KPSC Controversy |ಕೆಎಎಸ್‌ ಪ್ರಶ್ನೆಪತ್ರಿಕೆ ಸೋರಿಕೆ ವದಂತಿ; ಸ್ಪಷ್ಟನೆ ನೀಡಿದ ಕೆಪಿಎಸ್‌ಸಿ

ಕೆಎಎಸ್‌ ಮುಖ್ಯಪರೀಕ್ಷೆ ಮೇ 3 ರಿಂದ 9ರವರೆಗೆ ನಿಗಧಿಯಾಗಿದ್ದು. ಮೈಸೂರು ರಸ್ತೆಯಲ್ಲಿರುವ ಕಸ್ತೂರಬಾ ನಗರದ ಬಿಬಿಎಂಪಿ ಸಂಯುಕ್ತ ಪಿಯು ಕಾಳೇಜಿನ ಕೊಠಡಿ ಸಂಖ್ಯೆ ನಾಲ್ಕರಲ್ಲಿ ಸೋಮವಾರ (ಮೇ5) ಪ್ರಬಂಧ ಪತ್ರಿಕೆ ಪರೀಕ್ಷೆ ಬರೆಯಬೇಕಿತ್ತು.;

Update: 2025-05-06 09:42 GMT

ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸ್ಪಷ್ಟನೆ ನೀಡಿ ಕೆಪಿಎಸ್‌ಸಿ ಪತ್ರ ಬರೆದಿದೆ.  

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಗೆಜೆಟೆಡ್‌ ಪೊಬೆಷನರಿ ಮುಖ್ಯಪರೀಕ್ಷೆಯ ಪ್ರಬಂಧ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಬರೆದಿದ್ದ ಪತ್ರಕ್ಕೆ ಕೆಪಿಎಸ್‌ಸಿ ಸ್ಪಷ್ಟನೆ ನೀಡಿದೆ. ಕೆಎಎಸ್‌ ಮುಖ್ಯಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ, ಅಭ್ಯರ್ಥಿಗಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದೆ. 

ಕೆಎಎಸ್‌ ಮುಖ್ಯ ಪರೀಕ್ಷೆಯ ಪ್ರಬಂಧ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದ ಬಗ್ಗೆ ಸೋಮವಾರ ʼದ ಫೆಡರಲ್‌ ಕರ್ನಾಟಕʼ ವರದಿ ಪ್ರಕಟಿಸಿತ್ತು. ಇದರಿಂದ ಕೆಪಿಎಸ್‌ಸಿಯ ಮತ್ತೊಂದು ಅವಾಂತರ ಬೆಳಕಿಗೆ ಬಂದಿತ್ತು. ಅಭ್ಯರ್ಥಿಗಳು ಬೆಂಗಳೂರಿನ ಕಸ್ತೂರಾ ಬಾ ನಗರ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಂಬಂಧ ಪತ್ರ ಬರೆದು ದೂರಿದ್ದರು. ಪ್ರಾಂಶುಪಾಲರು ವಿದ್ಯಾರ್ಥಿಗಳ ಈ ಪತ್ರವನ್ನು ಕೆಪಿಎಸ್‌ಸಿ ಗಮನಕ್ಕೆ ತಂದಿದ್ದರು. 

ಮೇ 5 ರಂದು ಪ್ರಬಂಧ ಪ್ರಶ್ನೆಪತ್ರಿಕೆಯ ಬಂಡಲ್‌ ನಿಗದಿತ ಅವಧಿಗೂ ಮುನ್ನವೇ ಓಪನ್‌ ಆಗಿರುವುದನ್ನು ಗಮನಿಸಿದ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನಿರಾಕರಿಸಿ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಈ ವೇಳೆ ಅಧಿಕಾರಿಗಳೇ ಅಭ್ಯರ್ಥಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಆರೋಪವೂ ಕೇಳಿ ಬಂದಿತ್ತು. 

ಕೆಪಿಎಸ್‌ಸಿ ಸ್ಪಷ್ಟನೆ

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಗೆಜೆಟೆಡ್ ಪ್ರೊಬೇಷನರಿ‌ ಹುದ್ದೆ ಸೇರಿ ಎಲ್ಲಾ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗದಂತೆ, ಪರೀಕ್ಷಾ ಗೌಪ್ಯತೆ ಕಾಪಾಡುವ ಹಾಗೂ ಪಾರರ್ಶಕವಾಗಿ ಪರೀಕ್ಷೆ ನಡೆಸುವ ಸಲುವಾಗಿ ಹಲವು ಹಂತಗಳ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ. ಅದರಂತೇ ಈ ಪರೀಕ್ಷೆಯಲ್ಲಿಯೂ ಸಹ ಪ್ರಶ್ನೆಪತ್ರಿಕೆ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮೊಹರು ಮಾಡಿದ ಪೆಟ್ಟಿಗೆ, ಟ್ರಂಕ್‌, ಟ್ಯಾಂಪರ್‌ ಕವರ್‌ ಸೇರಿ ಎಲ್ಲಾ ಭದ್ರತಾ ಕ್ರಮ ವಹಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ. 

ವದಂತಿಗಳಿಗೆ ಕಿವಿಗೊಡಬೇಡಿ

ಪರೀಕ್ಷಾ ಹಾಗೂ ಸಾಮಗ್ರಿಗಳ ಗೋಪ್ಯತೆ , ಸುರಕ್ಷತೆ ಹಾಗೂ ಭದ್ರತೆ ಕಾಪಾಡುವಲ್ಲಿ ಅತ್ಯಂತ ಜವಾಬ್ದಾರಿಯುತಗಿ ಕಾಳಜಿ ವಹಿಸಲಾಗುತ್ತಿದೆ. ಸಾಮಾಜಿಕ ಹಾಗೂ ಸಮೂಹ ಮಾಧ್ಯಮದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರಕಟಗೊಂಡಿರುವ ವಿಷಯ ಸತ್ಯಕ್ಕೆ ದೂರವಾಗಿದೆ. ಅಭ್ಯರ್ಥಿಗಳು ಇದರಿಂದ ವಿಚಲಿತರಾಗಬಾರದು. ವದಂತಿಗಳಿಗೆ ಕಿವಿಗೊಡಬಾರದು ಎಂದು ಕೆಪಿಎಸ್‌ಸಿ ತಿಳಿಸಿದೆ. 

ವಿದ್ಯಾರ್ಥಿಗಳಿಂದ ಮರುಪರೀಕ್ಷೆಗೆ ಆಗ್ರಹ

ಕೆಪಿಎಸ್‌ಸಿ ಎರಡು ಬಾರಿ ನಡೆಸಿದ ಪೂರ್ವಭಾವಿ ಪರೀಕ್ಷೆಗಳಲ್ಲಿ ಭಾಷಾಂತರ ಲೋಪದಿಂದ 70 ಸಾವಿರಕ್ಕೂ ಅಧಿಕ ಕನ್ನಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿತ್ತು. ಈಗ ಮುಖ್ಯಪರೀಕ್ಷೆಯ ಪ್ರಬಂಧ ಪತ್ರಿಕೆಯ ಬಂಡಲ್‌ ನಿಗದಿತ ಅವಧಿಗೂ ಮುನ್ನವೇ ಓಪನ್‌ ಆಗಿದ್ದು ಪತ್ರಿಕೆ ಸೋರಿಕೆಯಾಗಿರುವ ಸಂಶಯವಿದೆ. ಆದ್ದರಿಂದ ಮುಖ್ಯಮಂತ್ರಿಗಳು ಪರೀಕ್ಷೆಯನ್ನು ರದ್ದುಗೊಳಿಸಿ ಹೊಸ ಅಧಿಸೂಚನೆ ಇಲ್ಲವೇ ಮರುಪರೀಕ್ಷೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತ್‌ಕುಮಾರ್‌ ಆಗ್ರಹಿಸಿದ್ದಾರೆ. 

Tags:    

Similar News