ಸಿಎಂ, ಡಿಸಿಎಂ ಹೆಸರು ಹೇಳಿ 30 ಕೋಟಿ ವಂಚನೆ: ಕಿಟ್ಟಿ ಪಾರ್ಟಿ ಲೇಡಿ ಸವಿತಾ ಬಂಧನ
ಕಿಟ್ಟಿ ಪಾರ್ಟಿಯಲ್ಲಿ ನೆಪದಲ್ಲಿ ಶ್ರೀಮಂತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಸವಿತಾ, ಈವರೆಗೆ 20ಕ್ಕೂ ಹೆಚ್ಚು ಮಹಿಳೆಯರಿಗೆ ಬರೋಬ್ಬರಿ 30 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿದ್ದಾಳೆ.;
ಸವಿತಾ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರು ಹೇಳಿಕೊಂಡು ಕಿಟ್ಟಿ ಪಾರ್ಟಿಗಳಲ್ಲಿ ಪರಿಚಯವಾದ ಸ್ನೇಹಿತೆಯರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸವಿತಾ ಎನ್ನುವ ಮಹಿಳೆಯನ್ನು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಕಿಟ್ಟಿ ಪಾರ್ಟಿಯಲ್ಲಿ ನೆಪದಲ್ಲಿ ಶ್ರೀಮಂತ ಮಹಿಳೆಯರನ್ನೇ ಟಾರ್ಗೇಟ್ ಮಾಡುತ್ತಿದ್ದ ಸವಿತಾ, ಈವರೆಗೆ 20ಕ್ಕೂ ಹೆಚ್ಚು ಮಹಿಳೆಯರಿಗೆ ಬರೋಬ್ಬರಿ 30 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿದ್ದಾಳೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.
ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಹಲವು ರಾಜಕಾರಣಿಗಳು ಗೊತ್ತೆಂದು ಹೇಳಿಕೊಳ್ಳುತ್ತಿದ್ದಳು. ಸಿಎಂ, ಡಿಸಿಎಂ, ಸಚಿವ ಎಂ.ಬಿ. ಪಾಟೀಲ್ ಹೆಸರುಗಳನ್ನು ಹೇಳಿ ಪುಸಲಾಯಿಸುತ್ತಿದ್ದಳು. ಬಳಿಕ ಅವರನ್ನ ಪುಸಲಾಯಿಸಿ ಹೂಡಿಕೆ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕದಿಂದ ಕಮ್ಮಿ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ಹಣ ನೀಡದೇ ವಂಚಿಸಿದ್ದಾಳೆ. ಈ ಸಂಬಂಧ ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನವಾಗಿ ಬಳಿಕ ಜಾಮೀನಿನ ಮೇಲೆ ಆಚೆ ಬಂದಿದ್ದಳು. ಬಳಿಕ ಸವಿತಾ ಮತ್ತದೇ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದ್ದು, ಇದೀಗ ಮತ್ತೆ ಅವಳನ್ನು ಪೊಲೀಸರು ಬಂದಿಸಿದ್ದಾರೆ.