ಗ್ರೇಟರ್ ಬೆಂಗಳೂರಿನಲ್ಲಿ ಶೇ. 50 ಮಹಿಳಾ ಮೀಸಲು; ದೇಶದ 'ನಾರಿ ಶಕ್ತಿ' ಗೆ ಕರ್ನಾಟಕವೇ ಬಲ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸ್ಥಳೀಯ ಸಂಸ್ಥೆಯಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟರು.;
ದೇಶದ ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯವು ಬೆರಳೆಣಿಕೆಯಷ್ಟಿರುವ ಈ ಕಾಲಘಟ್ಟದಲ್ಲಿ, ಕರ್ನಾಟಕವು ಮತ್ತೊಮ್ಮೆ ಐತಿಹಾಸಿಕ ಹೆಜ್ಜೆಯನ್ನಿಡಲು ಸಜ್ಜಾಗಿದೆ. ರಾಜ್ಯ ಸರ್ಕಾರವು ಇತ್ತೀಚೆಗೆ ರಚಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಶೇ. 50ರಷ್ಟು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡುವ ಮೂಲಕ, ರಾಜಕೀಯದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಭಾಷ್ಯ ಬರೆಯಲು ಮುಂದಾಗಿದೆ.
ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ರಾಜಕೀಯದಲ್ಲಿ ಮಹಿಳಾ ಮೀಸಲಾತಿಗೆ ಅಡಿಪಾಯ ಹಾಕಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ, 1995ರಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 33ರಷ್ಟು ಮೀಸಲಾತಿಯನ್ನು ಜಾರಿಗೆ ತರುವ ಮೂಲಕ, ದೇಶಕ್ಕೇ ಮಾದರಿಯಾದ ಕ್ರಾಂತಿಕಾರಕ ನಿರ್ಧಾರವನ್ನು ಕೈಗೊಂಡಿದ್ದರು. ಅಂದು ಕರ್ನಾಟಕವು ಇಟ್ಟ ಈ ದಿಟ್ಟ ಹೆಜ್ಜೆಯು, ಇಡೀ ದೇಶವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿತ್ತು ಮತ್ತು ಮಹಿಳಾ ಸಬಲೀಕರಣದ ಸುವರ್ಣ ಅಧ್ಯಾಯಕ್ಕೆ ನಾಂದಿ ಹಾಡಿತ್ತು. ಇದೀಗ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ಈ ಪರಂಪರೆಯನ್ನು ಮುಂದುವರಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ.
ದೇಶದಲ್ಲಿಯೂ ತರುವ ಪ್ರಯತ್ನ
ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಕಲ್ಪಿಸುವ ಐತಿಹಾಸಿಕ ಪ್ರಯತ್ನವು, ದಶಕಗಳಿಂದಲೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಒಮ್ಮತದ ಅಭಾವದಿಂದ ನೆನೆಗುದಿಗೆ ಬಿದ್ದಿದೆ. ಈ ಕ್ರಾಂತಿಕಾರಕ ಬದಲಾವಣೆಗೆ ಮೊದಲ ಬಾರಿಗೆ ಮುನ್ನುಡಿ ಬರೆದಿದ್ದು, 1996ರಲ್ಲಿ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡ ಅವರು ಎಂಬುದೇ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
1996ರ ಸೆಪ್ಟೆಂಬರ್ 12ರಂದು ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರ್ಕಾರವು ಈ ಐತಿಹಾಸಿಕ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿತು. ಆದರೆ, ದುರದೃಷ್ಟವಶಾತ್, ಮೈತ್ರಿಕೂಟದಲ್ಲಿದ್ದ ಕೆಲವು ಮಿತ್ರಪಕ್ಷಗಳೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ವಿಧೇಯಕವು ಅಂಗೀಕಾರವಾಗಲಿಲ್ಲ. ನಂತರ, ಅದನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಯಿತಾದರೂ, ಲೋಕಸಭೆ ವಿಸರ್ಜನೆಯಾದ ಕಾರಣ ವಿಧೇಯಕವು ರದ್ದಾಯಿತು.
ತದನಂತರ, 1998, 1999, 2002, ಮತ್ತು 2003ರಲ್ಲಿ ಈ ವಿಧೇಯಕವನ್ನು ಪುನಃ ಮಂಡಿಸಲಾಯಿತಾದರೂ, ಪ್ರತಿ ಬಾರಿಯೂ ರಾಜಕೀಯ ಬೆಂಬಲದ ಕೊರತೆಯಿಂದಾಗಿ ಅದು ವಿಫಲವಾಯಿತು. 2008ರಲ್ಲಿ, ಮನಮೋಹನ್ ಸಿಂಗ್ ಅವರ ಸರ್ಕಾರವು ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸಿ, 2010ರಲ್ಲಿ ಯಶಸ್ವಿಯಾಗಿ ಅಂಗೀಕರಿಸಿತು. ಆದರೆ, ಅದನ್ನು ಲೋಕಸಭೆಯಲ್ಲಿ ಮಂಡಿಸುವ ಪ್ರಯತ್ನ ನಡೆಯಲೇ ಇಲ್ಲ, ಹೀಗಾಗಿ ವಿಧೇಯಕವು ಮತ್ತೆ ನೆನೆಗುದಿಗೆ ಬಿತ್ತು. ದೇವೇಗೌಡರಿಂದ ಹಿಡಿದು, ಐ.ಕೆ. ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ, ಮತ್ತು ಮನಮೋಹನ್ ಸಿಂಗ್ ಅವರವರೆಗಿನ ಪ್ರಧಾನಿಗಳು ಈ ನಿಟ್ಟಿನಲ್ಲಿ ಪ್ರಯತ್ನ ಪಟ್ಟರೂ, ಲೋಕಸಭೆಯಲ್ಲಿ ಒಮ್ಮತ ಮೂಡಿಸುವಲ್ಲಿ ವಿಫಲರಾದರು.
27 ವರ್ಷಗಳ ಮಹಿಳಾ ಮೀಸಲಾತಿಗೆ ಮರುಜೀವ
27 ವರ್ಷಗಳ ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕನಸಿಗೆ ಮರುಜೀವ ಬಂದಿತು. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ ಉಭಯ ಸದನದಲ್ಲಿಯೂ ಅಂಗೀಕರಿಸಿದರು. ಮಹಿಳಾ ಮೀಸಲಾತಿ ಮಸೂದೆಯ ಹೆಸರನ್ನು 'ನಾರಿ ಶಕ್ತಿ ವಂದನ್ ಕಾಯ್ದೆ' ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಕಾಯ್ದೆ ಜಾರಿಯಾದ ನಂತರ ಪ್ರಜಾಪ್ರಭುತ್ವಕ್ಕೆ ಹೊಸತನ ಬಂದಿತು.
ಮಹಿಳಾ ಮೀಸಲಾತಿ ಮಸೂದೆಯ ಅವಧಿ 15 ವರ್ಷಗಳಾಗಿರುತ್ತದೆ. ಆದರೂ ಈ ಅವಧಿಯನ್ನು ವಿಸ್ತರಿಸುವ ಅಧಿಕಾರವನ್ನು ಸಂಸತ್ತು ಹೊಂದಿರುತ್ತದೆ. ಈ ಕಾಯ್ದೆ ಜಾರಿಯಾದ ನಂತರ ಲೋಕಸಭೆಯಲ್ಲಿ ಮಹಿಳಾ ಸ್ಥಾನಗಳ ಸಂಖ್ಯೆ 181ಕ್ಕೆ ಹೆಚ್ಚಳವಾಗಲಿದೆ. ಪ್ರಸ್ತುತ ಲೋಕಸಭೆಯಲ್ಲಿ ಮಹಿಳಾ ಸಂಸದರ ಸಂಖ್ಯೆ 82 ಇದೆ. ಕ್ಷೇತ್ರ ಪುನರ್‌ವಿಂಗಡನೆ ಬಳಿಕವೇ ಮೀಸಲಾತಿ ಜಾರಿಯಾಗಲಿದೆ ಎಂದು ಮಸೂದೆಯ ಕರಡು ಪ್ರತಿಯಲ್ಲಿ ಹೇಳಲಾಗಿದೆ. ಮಸೂದೆಯ ಕರಡು ಪ್ರಕಾರ, ಸಂಸತ್ತಿನಲ್ಲಿ 33 ಪ್ರತಿಶತ ಸ್ಥಾನಗಳು ಮತ್ತು ದೆಹಲಿ ಸೇರಿದಂತೆ ಎಲ್ಲಾ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಿಡಲಾಗುವುದು. ಎಸ್‌ಸಿ-ಎಸ್‌ಟಿ ವರ್ಗಕ್ಕೆ ಕೋಟಾದೊಳಗೆ ಜಾರಿಯಾಗಲಿದೆ. ಅಂದರೆ ಶೇ.33ರ ಮೀಸಲಾತಿಯೊಳಗೆ ಎಸ್‌ಸಿ-ಎಸ್‌ಟಿಗೆ ಸೇರಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಲಾಗುವುದು. ಕರ್ನಾಟಕದಲ್ಲಿಯೂ 2028ರ ವಿಧಾನಸಭೆಗೆ ಶೇ.೩೩ರಷ್ಟು ಮಹಿಳೆ ಮೀಸಲಾತಿ ಅನ್ವಯವಾಗಲಿದೆ.
ರಾಜ್ಯದಲ್ಲಿ ಶೇ.33ರಿಂದ 50ಕ್ಕೆ ಹೆಚ್ಚಳ:
ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಇದ್ದ ಮಹಿಳಾ ಮೀಸಲಾತಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತವಧಿಯಲ್ಲಿ ಶೇ.50ಕ್ಕೆ ಹೆಚ್ಚಿಸಲಾಯಿತು. 2015ರಲ್ಲಿ ಮಹಿಳಾ ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಳ ಮಾಡಲಾಯಿತು. ಹೀಗಾಗಿ ಒಮ್ಮೆ ಸ್ಥಳೀಯ ಸಂಸ್ಥೆಗಳಿಗೆ ಶೇ.50ರಷ್ಟು ಮಹಿಳಾ ಮೀಸಲಾತಿಯಲ್ಲಿ ಚುನಾವಣೆ ನಡೆಸಲಾಯಿತು. ನಂತರದಲ್ಲಿ ಚುನಾವಣೆ ನಡೆಯದ ಕಾರಣ ಹಾಗೆಯೇ ಉಳಿದುಕೊಂಡಿದೆ. ಬಿಬಿಎಂಪಿಯಲ್ಲಿ ಶೇ.50ರಷ್ಟು ಮಹಿಳಾ ಮೀಸಲಾತಿಯೊಂದಿಗೆ ಚುನಾವಣೆ ನಡೆಸಬೇಕಾಗಿತ್ತು. ಆದರೆ, ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶ ತಡವಾಗಿ ತಲುಪಿದ್ದರಿಂದ ಶೇ.33ರಷ್ಟು ಮಹಿಳಾ ಮೀಸಲಾತಿಯೊಂದಿಗೆ ಚುನಾವಣೆ ನಡೆಸಲಾಯಿತು ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ಹೇಳಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಶೇ.50ರೊಂದಿಗೆ ಚುನಾವಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಪಥ್ಯಕ್ಕೆ ಸರಿದು ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜನ್ಮ ತಳೆದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯುವ ಚುನಾವಣೆಯಲ್ಲಿ ಶೇ.50ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಎಲ್ಲಾ ವಲಯಗಳಲ್ಲಿ ಆಯಾ ವ್ಯಾಪ್ತಿಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಪಾಲಿಕೆಯಲ್ಲಿ ಆಡಳಿತಾಧಿಕಾರಿಗಳಾಗಿ ಆಯುಕ್ತರನ್ನು ನೇಮಕ ಮಾಡಲಾಗಿದೆ. ಆಯುಕ್ತರಿಗೆ ನೆರವಾಗಲು, ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಕೆಎಎಸ್ ಅಧಿಕಾರಿಗಳು ಹಾಗೂ ಮುಖ್ಯ ಇಂಜಿನಿಯರ್ ಕಡ್ಡಾಯವಾಗಿ ಇರುತ್ತಾರೆ. ಈ ಹಿಂದೆ ಇದ್ದ 27 ವಿಭಾಗಗಳನ್ನು 50 ವಿಭಾಗಗಳಾಗಿ ಮಾಡಲಾಗಿದೆ. 75 ಉಪ ವಿಭಾಗಗಳನ್ನು 150ಕ್ಕೆ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಸುಮಾರು 500 ಹೊಸ ನಾಯಕರುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಮಹಿಳೆಯರು ಹಾಗೂ ಪುರುಷರು 50:50 ಇರಲಿದ್ದಾರೆ.
ಶೇ.50 ಕ್ಕಿಂತ ಹೆಚ್ಚು ಮೀಸಲಾತಿ ಹೊಂದಿರುವ ರಾಜ್ಯಗಳು
ದೇಶದ 18 ರಾಜ್ಯಗಳಲ್ಲಿ, ಮಹಿಳಾ ಚುನಾಯಿತ ಪ್ರತಿನಿಧಿಗಳ ಶೇಕಡವಾರು ಪ್ರಮಾಣವು ಶೇ.50 ಕ್ಕಿಂತ ಹೆಚ್ಚಿದೆ. ಉತ್ತರಾಖಂಡ, ಛತ್ತೀಸ್‌ಗಢ, ಅಸ್ಸಾಂ, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಕೇರಳ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ರಾಜಸ್ಥಾನ, ಮಣಿಪುರ, ತೆಲಂಗಾಣ, ಸಿಕ್ಕಿಂ, ಹಿಮಾಚಲ ಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಕೇರಳ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ಕಲ್ಪಿಸಿವೆ. 2006 ರಲ್ಲಿ ಬಿಹಾರವು ಮೀಸಲಾತಿ ಶೇಕಡಾವಾರು ಪ್ರಮಾಣವನ್ನು ಶೇ.50 ಕ್ಕೆ ಹೆಚ್ಚಿಸಿದ ಮೊದಲ ರಾಜ್ಯವಾಗಿದ್ದು, ಸಿಕ್ಕಿಂ ಎರಡನೇ ರಾಜ್ಯವಾಗಿದೆ ಎಂದು ಹೇಳಲಾಗಿದೆ.