ಅಶಿಸ್ತು ಆರೋಪ | ಕಾಂಗ್ರೆಸ್ ಪಕ್ಷದಿಂದ ಕವಿತಾ ರೆಡ್ಡಿ ಉಚ್ಛಾಟನೆ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಜೊತೆಗೆ, ಪಕ್ಷದಿಂದ ಹಂಚಿಕೆ ಮಾಡಲಾಗಿದ್ದ ಎಲ್ಲ ಜವಾಬ್ದಾರಿಗಳನ್ನು ವಾಪಸ್ ಪಡೆಯಲಾಗಿದೆ ಎಂದು ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.;
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕವಿತಾ ರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಜೊತೆಗೆ, ಪಕ್ಷದಿಂದ ಹಂಚಿಕೆ ಮಾಡಲಾಗಿದ್ದ ಎಲ್ಲ ಜವಾಬ್ದಾರಿಗಳನ್ನು ವಾಪಸ್ ಪಡೆಯಲಾಗಿದೆ ಎಂದು ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.
ಪಕ್ಷದ ನಿರ್ಣಯಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ಮತ್ತು ಟೀಕಿಸಿ, ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಕಾರಣಕ್ಕೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಕವಿತಾ ರೆಡ್ಡಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಪ್ರಶ್ನಿಸಿ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಪಕ್ಷಕ್ಕೆ ಸಂಬಂಧಿಸಿದ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಬೇಡಿ ಎಂದು ಆಗ ಎಚ್ಚರಿಕೆ ನೀಡಲಾಗಿತ್ತು. ಆದರೆ ಈಗ ಕೆಪಿಸಿಸಿ ಮಹಿಳಾ ಘಟಕಕ್ಕೆ ಸೌಮ್ಯಾ ರೆಡ್ಡಿ ಅವರ ನೇಮಕವನ್ನು ಬಹಿರಂಗವಾಗಿ ಟೀಕಿಸಿದ್ದರು ಎಂದು ಮೂಲಗಳು ಹೇಳಿವೆ.
ಶಿಸ್ತು ಉಲ್ಲಂಘನೆ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಲಾಗಿತ್ತು. ಈಚೆಗೆ ನಡೆದ ಸಭೆಯಲ್ಲಿ ಅವರನ್ನು ಅಮಾನತು ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದ ಕವಿತಾ ರೆಡ್ಡಿ
ಕವಿತಾ ರೆಡ್ಡಿ ಮಹಿಳಾ ಅಧ್ಯಕ್ಷ ಸ್ಥಾನವೂ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಆ ಸ್ಥಾನ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಹಾಗೂ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರಿಗೆ ಒಲಿದಿತ್ತು. "ಬೆಂಗಳೂರಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರಿಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸ್ಥಾನ ನೀಡಲಾಗಿದೆ. ಕೇವಲ ಸಚಿವರ ಮಗಳೆಂಬ ಕಾರಣಕ್ಕೆ ಲಾಬಿ ಮಾಡಲಾಗಿದ್ದು, ಪಕ್ಷ ಸಂಘಟನೆಗೆ ದುಡಿದವರನ್ನು ಕಡೆಗಣಿಸಲಾಗಿದೆ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜೊತೆಗೆ, ಮಹಿಳಾ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ಆಯ್ಕೆಯನ್ನು ವಿರೋಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೂ ಪತ್ರ ಬರೆದಿದ್ದರು.
ಕವಿತಾ ರೆಡ್ಡಿ ಬರೆದ ಪತ್ರದಲ್ಲೇನಿತ್ತು?
"ರಾಜ್ಯದಲ್ಲಿ ಸಚಿವರೊಬ್ಬರ ಪುತ್ರಿಯನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿರುವುದು, ಸ್ವಂತ ಶ್ರಮದಿಂದ ಮೇಲೆ ಬಂದ ಮಹಿಳಾ ನಾಯಕಿಯರಿಗೆ ಮಾಡಿರುವ ಅವಮಾನವಾಗಿದೆ. ಪಕ್ಷದಲ್ಲಿ ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆಯನ್ನೂ ಹೊಂದಿರದ ಹಲವು ಸ್ವತಂತ್ರ ನಾಯಕಿಯರು ಹಾಗೂ ಕಾರ್ಯಕರ್ತೆಯರು ಇದ್ದಾರೆ. ಇವರೆಲ್ಲರೂ ಪಕ್ಷಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಪಕ್ಷದ ಸಂಘಟನೆಗಾಗಿ ಹಗಳಲಿರುಳು ಶ್ರಮಿತ್ತಿದ್ದಾರೆ. ಇಂತಹ ಕಾರ್ಯಕರ್ತರಿಗೆ ಪಕ್ಷದಲ್ಲಿ ಹುದ್ದೆ ನೀಡುವ ವಿಚಾರದಲ್ಲಿ ಕಡೆಗಣಿಸಲಾಗಿದೆ. ಪಕ್ಷದಲ್ಲಿ ಸಾಮಾಜಿಕ ನ್ಯಾಯ ಹಾಗೂ ಲಿಂಗ ಸಮಾನತೆಯನ್ನು ಕಡೆಗಣಿಸಲಾಗಿದೆ" ಎಂದು ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು.
ಮಾತು ನಿಲ್ಲಿಸುವುದಿಲ್ಲ
ಪಕ್ಷದಿಂದ ಅಮಾನತುಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕವಿತಾ ರೆಡ್ಡಿ, “ಇದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು, ನಿಮ್ಮಿಂದ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಮತ್ತು ನಿಮ್ಮ ಅಧ್ಯಕ್ಷತೆಯಲ್ಲಿ ನೀವು ಅದನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದೀರಿ! ಆಶ್ಚರ್ಯವಿಲ್ಲ, ಪಕ್ಷದಲ್ಲಿ ಸಾಮಾಜಿಕ ಮತ್ತು ಲಿಂಗ ಅನ್ಯಾಯದ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವುದಿಲ್ಲ! ನನ್ನಂತಹ ಮಹಿಳೆಯರು ಶಕ್ತಿಶಾಲಿಗಳ ವಿರುದ್ಧವೂ ನಿರ್ಭೀತರು" ಎಂದು ಬರೆದುಕೊಂಡಿದ್ದಾರೆ.
"ಸಿದ್ಧಾಂತದ ಪರವಾಗಿ ನಿಂತಿರುವ ಸ್ವತಂತ್ರ ಮಹಿಳೆಯರನ್ನು ಹೇಗೆ ಬೇಟೆಯಾಡಲಾಗುತ್ತದೆ ಮತ್ತು ರಾಜಕೀಯವಾಗಿ ಕಿರುಕುಳ ನೀಡಲಾಗುತ್ತದೆ ಎಂಬುದನ್ನು ರಾಹುಲ್ ಗಾಂಧಿ ಅವರು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ" ತಮ್ಮ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.