ಲಿದ್ದರು. ಜೈ ಶ್ರೀ ರಾಮ್ ಘೋಷಣೆಯ ಜೊತೆಗೆ ಮೋದಿ ಮತ್ತು ಈಶ್ವರಪ್ಪ ಪರವಾಗಿ ಅಭಿಮಾನಿಗಳು ಕೇಸರಿ ಬಾವುಟಗಳನ್ನು ಪ್ರದರ್ಶಿಸಿ ಬೆಂಬಲ ವ್ಯಕ್ರಪಡಿಸಿದ್ದರು.

ತಮ್ಮ ಹೋರಾಟ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಮಾತ್ರ ಎಂದು ಘೋಷಿಸಿದ್ದ ಈಶ್ವರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಲು ಹಾಗೂ ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಪಕ್ಷವನ್ನು ಉಳಿಸಲು ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

Tags:    

Similar News