Waqf Assets Dispute | ರೈತರಿಗೆ ನೀಡಿದ್ದ ವಕ್ಫ್​ ನೋಟಿಸ್ ವಾಪಸ್​ಗೆ ಅಧಿಕೃತ ಆದೇಶ

ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಸೂಚನೆ ನೀಡಿದ್ದು ಅಧಿಕೃತ ಆದೇಶ ಹೊರಬಿದ್ದಿದೆ.;

Update: 2024-11-10 05:37 GMT
ಮುಖ್ಯಮಂತ್ರಿ ಸಿದ್ದರಾಮಯ್ಯ

ರೈತರ ಪಹಣಿಗಳಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಿ ನೀಡಿರುವ ನೋಟಿಸ್‌ಗಳನ್ನು ತಕ್ಷಣವೇ ವಾಪಸ್‌ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿದೆ.  

ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆಯೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಕಂದಾಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ (ಭೂ ಮಂಜೂರಾತಿ ಮತ್ತು ಸುಧಾರಣೆ) ಡಾ.ಬಿ.ಉದಯಕುಮಾರ್‌ ಶೆಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ. ರೈತರಿಗೆ ಈಗಾಗಲೇ ನೀಡಿರುವ ಎಲ್ಲಾ ರೀತಿಯ ನೋಟಿಸ್‌ ಹಿಂಪಡೆಯುವಂತೆ ಸಿಎಂ ಆದೇಶ ನೀಡಿದ್ದ ಹೊರತಾಗಿಯೂ ಮೇಲಧಿಕಾರಿಗಳ ಅನುಮತಿ ಇಲ್ಲದೆ ನೋಟಿಸ್‌ ಹಿಂಪಡೆಯಲಾಗದು ಎಂದು ನ.7ರಂದು ಎರಡನೇ ನೆನಪೋಲೆ ಹೊರಡಿಸಿದ್ದ ಅಧಿಕಾರಿ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲೇ ಸ್ಪಷ್ಟಪಡಿಸಿದ್ದಾರೆ.

ರೈತರ ಜಮೀನಿನಿಂದ ಹಿಡಿದು ಮಠ ಹಾಗೂ ಹಿಂದೂ ದೇವಾಲಯಗಳಿಗೂ ವಕ್ಫ್‌ ಆಸ್ ನೋಟಿಸ್ ನೀಡುವವರೆಗೆ ಬಂದಿತ್ತು. ಬಳಿಕ ರಾಜ್ಯದಲ್ಲಿ ರೈತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸದ್ಯ ಎಚ್ಚೆತ್ತುಕೊಂಡಿರುವ ಸರ್ಕಾರ ರೈತರಿಗೆ ನೀಡಿದ್ದ ನೋಟಿಸ್‌ ಅಧಿಕೃತವಾಗಿ ವಾಪಾಸ್ ಪಡೆದುಕೊಂಡಿದೆ.

ಆದೇಶದಲ್ಲಿ ಏನಿದೆ?

ರೈತರು, ಇತರೆ ಆಸ್ತಿಗಳನ್ನು ವಕ್ಫ್‌ ಹೆಸರಿಗೆ ಖಾತೆ ಮಾಡುವ ಸಂಬಂಧ ನೀಡಿರುವ ಎಲ್ಲ ನೋಟಿಸ್‌ಗಳನ್ನು ತಕ್ಷಣ ಹಿಂಪಡೆಯಬೇಕು.

ಖಾತೆ ಬದಲಾವಣೆ ಕುರಿತು ಯಾವುದೇ ಕಚೇರಿ, ಪ್ರಾಧಿಕಾರದಿಂದ ನೀಡಿದ ನಿರ್ದೇಶನಗಳನ್ನೂ ಕೂಡಲೇ ವಾಪಸ್‌ ಪಡೆಯಬೇಕು.

ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರೈತರ ವಿರುದ್ಧ ಕ್ರಮ ಜರುಗಿಸಬಾರದು.

ನೋಟಿಸ್‌ ಹಿಂಪಡೆಯಲು ಸಿಎಂ ಆದೇಶಿಸಿದ ಹೊರತಾಗಿಯೂ 2ನೇ ನೆನಪೋಲೆ ಹೊರಡಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು.

ರಾಜ್ಯದ ಎಲ್ಲ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯಿಂದ ಆದೇಶ.


Tags:    

Similar News