KPSC Scam | ವಂಚಕರಿಗೆ ನೇಮಕಾತಿ ಆದೇಶ ನೀಡುವ ತೀರ್ಮಾನ ಮಾಡಿದವರಾರು; ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಸಾಕಷ್ಟು ಅನುಮಾನ, ಶಂಕೆಗಳಿದ್ದರೂ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಯಾರ ಮಟ್ಟದಲ್ಲಿ ನೇಮಕ ತೀರ್ಮಾನವಾಗಿದೆ. ವಂಚನೆ ಮಾಡಿರುವವರ ಮೇಲೆ ಆಯೋಗವು ಏಕೆ ದೂರು ನೀಡಿಲ್ಲ ಎಂದು ಹೈಕೋರ್ಟ್ ಪ್ರಶ್ನಿಸಿದೆ.;

Update: 2025-03-20 02:42 GMT

ಕರ್ನಾಟಕ ಹೈಕೋರ್ಟ್‌ 

ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಸರಬರಾಜು ವಿಭಾಗಕ್ಕೆ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ(AEE) ನೇಮಕದಲ್ಲಿ ನಡೆದಿರುವ ಅಕ್ರಮದಿಂದಾಗಿ ನೇಮಕಾತಿ ಆದೇಶ ನೀಡದಂತೆ ಕೆಪಿಎಸ್‌ಸಿ ಕಾರ್ಯದರ್ಶಿಯು ಸರ್ಕಾರಕ್ಕೆ ಪತ್ರ ಬರೆದಿದ್ದರೂ ನೇಮಕ ಆದೇಶ ನೀಡುವ ತೀರ್ಮಾನ ಮಾಡಿದವರು ಯಾರು ಎಂದು ಸರ್ಕಾರವನ್ನು ಹೈಕೋರ್ಟ್‌ ಪ್ರಶ್ನಿಸಿದೆ.

ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸಿಗೆ ತಡೆ ನೀಡಬೇಕು ಎಂಬ ಮನವಿಯನ್ನು ನಿರಾಕರಿಸಿರುವ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿ(KAT)  ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್‌ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಸಾರ್ವಜನಿಕ ನೇಮಕಾತಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಸಕಾರಾತ್ಮಕ ಕ್ರಮಗಳ ಬಗ್ಗೆ ಮೆಚ್ಚಬೇಕಿದೆ. ರಾಜ್ಯ ಸರ್ಕಾರವು ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಮಸೂದೆ ರೂಪಿಸಿ, ಅದಕ್ಕೆ ಸದನದಲ್ಲಿ ಒಪ್ಪಿಗೆ ಪಡೆದು ಅದನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿಕೊಟ್ಟಿರುವುದು ಮೆಚ್ಚಲರ್ಹ ನಡೆ” ಎಂದು ಹೇಳಿದೆ.

ಇದಕ್ಕೂ ಮುನ್ನ, “ಸಾಕಷ್ಟು ಅನುಮಾನ, ಶಂಕೆಗಳಿದ್ದರೂ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಯಾರ ಮಟ್ಟದಲ್ಲಿ ನೇಮಕ ತೀರ್ಮಾನವಾಗಿದೆ. ವಂಚನೆ ಮಾಡಿರುವವರ ಮೇಲೆ ಆಯೋಗವು ಏಕೆ ದೂರು ನೀಡಿಲ್ಲ? ಆಯೋಗದ ಹಿಂದಿನ ಕಾರ್ಯದರ್ಶಿ ಲತಾ ಕುಮಾರಿ ವಿರುದ್ಧ ಕ್ರಮ ಏಕೆ ಆಗಿಲ್ಲ? ಇದೇ ಕೆಲಸವನ್ನು ಎಫ್‌ಡಿಸಿ, ಎಸ್‌ಡಿಎ, ಗುಮಾಸ್ತ ಮಾಡಿದ್ದರೆ ಸರ್ಕಾರ ಏನು ಮಾಡುತ್ತಿತ್ತು ಎಂಬುದರ ಬಗ್ಗೆ ಮಾಹಿತಿ ನೀಡಬೇಕು” ಎಂದು ಸರ್ಕಾರ ಮತ್ತು ಕೆಪಿಎಸ್‌ಸಿಗೆ ಸೂಚಿಸಿತು.

Tags:    

Similar News