ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಜುಲೈ ತಿಂಗಳಿಂದ ತುಟ್ಟಿಭತ್ಯೆ ಹೆಚ್ಚಳ

2024ರ ಪರಿಷ್ಕೃತ ವೇತನ ಶ್ರೇಣಿಗಳ ಅನ್ವಯ ಮೂಲ ವೇತನದ ತುಟ್ಟಿಭತ್ಯೆಯನ್ನು ಶೇ 8.50 ರಿಂದ 10.75ಕ್ಕೆ ಹೆಚ್ಚಳ ಮಾಡಲಾಗಿದ್ದು ಶೇ. 2.25 ಹೆಚ್ಚಳವಾಗಿದೆ. ಇದು 2024 ಜುಲೈ 1 ರಿಂದ ಅನ್ವಯವಾಗಲಿದೆ.;

Update: 2024-11-27 15:26 GMT

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸುವ ಮೂಲಕ ಸಂತಸ ಸುದ್ದಿ ನೀಡಿದೆ.  2024ರ ಪರಿಷ್ಕೃತ ವೇತನ ಶ್ರೇಣಿಗಳ ಅನ್ವಯ  ಮೂಲ ವೇತನದ ತುಟ್ಟಿಭತ್ಯೆಯನ್ನು ಶೇ 8.50 ರಿಂದ 10.75ಕ್ಕೆ ಹೆಚ್ಚಳ ಮಾಡಲಾಗಿದೆ.

ನೌಕರರ ತುಟ್ಟಿಭತ್ಯೆ ಹೆಚ್ಚಳವು 2024 ಜುಲೈ 1 ರಿಂದ ಅನ್ವಯವಾಗಲಿದೆ. ಆದರೆ, ಪರಿಷ್ಕೃತ ತುಟ್ಟಿಭತ್ಯೆಗಳ ಆರ್ಥಿಕ ಲಾಭವು 2024 ಆಗಸ್ಟ್ 1 ರಿಂದ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಿದೆ.

ನಿವೃತ್ತಿ ವೇತನದಾರರು ಹಾಗೂ ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಹಾಗೂ ಕುಟುಂಬ ನಿವೃತ್ತಿ ವೇತನ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರಿಗೆ ಜುಲೈ 1 ರಿಂದ ತುಟ್ಟಿ ಭತ್ಯೆ ಜಾರಿಗೆ ಬರಲಿದೆ.

ಯಾರಿಗೆಲ್ಲಾ ತುಟ್ಟಿಭತ್ಯೆ ಲಾಭ

ಯುಜಿಸಿ ವೇತನ ಪಡೆಯುತ್ತಿರುವ ನೌಕರರು, ಜಿಲ್ಲಾ ಪಂಚಾಯಿತಿ ಪೂರ್ಣಾವಧಿ ನೌಕರರು, ವಿಶ್ವವಿದ್ಯಾಲಯ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣಾವಧಿ ನೌಕರರಿಗೂ ಇದರ ಲಾಭ ಸಿಗಲಿದೆ.

ಎನ್ಜೆಪಿಸಿ ವೇತನ ಶ್ರೇಣಿಯಲ್ಲಿರುವ ನ್ಯಾಯಾಂಗ ಅಧಿಕಾರಿಗಳಿಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.

ವೇತನ ಶ್ರೇಣಿಗಳು ಮತ್ತು ಪಿಂಚಣಿ ಪರಿಷ್ಕರಣೆ ಕುರಿತ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ ಆದೇಶದಲ್ಲಿ ತಿಳಿಸಿದೆ.

 

 

 

Tags:    

Similar News