Bank Fraud| ಆಕರ್ಷಕ ಬಡ್ಡಿಯ ಆಮಿಷ ತೋರಿಸಿ ಕೇರಳ ಮೂಲದ ಸೊಸೈಟಿಯಿಂದ ಲಕ್ಷ ಲಕ್ಷ ರೂ. ಲೂಟಿ

ಆಕರ್ಷಕ ಬಡ್ಡಿ ದರ ನೀಡುವುದಾಗಿ ಜನ ಸಾಮಾನ್ಯರನ್ನು ಹಾಗೂ ಹಿರಿಯ ನಾಗರೀಕರನ್ನು ಟಾರ್ಗೆಟ್ ಮಾಡಿ ಲಕ್ಷ ಲಕ್ಷ ಹಣ ಸಂಗ್ರಹ ಮಾಡಿರುವ ದಿ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ ಜನರನ್ನು ವಂಚಿಸಿದೆ.;

Update: 2025-04-22 05:47 GMT

ಸಾಂಧರ್ಬಿಕ ಚಿತ್ರ

ಆಕರ್ಷಕ ಬಡ್ಡಿ ದರ ನೀಡುವುದಾಗಿ ಜನ ಸಾಮಾನ್ಯರನ್ನು ಹಾಗೂ ಹಿರಿಯ ನಾಗರಿಕರನ್ನು ಟಾರ್ಗೆಟ್ ಮಾಡಿ ಲಕ್ಷ ಲಕ್ಷ ಹಣ ಸಂಗ್ರಹ ಮಾಡಿ ವಂಚಿಸಿರುವ ಆರೋಪ ಕೇರಳ ಮೂಲದ ‘ದಿ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ ವಿರುದ್ಧ ಕೇಳಿಬಂದಿದೆ. ಬೆಂಗಳೂರು ಹೊರವಲಯ ಸರ್ಜಾಪುರ ಸುತ್ತಮುತ್ತ ಸಾವಿರಾರು ಗ್ರಾಹಕರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಇದೆ. 

2019ರಲ್ಲಿ ಸರ್ಜಾಪುರದ ದೊಮ್ಮಸಂದ್ರದಲ್ಲಿ ಶಾಖೆ ಆರಂಭಿಸಿದ ‘ದಿ ಮಲಬಾರ್ ಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ’ ಆಕರ್ಷಕ ಬಡ್ಡಿ ದರ ನೀಡುವುದಾಗಿ ಜನ ಸಾಮಾನ್ಯರನ್ನು ಹಾಗೂ ಹಿರಿಯ ನಾಗರಿಕರನ್ನು ಗುರಿಯಾಗಿಸಿ ಸ್ಥಿರ ಠೇವಣಿ ಮತ್ತು ದಿನ, ವಾರ, ತಿಂಗಳು ಹಾಗೂ ಪಿಗ್ಮಿ ಕೂಡ ಸಂಗ್ರಹ ಮಾಡಿತ್ತು. ಆರಂಭದಲ್ಲಿ ಗ್ರಾಹಕರಿಗೆ ಹಣ ಕೂಡ ಹಿಂದಿರುಗಿಸಿದೆ. ಅದೇ ನಂಬಿಕೆಯಲ್ಲಿ ಗ್ರಾಹಕರು ಬೇರೆ ಬೇರೆ ಬ್ಯಾಂಕುಗಳಲ್ಲಿದ್ದ ಹಣವನ್ನು ಸೊಸೈಟಿಗೆ ಜಮಾ ಮಾಡಿದ್ದಾರೆ. ಆದರೆ 2024ರಲ್ಲಿ ದಿಢೀರ್ ಮಲಬಾರ್ ಸೊಸೈಟಿ ಬಾಗಿಲು ಬಂದ್ ಮಾಡಿದ್ದು, ಸಿಬ್ಬಂದಿ ಪರಾರಿಯಾಗಿದ್ದಾರೆ.

ಕ್ಯಾನ್ಸರ್ ರೋಗಿ ರೈತ ಚಂದ್ರಾರೆಡ್ಡಿ ಎಂಬವರು ಕೊನೆ ದಿನಗಳಲ್ಲಿ ತನ್ನ ಜೀವನಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಕೂಡ ಹೆಚ್ಚಿನ ಬಡ್ಡಿ ಆಸೆಗೆ ಬಿದ್ದು ದಿ ಮಲಬಾರ್ ಸೊಸೈಟಿಯಲ್ಲಿ ಎಫ್​ಡಿ ಮಾಡಿದ್ದರು. ತಮಗೆ ನ್ಯಾಯ ದೊರಕಿಸಿ ಕೊಡುವಂತೆ ಸರ್ಜಾಪುರ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಐದಾರು ತಿಂಗಳ ಅಲೆದಾಟದ ಬಳಿಕ ಕೇವಲ ಎನ್ಸಿಆರ್ ದಾಖಲಿಸಿದ್ದಾರೆ.  ಸೊಸೈಟಿ ಅಧ್ಯಕ್ಷ ರಾಹುಲ್ ಚಕ್ರಪಾಣಿ, ಕಾರ್ಯನಿರ್ವಾಹಕ ಅಧಿಕ ಅಬ್ದುಲ್ ಅಜೀಜ್ ಸೇರಿದಂತೆ ಸಿಬ್ಬಂದಿಯ ಮೇಲೆ ಎಫ್​ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಚಂದ್ರಾರೆಡ್ಡಿ ಸರ್ಜಾಪುರ ಪೊಲೀಸರನ್ನು ಒತ್ತಾಯಿಸಿದ್ದಾರೆ.

 ದಿ ಮಲಬಾರ್ ಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ ಬೆಂಗಳೂರು ಅಲ್ಲದೆ ಕೇರಳದಲ್ಲಿಯೂ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿ, ಅದರ ಅಧ್ಯಕ್ಷ ಸೇರಿದಂತೆ ಸಿಬ್ಬಂದಿ ಜೈಲು ಸೇರಿದ್ದಾರೆ.

Tags:    

Similar News