Nandini Milk| ಮಹಾ ಕುಂಭಮೇಳದಲ್ಲಿ ನಂದಿನಿ ಹಾಲಿನ ಚಹಾ ಸ್ವಾದ!
ಚಹಾದ ಜೊತೆಗೆ, ಚಾಯ್ ಪಾಯಿಂಟ್ ಮಳಿಗೆಗಳಲ್ಲಿ ಸಿಹಿತಿಂಡಿಗಳು ಮತ್ತು ಮಿಲ್ಕ್‌ಶೇಕ್‌ಗಳು ಸೇರಿದಂತೆ ವಿವಿಧ ನಂದಿನಿ ಉತ್ಪನ್ನಗಳನ್ನು ಸಹ ನೀಡಲಿದ್ದು, ಮಹಾ ಕುಂಭಮೇಳ ನಂದಿನಿಯ ಉಪಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲಿವೆ.;
ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಮಹಾ ಕುಂಭಮೇಳದಲ್ಲಿ ಕರ್ನಾಟಕದ ಹೆಮ್ಮೆಯ ಬ್ರಾಂಡ್ ನಂದಿನಿ ಸವಿಯನ್ನೂ ಸವಿಯಬಹುದು. ಕರ್ನಾಟಕ ಹಾಲು ಒಕ್ಕೂಟ ಈಗ ಮೆ॥ಚಾಯ್ ಪಾಯಿಂಟ್ ಜತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದು, ನಂದಿನಿ ಹಾಲಿನ ಮಿಶ್ರಣದ ಚಹಾವನ್ನು ಸ್ವಾದಿಸಬಹುದು.
ರಾಷ್ಟ್ರ ರಾಜಧಾನಿ ದೆಹಲಿಗೆ ಈಗಾಗಲೇ ಲಗ್ಗೆ ಹಾಕಿರುವ ʼನಮ್ಮ ನಂದಿನಿʼ ಈಗ ದೇಶದ ಅತಿದೊಡ್ಡ ಧಾರ್ಮಿಕ ಮೇಳ ʼಮಹಾ ಕುಂಭ ಮೇಳʼದಲ್ಲಿ ತನ್ನ ಇರುವಿಕೆಯನ್ನು ಸಾಕಾರಗೊಳಿಸಲಿದೆ. ಲಕ್ಷಾಂತರ ಚಹಾ ಪ್ರಿಯರಿಗೆ ನಂದಿನಿ ಸ್ವಾದವನ್ನು ಚಪ್ಪರಿಸುವಂತಾಗಿದೆ. ಜತೆಗೆ, ನಂದಿನಿಯ ಇತರ ಉತ್ಪನ್ನಗಳನ್ನೂ ಕುಂಭ ಮೇಳದಲ್ಲಿ ಸವಿಯುವ ಅವಕಾಶ ದೊರೆಯಲಿದೆ.
ಚಾಯ್ ಪಾಯಿಂಟ್ ಈ ಸಹಯೋಗದ ಭಾಗವಾಗಿ, ಕುಂಭ ಮೇಳದ ಆವರಣದಲ್ಲಿ 10 ಮಳಿಗೆಗಳನ್ನು ಸ್ಥಾಪಿಸಿದ್ದು, ಮೇಳದ ಸಮಯದಲ್ಲಿ 1 ಕೋಟಿ ಕಪ್‌ಗಳಿಗೂ ಹೆಚ್ಚು ಚಹಾವನ್ನು ಪೂರೈಸುವ ಗುರಿಯನ್ನು ಹೊಂದಿದೆ. ಒಂದೇ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಟೀ ಕಪ್‌ಗಳನ್ನು ಮಾರುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡುವುದು ಇದರ ಉದ್ದೇಶವಾಗಿದೆ. ಮೇಳದಲ್ಲಿ ಪ್ರತಿ ಕಪ್ ಚಹಾವು ನಂದಿನಿಯ "ಸಮೃದ್ಧ ಮತ್ತು ಉತ್ತಮ ಗುಣಮಟ್ಟದ" ಹಾಲನ್ನು ಒಳಗೊಂಡಿರುತ್ತದೆ. ಇದು ಚಹಾ ಪ್ರಿಯರಿಗೆ ಸಂತೋಷಕರ ಅನುಭವವನ್ನು ನೀಡುತ್ತದೆ ಎಂದು ಕೆಎಂಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಮಹಾ ಕುಂಭಮೇಳವು ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಜನರು ಇದರಲ್ಲಿ ಭಾಗವಹಿಸುತ್ತಾರೆ.
ನಂದಿನಿ ಉಪಉತ್ಪನ್ನಗಳೂ ಲಭ್ಯ
ಚಹಾದ ಜೊತೆಗೆ, ಚಾಯ್ ಪಾಯಿಂಟ್ ಮಳಿಗೆಗಳು ಸಿಹಿತಿಂಡಿಗಳು ಮತ್ತು ಮಿಲ್ಕ್‌ಶೇಕ್‌ಗಳು ಸೇರಿದಂತೆ ವಿವಿಧ ನಂದಿನಿ ಉತ್ಪನ್ನಗಳನ್ನು ಸಹ ನೀಡಲಿದ್ದು, ಈ ಮಹಾ ಕುಂಭಮೇಳದಲ್ಲಿ ನಂದಿನಿಯ ಉಪಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲಿವೆ. ಈ ಪಾಲುದಾರಿಕೆಯು ಭಾರತದ ಉತ್ತರದ ಮಾರುಕಟ್ಟೆಗಳಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವ ನಂದಿನಿಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಮತ್ತು ದೇಶಾದ್ಯಂತ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಡೈರಿ ಉತ್ಪನ್ನಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೆಎಮ್‌ಎಫ್ ತಿಳಿಸಿದೆ.
"ಮಹಾ ಕುಂಭಮೇಳ 2025 ಗಾಗಿ ಚಾಯ್ ಪಾಯಿಂಟ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಕೆಎಂಎಫ್ ಗೆ ಖುಷಿಯಾಗಿದೆ. ವೈವಿಧ್ಯಮಯ ಪ್ರೇಕ್ಷಕರಿಗೆ ನಂದಿನಿ ತನ್ನ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಉತ್ತರ ಭಾರತದಲ್ಲಿ ನಮ್ಮ ಅಸ್ತಿತ್ವವನ್ನು ಬಲಪಡಿಸಲು ಇದು ಒಂದು ಒಳ್ಳೆಯ ಅವಕಾಶವಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗೆ ಕೊಡುಗೆ ನೀಡಲು ನಾವು ಎದುರು ನೋಡುತ್ತಿದ್ದೇವೆ" ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ತಿಳಿಸಿದ್ದಾರೆ.