ರಾಜ್ಯದಲ್ಲಿ ಯೂರಿಯಾ ರಸಗೊಬ್ಬರಕ್ಕೆ ತೀವ್ರ ಕೊರತೆ: 1.65 ಲಕ್ಷ ಟನ್ ತಕ್ಷಣ ಪೂರೈಸಲು ಕೇಂದ್ರಕ್ಕೆ ಸಿಎಂ ಪತ್ರ

ಕೇಂದ್ರ ಸರ್ಕಾರವು 2025ರ ಮುಂಗಾರು ಹಂಗಾಮಿಗೆ ರಾಜ್ಯಕ್ಕೆ 11.17 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು ಹಂಚಿಕೆ ಮಾಡಿದೆ. ಆದರೆ, ಇಲ್ಲಿಯವರೆಗೆ ಕೇವಲ 5.16 ಲಕ್ಷ ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದೆ.;

Update: 2025-07-25 07:02 GMT

ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವ ಬೆನ್ನಲ್ಲೇ, ಯೂರಿಯಾ ರಸಗೊಬ್ಬರಕ್ಕೆ ತೀವ್ರ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಕ್ಷಣವೇ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರವು 2025ರ ಮುಂಗಾರು ಹಂಗಾಮಿಗೆ ರಾಜ್ಯಕ್ಕೆ 11.17 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು ಹಂಚಿಕೆ ಮಾಡಿದೆ. ಆದರೆ, ಇಲ್ಲಿಯವರೆಗೆ ಕೇವಲ 5.16 ಲಕ್ಷ ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದೆ. ಏಪ್ರಿಲ್‌ನಿಂದ ಜುಲೈವರೆಗೆ ರಾಜ್ಯಕ್ಕೆ 6.80 ಲಕ್ಷ ಮೆಟ್ರಿಕ್ ಟನ್ ಯೂರಿಯಾದ ಅವಶ್ಯಕತೆಯಿದ್ದು, ಪ್ರಸ್ತುತ 1,65,541 ಮೆಟ್ರಿಕ್ ಟನ್ ಕೊರತೆ ಉಂಟಾಗಿದೆ ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ವಿವರಿಸಿದ್ದಾರೆ.

ಪತ್ರದಲ್ಲಿ, ಈ ಬಾರಿ ರಾಜ್ಯದಲ್ಲಿ ಮುಂಗಾರು ಬೇಗನೆ ಆರಂಭವಾಗಿದ್ದು, ಬಿತ್ತನೆ ಪ್ರದೇಶವೂ ಹೆಚ್ಚಾಗಿದೆ ಎಂದು ಉಲ್ಲೇಖಿಸಲಾಗಿದೆ. ತುಂಗಭದ್ರಾ, ಕಾವೇರಿ ಮತ್ತು ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳಲ್ಲಿ ನೀರನ್ನು ಬೇಗನೆ ಹರಿಸಿದ್ದರಿಂದ ಬಿತ್ತನೆ ಚಟುವಟಿಕೆಗಳು ಚುರುಕುಗೊಂಡಿವೆ. ಅಲ್ಲದೆ, ಹೆಚ್ಚು ರಸಗೊಬ್ಬರ ಬಳಸುವ ಮೆಕ್ಕೆಜೋಳದ ಬಿತ್ತನೆ ಪ್ರದೇಶವು ಸುಮಾರು 2 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚಾಗಿದ್ದು, ರಸಗೊಬ್ಬರಕ್ಕೆ ಬೇಡಿಕೆ ತೀವ್ರಗೊಂಡಿದೆ ಎಂದು ಸಿಎಂ ಕಾರಣಗಳನ್ನು ನೀಡಿದ್ದಾರೆ.

ರೈತರಲ್ಲಿ ಅಸಮಾಧಾನ, ತಕ್ಷಣ ಪೂರೈಕೆಗೆ ಮನವಿ

ಈ ಎಲ್ಲಾ ಕಾರಣಗಳಿಂದ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು, ಕೊರತೆಯಿಂದಾಗಿ ರೈತರಲ್ಲಿ ಅಸಮಾಧಾನ ಮೂಡುತ್ತಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಆದ್ದರಿಂದ, ರೈತರ ಹಿತದೃಷ್ಟಿಯಿಂದ, ರಾಜ್ಯದ ಹಂಚಿಕೆಯ ಪ್ರಕಾರ ಬಾಕಿ ಇರುವ 1,65,541 ಮೆಟ್ರಿಕ್ ಟನ್ ಯೂರಿಯಾವನ್ನು ಶೀಘ್ರವಾಗಿ ಪೂರೈಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವರನ್ನು ಒತ್ತಾಯಿಸಿದ್ದಾರೆ.

Tags:    

Similar News