ಪಿಎಸ್‌ಐ ನೇಮಕಾತಿ ಹಗರಣ | ಎಸ್ಐಟಿ ರಚನೆಗೆ ಸಚಿವ ಸಂಪುಟ ಅಸ್ತು
ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪೊಲೀಸ್ ನೇಮಕಾತಿ ಹಗರಣಕ್ಕೆ ಕುರಿತು ಹೆಚ್ಚಿನ ತನಿಖೆ ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
By : The Federal
Update: 2024-03-15 10:48 GMT
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣ ಸಂಬಂಧ ಹೆಚ್ಚುವರಿ ತನಿಖೆಗಾಗಿ ಎಸ್‌ಐಟಿ(ವಿಶೇಷ ತನಿಖಾ ದಳ) ರಚನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಹಗರಣದ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ಸಮಿತಿ ತನಿಖೆ ನಡೆಸಿ ಸಲ್ಲಿಸಿದ ವರದಿ ಹಿನ್ನೆಲೆಯಲ್ಲಿ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ.
ಸರ್ಕಾರಿ ನೌಕರರೂ ಸೇರಿ ಖಾಸಗಿಯವರು, ಮಧ್ಯವರ್ತಿಗಳು ಸೇರಿ 113 ಜನರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಿಐಡಿಯವರು 17 ಪ್ರಕರಣಗಳ ತನಿಖೆಯನ್ನು ಮಾಡುತ್ತಿದ್ದಾರೆ. ಆಯೋಗದ ಮುಂದೆ ಕೆಲವರು ಮಾಹಿತಿ ನೀಡಿಲ್ಲ. ಅಂಥವರ ಬಳಿ ಇರುವ ಮಾಹಿತಿಯನ್ನು ಇತರೆ ತನಿಖೆ ಮೂಲಕ ಪಡೆಯಬೇಕಿದ್ದು, ತಪ್ಪುಗಳಾಗಿರುವ ಬಗ್ಗೆ ಇನ್ನಷ್ಟು ತನಿಖೆ ಕೈಗೊಳ್ಳಲು ಎಸ್.ಐ.ಟಿಗೆ ವಹಿಸಬೇಕೆಂಬ ನ್ಯಾಯಮೂರ್ತಿಗಳ ಶಿಫಾರಸಿನ ಹಿನ್ನೆಲೆಯಲ್ಲಿ ಎಸ್.ಐ.ಟಿ ರಚನೆಗೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ.