ಹೊರಟ್ಟಿ ನಿವಾಸದಲ್ಲಿ ಖಾದರ್‌ ಮಾತುಕತೆ | ಭಿನ್ನಮತಕ್ಕೆ ತೆರೆ ಎಳೆದ ವಿಧಾನಸಭಾಧ್ಯಕ್ಷ- ಸಭಾಪತಿ

ಮಂಗಳವಾರವಷ್ಟೇ ಸ್ಪೀಕರ್‌ಗೆ ಪತ್ರ ಬರೆದಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸಭಾಧ್ಯಕ್ಷರ ವಿರುದ್ಧ ಏಕಪಕ್ಷೀಯ ಧೋರಣೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.;

Update: 2025-09-10 08:34 GMT

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹಾಗೂ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯೆ ಉಂಟಾಗಿದ್ದ ಭಿನ್ನಮತ ಬುಧವಾರ ಪರಸ್ಪರ ಮಾತುಕತೆ ಬಳಿಕ ಶಮನಗೊಂಡಿದೆ.

ವಿಧಾನಮಂಡಲದ ಕಾರ್ಯಕ್ರಮ ಆಯೋಜನೆಗಳಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳೂತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶಿವಾನಂದ ವೃತ್ತದಲ್ಲಿರುವ ಸಭಾಪತಿ ಹೊರಟ್ಟಿ ನಿವಾಸಕ್ಕೆ ಭೇಟಿ ನೀಡಿದ ಸ್ಪೀಕರ್ ಯು.ಟಿ. ಖಾದರ್‌ ಅವರು ಪ್ರತ್ಯೇಕವಾಗಿ ಕೊಠಡಿಯಲ್ಲಿ ಮಾತುಕತೆ ನಡೆಸಿದರು.

ಸಂಧಾನ ಮಾತುಕತೆ ಬಳಿಕ ಉಭಯರು ಒಟ್ಟಿಗೆ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮಲ್ಲಿನ ಗೊಂದಲ ಬಗೆಹರಿದಿದೆ ಎಂದು ಹೇಳುವ ಮೂಲಕ ಬಿಕ್ಕಟ್ಟಿಗೆ ತೆರೆ ಎಳೆದಿದ್ದಾರೆ.

ವಿಧಾನ ಪರಿಷತ್‌ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, “ನಾನು ವಿದೇಶ ಪ್ರವಾಸ ಕೈಗೊಂಡಿದ್ದ ವೇಳೆ ಇಬ್ಬರ ಮಧ್ಯೆ ಸಂವಹನ ಕೊರತೆ ಉಂಟಾಗಿದೆ. ವಿಧಾನ ಮಂಡಲದ ಕಾರ್ಯಕ್ರಮಗಳ ಆಯೋಜನೆಯಲ್ಲಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಪತ್ರ ಬರೆದು ತಿಳಿಸಿದ್ದೆ. ಯು.ಟಿ. ಖಾದರ್ ಅವರು ಸ್ಪಷ್ಟನೆ ನೀಡಿದ್ದಾರೆ. ಖಾದರ್ ಯುವಕರಿದ್ದಾರೆ, ಅವರು ಮಾಡುವ ಕೆಲಸಗಳಿಗೆ ನಾನು ಸಹಿ ಹಾಕುತ್ತೇನೆ. ವಿದೇಶ ಪ್ರವಾಸದಲ್ಲಿದ್ದಾಗಲೂ ಮೊಬೈಲ್‌ನಲ್ಲಿ ನೋಟ್ ಮಾಡಿಕೊಂಡು ಪತ್ರದ ಡ್ರಾಫ್ಟ್ ಮಾಡಿದ್ದೆ. ಆದರೆ, ನಮ್ಮ ಕಾರ್ಯದರ್ಶಿಗೆ ಅದರ ಮಾಹಿತಿ ಇರಲಿಲ್ಲ. ಈಗ ಎಲ್ಲವೂ ಸರಿ ಹೋಗಿದೆ,” ಎಂದು ತಿಳಿಸಿದರು.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಮಾತನಾಡಿ, “ಈಗ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲವೂ ಬಗೆಹರಿದಿದೆ. ಸಂವಹನ ಕೊರತೆಯಿಂದಾಗಿ ಸಭಾಪತಿ ಅವರಿಗೆ ಕೆಲವು ಗೊಂದಲಗಳಿದ್ದವು. ಗೊಂದಲಗಳ ಬಗ್ಗೆ ಮನವರಿಕೆ ಮಾಟಿಕೊಟ್ಟಿದ್ದೇನೆ,” ಎಂದು ಸ್ಪಷ್ಟಪಡಿಸಿದರು.

ಯು.ಟಿ. ಖಾದರ್ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, "ಯಾವುದೇ ಕಾರ್ಯಕ್ರಮ ನಡೆದರೂ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಿ. ಪುಸ್ತಕ ಮೇಳ, ಲೇಸರ್ ಲೈಟ್ ಅಳವಡಿಕೆ ಸೇರಿದಂತೆ ಯಾವುದೇ ವಿಷಯದ ಬಗ್ಗೆ ನನ್ನ ಅಭಿಪ್ರಾಯವನ್ನು ಪಡೆಯುತ್ತಿಲ್ಲ" ಎಂದು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಮಂಗಳವಾರವಷ್ಟೇ ಸ್ಪೀಕರ್‌ಗೆ ಪತ್ರ ಬರೆದಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸಭಾಧ್ಯಕ್ಷರ ವಿರುದ್ಧ ಏಕಪಕ್ಷೀಯ ಧೋರಣೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ವಿಧಾನಸೌಧದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳ, ಲೇಸರ್ ಲೈಟ್ ಅಳವಡಿಕೆ ಸೇರಿದಂತೆ ಯಾವುದೇ ವಿಷಯದ ಬಗ್ಗೆ ನನ್ನ ಅಭಿಪ್ರಾಯ ಪಡೆದಿಲ್ಲ ಎಂದು ಬೇಸರ ಹೊರಹಾಕಿದ್ದರು.

ಅಲ್ಲದೇ, ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಸಂಸದೀಯ ಸಂಘದ (ಸಿಪಿಎ) ಸಮ್ಮೇಳನದ ಆಯೋಜನೆ ಮತ್ತು ರೂಪುರೇಷೆಗಳ ಬಗ್ಗೆಯೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇವೆಲ್ಲವನ್ನೂ ಇಲ್ಲಿಯವರೆಗೆ ಸಹಿಸಿಕೊಂಡು ಬಂದಿದ್ದೇನೆ. ಇನ್ನು ಮುಂದೆ ಹೀಗೆ ಆಗುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಇದಕ್ಕೆ ಮರು ಪತ್ರ ಬರೆದಿದ್ದ ಸ್ಪೀಕರ್ ಯು.ಟಿ.ಖಾದರ್‌ ಅವರು, ʼನಾನು ಯಾವುದೇ ಏಕಪಕ್ಷೀಯ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Tags:    

Similar News