ಕೋಲಾರ: ಟೊಮೆಟೊ ಬೆಲೆ ದಿಢೀರ್ ಕುಸಿತ, ರೈತರಲ್ಲಿ ನಿರಾಸೆ

ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಟೊಮೆಟೊ ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ರೋಗಬಾಧೆಯೂ ಹೆಚ್ಚಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಗುಣಮಟ್ಟದ ಟೊಮೆಟೊ ಪೂರೈಕೆ ಆಗುತ್ತಿಲ್ಲ.;

Update: 2025-09-03 04:09 GMT
Click the Play button to listen to article

ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಧಾರಣೆ ದಿಢೀರ್ ಕುಸಿತ ಕಂಡಿದ್ದು, ಹಬ್ಬಗಳ ಸೀಸನ್‌ನಲ್ಲಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಬೆಳೆಗಾರರು ತೀವ್ರ ನಿರಾಸೆಗೊಂಡಿದ್ದಾರೆ.

ವಾರದ ಹಿಂದೆ 15 ಕೆ.ಜಿ. ತೂಕದ ಒಂದು ಬಾಕ್ಸ್ ಟೊಮೆಟೊಗೆ 750ರವರೆಗೆ ಬೆಲೆ ಇತ್ತು. ಆದರೆ ಈಗ ಉತ್ತಮ ಗುಣಮಟ್ಟದ ಟೊಮೆಟೊ ಬಾಕ್ಸ್‌ಗೆ ಕೇವಲ 300ಕ್ಕೆ ಇಳಿದಿದೆ. ಇನ್ನುಳಿದ ಸಾಮಾನ್ಯ ಗುಣಮಟ್ಟದ ಟೊಮೆಟೊ ಬಾಕ್ಸ್‌ಗಳು 100ಕ್ಕೆ ಮಾರಾಟವಾಗುತ್ತಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಟೊಮೆಟೊ ಬೆಲೆ 15 ರಿಂದ 20ರ ಆಸುಪಾಸಿನಲ್ಲಿದೆ.

ಬೆಲೆ ಕುಸಿತಕ್ಕೆ ಕಾರಣವೇನು?

ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಟೊಮೆಟೊ ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ರೋಗಬಾಧೆಯೂ ಹೆಚ್ಚಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಗುಣಮಟ್ಟದ ಟೊಮೆಟೊ ಪೂರೈಕೆ ಆಗುತ್ತಿಲ್ಲ. "ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನದಂತಹ ರಾಜ್ಯಗಳಲ್ಲಿ ಬೇಡಿಕೆಯಿದ್ದರೂ, ಗುಣಮಟ್ಟವಿಲ್ಲದ ಟೊಮೆಟೊವನ್ನು ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಲಾರಿಯಲ್ಲಿ ಸಾಗಿಸಿದರೂ ಮಾರಾಟವಾಗದೆ ಟೊಮೆಟೊ ಹಾಳಾಗುವ ಭಯದಿಂದ ಅವರು ಖರೀದಿ ಕಡಿಮೆ ಮಾಡಿದ್ದಾರೆ" ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ಕಿರಣ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಮಂಗಳವಾರ ಮಾರುಕಟ್ಟೆಗೆ 1.25 ಲಕ್ಷ ಬಾಕ್ಸ್ (17 ಸಾವಿರ ಕ್ವಿಂಟಲ್) ಟೊಮೆಟೊ ಆವಕವಾಗಿದೆ. ಹಿಂದೆ ಇದೇ ಅವಧಿಯಲ್ಲಿ ದಿನಕ್ಕೆ 30 ಸಾವಿರ ಕ್ವಿಂಟಲ್‌ವರೆಗೆ ಟೊಮೆಟೊ ಬರುತ್ತಿತ್ತು. ಹವಾಮಾನ ವೈಪರೀತ್ಯ ಮತ್ತು ರೋಗಬಾಧೆಯಿಂದ ಫಸಲು ಕಡಿಮೆಯಾಗಿದ್ದರೂ, ಇರುವ ಫಸಲಿಗೆ ಉತ್ತಮ ಬೆಲೆ ಸಿಗದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

Tags:    

Similar News