ಡಾ. ಕಸ್ತೂರಿ ರಂಗನ್‌ ವರದಿ | ಸಂಪೂರ್ಣ ತಿರಸ್ಕರಿಸಲು ಸಂಪುಟ ಸಭೆ ತೀರ್ಮಾನ

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಗುರುತಿಸುವ ಕೇಂದ್ರ ಸರ್ಕಾರದ ಆರನೇ ಕರಡು ಅಧಿಸೂಚನೆಯನ್ನು ಮಲೆನಾಡು-ಕರಾವಳಿ ಭಾಗದ ಜನರು ವಿರೋಧಿಸಿದ್ದರು

Update: 2024-09-27 07:51 GMT

ಪಶ್ಚಿಮ ಘಟ್ಟಗಳ ಕುರಿತ ಡಾ.ಕೆ. ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ತನ್ನ ನಿರ್ಧಾರಕ್ಕೆ ಬದ್ಧವಾಗಿರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ಡಾ.ಕೆ.ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿ ಆಧರಿಸಿ ಕೇಂದ್ರ ಸರ್ಕಾರವು ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶ (ESA) ಗುರುತಿಸಲು ಹೊರಡಿಸಿದ್ದ ಕರಡು ಅಧಿಸೂಚನೆ ಸಂಬಂಧ ಗುರುವಾರ ನಡೆದ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚಿಸಿ, ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಧಾರ ಕೈಗೊಂಡಿದೆ.

ಇತ್ತೀಚೆಗೆ ಅರಣ್ಯ ಇಲಾಖೆ ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಗುರುತಿಸುವ ಕೇಂದ್ರ ಸರ್ಕಾರದ ಆರನೇ ಕರಡು ಅಧಿಸೂಚನೆಯನ್ನು ಮಲೆನಾಡು-ಕರಾವಳಿ ಜನಪರ ಒಕ್ಕೂಟ ವಿರೋಧಿಸಿತ್ತು.

ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಾದ್ಯಂತ ಪಶ್ಚಿಮ ಘಟ್ಟಗಳ 56,825.7 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಕೇಂದ್ರ ಪರಿಸರ ಸಚಿವಾಲಯವು 2014 ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ಆರು ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಆದರೆ, ರಾಜ್ಯಗಳ ಆಕ್ಷೇಪದಿಂದಾಗಿ ಅಂತಿಮ ಅಧಿಸೂಚನೆ ಇನ್ನೂ ಬಾಕಿ ಉಳಿದಿದೆ.

ಅಧಿಸೂಚನೆಯ ಪ್ರಕಾರ ಗುಜರಾತ್‌ ನಲ್ಲಿ 449 ಚದರ ಕಿಲೋಮೀಟರ್, ಮಹಾರಾಷ್ಟ್ರದಲ್ಲಿ 17,340 ಚದರ ಕಿಲೋಮೀಟರ್, ಗೋವಾದಲ್ಲಿ 1,461 ಚದರ ಕಿಲೋಮೀಟರ್, ಕರ್ನಾಟಕದಲ್ಲಿ 20,668 ಚದರ ಕಿಲೋಮೀಟರ್, ತಮಿಳುನಾಡಿನಲ್ಲಿ 6,914 ಚದರ ಕಿಲೋಮೀಟರ್ ಮತ್ತು ಕೇರಳದಲ್ಲಿ 9,993.7 ಚದರ ಕಿಲೋಮೀಟರ್‌ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ(ESA) ಎಂದು ಘೋಷಿಸಲು ಪ್ರಸ್ತಾಪಿಸಿತ್ತು.

Tags:    

Similar News