ಮೇಕೆದಾಟು ಯೋಜನೆಗೆ ತಡೆ | ತಮಿಳುನಾಡು ಡಿಎಂಕೆ ಪ್ರಣಾಳಿಕೆ ವಿವಾದ
ಅಖಿಲ ಭಾರತ ಮಟ್ಟದ ವಿರೋಧ ಪಕ್ಷಗಳ ವೇದಿಕೆಯಾಗಿರುವ ʼಇಂಡಿಯಾʼ ಕೂಟದ ಭಾಗವಾಗಿರುವ ಡಿಎಂಕೆ, ಕರ್ನಾಟಕದ ಕಾಂಗ್ರೆಸ್ ಸರಕಾರದ ಕನಸಿನ ಯೋಜನೆಯಾದ ಬೆಂಗಳೂರು ಮತ್ತಿತರ ಕಡೆ ನೀರು ಪೂರೈಕೆ ಮಾಡುವ ಮೇಕೆದಾಟು ಯೋಜನೆಗೆ ವಿಘ್ನ ತರುವುದಾಗಿ ಹೇಳಿರುವುದು ಕರ್ನಾಟಕದ ಪಾಲಿಗೆ ಹಿನ್ನಡೆಯಾಗಿದೆ.;
ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ತನ್ನ ಚುನಾವಣಾ ಪ್ರಣಾಳಿಕೆ ಪ್ರಕಟಿಸಿದ್ದು ತನ್ನ ಪಕ್ಷ ಗೆದ್ದಲ್ಲಿ ಕಾವೇರಿ ನದಿಗೆ ಕರ್ನಾಟಕದ ಮೇಕೆದಾಟು ಅಣೆಕಟ್ಟೆ ಯೋಜನೆಗೆ ತಡೆಯೊಡ್ಡುವುದಾಗಿ ಘೋಷಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಅಖಿಲ ಭಾರತ ಮಟ್ಟದ ವಿರೋಧ ಪಕ್ಷಗಳ ವೇದಿಕೆಯಾಗಿರುವ ʼಇಂಡಿಯಾʼ ಕೂಟದ ಭಾಗವಾಗಿರುವ ಡಿಎಂಕೆ, ಕರ್ನಾಟಕದ ಕಾಂಗ್ರೆಸ್ ಸರಕಾರದ ಕನಸಿನ ಯೋಜನೆಯಾದ ಬೆಂಗಳೂರು ಮತ್ತಿತರ ಕಡೆ ನೀರು ಪೂರೈಕೆ ಮಾಡುವ ಮೇಕೆದಾಟು ಯೋಜನೆಗೆ ವಿಘ್ನ ತರುವುದಾಗಿ ಹೇಳಿರುವುದು ಕರ್ನಾಟಕದ ಪಾಲಿಗೆ ಹಿನ್ನಡೆಯಾಗಿದೆ. ಕೇಂದ್ರದ ಬಿಜೆಪಿ ಸರ್ಕಾರದ ಸಿಎಎ, ಎನ್‌ಇಪಿ ಮತ್ತಿತರ ನೀತಿಗಳ ಮತ್ತು ಬೆಲೆಯೇರಿಕೆಯಂತಹ ಪ್ರಮುಖ ವಿಷಯಗಳ ಬಗ್ಗೆ ಜತೆಯಾಗಿ ಹೋರಾಟ ಮಾಡಬೇಕಾಗಿರುವ ಸಂದರ್ಭದಲ್ಲಿ ಡಿಎಂಕೆ ಕಾವೇರಿ ವಿಷಯವನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಿರುವುದನ್ನು ರಾಜ್ಯ ಕಾಂಗ್ರೆಸ್ ವಿರೋಧಿಸುವ ಸಾಧ್ಯತೆ ಇದೆ. ಇದು ಇಂಡಿಯಾ ಕೂಟದ ಪಾಲುದಾರ ಪಕ್ಷಗಳಲ್ಲಿ ಭಿನ್ನಮತ ಸೃಷ್ಟಿಸಿದರೆ, ಕರ್ನಾಟಕದ; ಅದರಲ್ಲೂ ಬೆಂಗಳೂರು ಮಹಾನಗರದ ನೀರಿನ ಸಮಸ್ಯೆಗೆ ಪರಿಹಾರವೆಂದೇ ಬಿಂಬಿತವಾಗಿರುವ ಮೇಕೆದಾಟು ಅಣೆಕಟ್ಟೆ ಯೋಜನೆಗೆ ಅಡ್ಡಿಯಾಗುವ ಭೀತಿ ಎದುರಾಗಿದೆ.
ಬುಧವಾರ ಪ್ರಕಟವಾದ ಡಿಎಂಕ ಪ್ರಣಾಳಿಕೆಯ ಈ ಅಂಶ ಇಂಡಿಯಾ ಕೂಟದಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮತ್ತು ಡಿಎಂಕೆ ʼಸ್ನೇಹಿತರʼ ನಡುವೆ ವಿವಾದಕ್ಕೆ ಕಾರಣವಾಗಲಿದೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನಲಾಗಿದೆ.