ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಪರದಾಟ: ಕನ್ನಡ ಮಾತಾಡಲು ಮಲಯಾಳಿ ಶಿಕ್ಷಕಿ ಹಿಂದೇಟು

ಕೇರಳ ಕಾಸರಗೋಡು ಜಿಲ್ಲೆಯ ಅಡೂರಿನಲ್ಲಿರುವ ಅಂಗನವಾಡಿ ಕೇಂದ್ರವೊಂದರಲ್ಲಿರುವ ಕನ್ನಡ ಮಾತನಾಡುವುದಿಲ್ಲ ಎಂದು ಹಠ ಹಿಡಿದು ಕುಳಿತಿರುವ ಮಲಯಾಳಿ ಶಿಕ್ಷಕಿಯನ್ನು ವರ್ಗಾಯಿಸಲು ಹೈಕೋರ್ಟ್ ಮೊರೆ ಹೋಗಲಾಗಿದೆ.;

Update: 2024-11-10 04:30 GMT

ರಿಷಭ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಚಿತ್ರ ನೋಡಿರಬಹುದು. ಕೇರಳಕ್ಕೆ ಸೇರಿದರೂ ಭಾವನಾತ್ಮಕವಾಗಿ ಕನ್ನಡವೇ ಆಗಿರುವ ಕಾಸರಗೋಡು ಜಿಲ್ಲೆಯ ಶಾಲೆಯೊಂದರ ಕಥೆ ಅದು.

ಇಲ್ಲೊಂದು ಘಟನೆಯಿದೆ. ಇದು ಕಥೆಯಲ್ಲ, ಸಿನಿಮಾವೂ ಅಲ್ಲ, ನಿಜಜೀವನ. ಪದೇ ಪದೇ ಮಲತಾಯಿ ಧೋರಣೆ ಮೂಲಕ ಕನ್ನಡ ಭಾಷಿಕರಿಗೆ ಮಲಯಾಳವನ್ನು ಹೇರುತ್ತಿರುವ ಕೇರಳ ಮತ್ತದೇ ಮೊಂಡು ಹಠವನ್ನು ಮುಂದುವರಿಸಿದೆ. ಹೈಕೋರ್ಟ್ ಮೂಲಕ ಕನ್ನಡ ಹೈಸ್ಕೂಲಿನಲ್ಲಿದ್ದ ಮಲಯಾಳಿ ಶಿಕ್ಷಕಿಯನ್ನು ವರ್ಗಾಯಿಸಿದ್ದ ಅದೇ ಕರ್ನಾಟಕ ಗಡಿ ಭಾಗ ಕಾಸರಗೋಡು ಜಿಲ್ಲೆಯ ಅಡೂರಿನಲ್ಲಿರುವ ಅಂಗನವಾಡಿ ಕೇಂದ್ರವೊಂದರಲ್ಲಿರುವ ಕನ್ನಡ ಮಾತನಾಡುವುದಿಲ್ಲ ಎಂದು ಹಠ ಹಿಡಿದು ಕುಳಿತಿರುವ ಮಲಯಾಳಿ ಶಿಕ್ಷಕಿಯನ್ನು ವರ್ಗಾಯಿಸಲು ಹೈಕೋರ್ಟ್ ಮೊರೆ ಹೋಗಲಾಗಿದೆ.

ಮಾತೃಭಾಷೆಯ ಹಕ್ಕು ಕಸಿದುಕೊಳ್ಳುವ ಸಂಚಿಗೆ ಎದಿರೇಟು ನೀಡಲು ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಪ್ರಕರಣವೀಗ ಕಾವು ಪಡೆದುಕೊಳ್ಳುತ್ತಿದೆ.

ರಿಷಭ್‌ ಸಿನಿಮಾ ʼಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡುʼದಲ್ಲಿ ಕನ್ನಡ ಭಾಷಾ ಶಾಲೆಯೊಂದಕ್ಕೆ ಮಲಯಾಳಿ ಶಿಕ್ಷಕರ ನೇಮಕ ಮಾಡುವ ಮೂಲಕ ಭಾಷಾ ಹೇರಿಕೆ ಮಾಡುವ ವಸ್ತು ಹೊಂದಿದ್ದ ಆ ಚಿತ್ರದಲ್ಲಿ ಕೋರ್ಟ್ ಸನ್ನಿವೇಶಗಳಿವೆ. ಅದರಲ್ಲಿ ಮೇರುನಟ ಅನಂತನಾಗ್ ಪಾತ್ರದ ಮೂಲಕ ಕನ್ನಡ ಭಾಷೆ ಹೇಗೆ ಭಾವನಾತ್ಮಕವಾಗಿ ಕಾಸರಗೋಡಿನ ಜನರೊಂದಿಗೆ ಬೆಸೆದುಕೊಂಡಿದೆ ಎಂಬುದನ್ನು ನಿರ್ದೇಶಕ ಹೇಳುತ್ತಾರೆ. ದಶಕಗಳಿಂದ ಕಾಸರಗೋಡಿನಲ್ಲಿ ನಡೆದಿರುವ ಕನ್ನಡಪರ ಹೋರಾಟಗಳು ಕಣ್ಮುಂದೆ ಹಾಯುವಂತೆ ಚಿತ್ರ ಮಾಡುತ್ತದೆ. ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಮೂಲಕ ರಾಜ್ಯದ ಇತರ ಭಾಗಗಳ ಜನರಿಗೂ ಗಡಿನಾಡ ಕಾಸರಗೋಡಿನಲ್ಲಿ ಕನ್ನಡದ ಸ್ಥಿತಿ ಹೇಗಿದೆ ಎಂಬ ಝಲಕ್ ದೊರಕಿತ್ತು. ಥೇಟ್ ಅಂಥದ್ದೇ ಸನ್ನಿವೇಶವೊಂದು ಅದೇ ಕಾಸರಗೋಡು ಜಿಲ್ಲೆಯಲ್ಲಿ ಮರುಕಳಿಸುತ್ತಿದೆ.

ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಗಡಿಭಾಗದಲ್ಲಿರುವ ಕೇರಳ ಭೂಭಾಗದಲ್ಲಿ ಸೇರಿಕೊಂಡಿರುವ  ದೇಲಂಪಾಡಿ ಪಂಚಾಯತ್ ವ್ಯಾಪ್ತಿಯ ಒಂದು ಅಂಗನವಾಡಿಗೆ ಮಲಯಾಳಂ ಬಲ್ಲ ಶಿಕ್ಷಕಿಯನ್ನು ಮಾತ್ರ ನೇಮಿಸಿ ಕನ್ನಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಳ್ಳಿ ಇಡಲಾಗಿದೆ ಎಂಬ ಆರೋಪವಿದೆ. ವಿದ್ಯಾಭ್ಯಾಸದಲ್ಲಿ ಮತ್ತು ಸಾಕ್ಷರತೆಯಲ್ಲಿ ನಂಬರ್ ಒಂದು ಎಂದು ಹೇಳಿಕೊಳ್ಳುವ ಕೇರಳದಲ್ಲಿ ಇಷ್ಟೊಂದು ಭಾಷಾ ದುರಭಿಮಾನವೇ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಕೋರಿಕಂಡ ಅಂಗನವಾಡಿಗೆ ಮಲಯಾಳಿ ಟೀಚರ್ ಬಂದದ್ದು ಹೇಗೆ?

ಕಾಸರಗೋಡು ಜಿಲ್ಲೆಯ ದೇಲಂಪಾಡಿ ಪಂಚಾಯಿತಿಯ ಅಡೂರು ಬಳಿಯ ಕೋರಿಕಂಡ ಎಂಬಲ್ಲಿ ಈ ಅಂಗನವಾಡಿ ಇದೆ. ದೇಲಂಪಾಡಿ, ಅಡೂರು ಮುಂತಾದ ಪ್ರದೇಶಗಳಿಗೆ ಭಾವನಾತ್ಮಕವಾಗಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಂಟು ಜಾಸ್ತಿ. ಸುಮಾರು 10-12 ಕಿ.ಮೀ. ದೂರ ಕ್ರಮಿಸಿದರೆ, ಸುಳ್ಯ ಪೇಟೆ ಸಿಗುತ್ತದೆ. ಇಲ್ಲಿ ಅನಾರೋಗ್ಯವಾಗಿ ದೊಡ್ಡಾಸ್ಪತ್ರೆಗೆ ಹೋಗಬೇಕಾದರೆ, ಸುಳ್ಯಕ್ಕೆ ಬರಬೇಕು. ಹೀಗಾಗಿ ಈ ಪ್ರದೇಶದ ಜನರು ಕೇರಳ ರಾಜ್ಯದಲ್ಲಿ ಇದ್ದರೂ ನಡೆ, ನುಡಿ ಎಲ್ಲವೂ ಕನ್ನಡ. ಹಾಗೆಯೇ ಮಾತೃಭಾಷೆ ತುಳು ಹಾಗು ಮರಾಠಿಯವರೂ ಇದ್ದಾರೆ. ಕೋರಿಕಂಡ ಅಂಗನವಾಡಿಯಲ್ಲಿ ಸುಮಾರು 14 ಮಂದಿ ಪುಟಾಣಿಗಳ ಮನೆಯವರೆಲ್ಲರೂ ಕನ್ನಡಿಗರು.

ಇಲ್ಲಿ ಕೆಲಸ ಮಾಡುತ್ತಿದ್ದ ಅಂಗನವಾಡಿ ಟೀಚರ್ ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಲ್ಲಿದ್ದ ಕಾರಣ ಅವರ ಬದಲಿಗೆ ಸ್ಥಳೀಯ ಅಂಗನವಾಡಿ ಸಮಿತಿ ಬದಲಿ ಶಿಕ್ಷಕಿಯನ್ನು ನೇಮಿಸುತ್ತಿತ್ತು. ದ್ವಿಭಾಷೆ ಬಲ್ಲ ಟೀಚರ್ ಗಳಾದ ಕಾರಣ, ಕನ್ನಡವೂ ಬರ್ತಿತ್ತು, ಮಲಯಾಳವೂ ಗೊತ್ತಿತ್ತು. ಹೀಗಾಗಿ ಊರವರಿಗೂ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಸನ್ನಿವೇಶ ಕೆಲ ತಿಂಗಳ ಹಿಂದೆ ದಿಢೀರ್ ಬದಲಾಯಿತು.

ಕೇರಳದ ಶಿಶು ವಿಕಸನ ಕಚೇರಿಯಿಂದ (ಸಿಡಿಪಿಒ) ಮಲಯಾಳ ಬಲ್ಲ ಶಿಕ್ಷಕಿಯ ನೇಮಕಾತಿ ಮಾಡಲಾಯಿತು. ಈ ಕುರಿತು ಸ್ಥಳೀಯ ಅಂಗನವಾಡಿ ಮೇಲುಸ್ತುವಾರಿ ಸಮಿತಿ ತೀವ್ರ ಆಕ್ಷೇಪ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. 2023ರಲ್ಲಿ ಶಿಕ್ಷಕಿಯರ ಸಂದರ್ಶನದಲ್ಲಿ ಆಯ್ಕೆಯಾದವರನ್ನು ಮಾತ್ರ ನೇಮಕಗೊಳಿಸಲಾಗುವುದು ಎಂಬ ಮಾಹಿತಿ ಬಂತು. ಹೋಗಲಿ ಸುಧಾರಿಸಿಕೊಂಡು ಹೋಗೋಣ ಎಂದು ಸ್ಥಳೀಯ ಪೋಷಕರು ಶಿಕ್ಷಕಿಯ ಬಳಿ ನೀವು ಕನ್ನಡ, ತುಳು ಭಾಷೆಯಲ್ಲಿ ಮಕ್ಕಳೊಂದಿಗೆ ವ್ಯವಹರಿಸಿ, ಅವರಿಗೆ ಮಲಯಾಳ ಬರುವುದಿಲ್ಲ ಎಂದು ಮನವಿ ಮಾಡಿದರು. ಅದಕ್ಕೆ ಆ ಶಿಕ್ಷಕಿ ಕ್ಯಾರೆನ್ನಲಿಲ್ಲ ಎಂಬುದು ಪೋಷಕರ ದೂರು. ನಾನು ಮಲಯಾಳದಲ್ಲೇ ಮಾತನಾಡುತ್ತೇನೆ, ಬೇರೆ ಭಾಷೆ ಬರುವುದಿಲ್ಲ. ಮಕ್ಕಳು ಅದನ್ನು ಕಲಿಯುತ್ತಾರೆ ಎಂಬ ಶಿಕ್ಷಕಿಯ ಧೋರಣೆ ಪೋಷಕರನ್ನು ಕೆರಳಿಸಿದೆ.

ಹೈಕೋರ್ಟ್‌ಗೆ ಮೊರೆ

ಎರಡು ಭಾಷೆಗಳನ್ನು ಒಳಗೊಂಡ ಶಿಕ್ಷಕಿಯನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ, ಕೊನೆಗೆ ಜಿಲ್ಲಾ ಕಲೆಕ್ಟರ್ ಗೆ ಮನವಿ ಮಾಡಲಾಯಿತು. ಬಳಿಕ ಜಿಲ್ಲಾ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಯಿತು ಮೂರು ಬಾರಿ ವಿಚಾರಣೆ ನಡೆಯಿತು. ಶಿಕ್ಷಕಿಯನ್ನು ಬದಲಾಯಿಸಿ, ತಾತ್ಕಾಲಿಕವಾಗಿ ಎರಡು ಭಾಷೆ ಬಲ್ಲ ಶಿಕ್ಷಕಿಯನ್ನು ನೇಮಿಸಬೇಕಾದರೆ, ಕಾಯಂ ಶಿಕ್ಷಕಿಯಲ್ಲಿ ಮಾತನಾಡಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ನ್ಯಾಯಾಧೀಶರು ತಿಳಿಸಿದರು. ಎರಡು ಬಾರಿ ವಿಚಾರಣೆ ನಡೆದಾಗಲೂ ಅದರ ಬಗ್ಗೆ ಪಂಚಾಯಿತಿಯೂ ನಿರಾಸಕ್ತಿ ವಹಿಸಿದ್ದರೆ, ಇಲಾಖೆಯೂ ಮೌನ ವಹಿಸಿತು. ವಿಧಿ ಇಲ್ಲದೆ ಹೈಕೋರ್ಟ್ ಮೊರೆ ಹೋಗಬೇಕಾಯಿತು.

ಸ್ಥಳೀಯರು ಏನಂತಾರೆ?

ಈ ಕುರಿತು ಮಾತನಾಡಿದ ಅಂಗನವಾಡಿ ಪೋಷಕ ಸಮಿತಿಯ ಸದಸ್ಯ ಗಂಗಾಧರ ಕೋರಿಕಂಡ, ಮಕ್ಕಳ ಪೂರ್ವಪ್ರಾಥಮಿಕ ಹಂತದಲ್ಲೇ ಕನ್ನಡ ಕಲಿಕೆಯನ್ನು ವಂಚಿಸಿದಂತಾಗುತ್ತದೆ. ಮಲೆಯಾಳಿ ಶಿಕ್ಷಕಿ ನೇಮಕಾತಿ ಮೂಲಕ ಈ ವಂಚನೆ ನಡೆದಿದೆ. ಈ ವಾರ್ಡಿನಲ್ಲಿ ಅರ್ಹರಾದ ಕನ್ನಡಿಗರು ಇದ್ದರೂ ಶಿಕ್ಷಕಿಯ ನೇಮಕಾತಿಯಲ್ಲಿ ಮಲತಾಯಿ ಧೋರಣೆ ಮಾಡಲಾಗಿದೆ. ಶಿಕ್ಷಕಿಯನ್ನು ಕೂಡಲೇ ವರ್ಗಾಯಿಸಬೇಕು, ಕನ್ನಡಿಗರಿಗೆ ಅವಕಾಶ ನೀಡಬೇಕು ಎಂದರು.

 ಅಂಗನವಾಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಸರಳಾಯ ಮಾತನಾಡಿ, ನಾವು ಹೈಕೋರ್ಟ್ ಮೊರೆ ಹೋಗಿದ್ದೇವೆ. ಕನ್ನಡಾಭಿಮಾನಿಗಳ ಸಹಾಯ ನಮಗೆ ಬೇಕು ಎಂದರು. ಕನ್ನಡ ತುಳು ಮಾತನಾಡುವವರಿಗೆ ಅನ್ಯಾಯವಾಗಿದೆ, ಮಲೆಯಾಳ ಭಾಷೆ ಮಾತ್ರ ಗೊತ್ತಿರುವ ಶಿಕ್ಷಕಿಯ ನೇಮಕಾತಿ ಸರಿಯಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುವ ಸಲುವಾಗಿ ನಾವು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ಇದರಲ್ಲಿ ನ್ಯಾಯ ಸಿಗುವ ಭರವಸೆ ನಮಗಿದೆ ಎಂದರು.

ಶಿಕ್ಷಣದಲ್ಲಿ ಮಲಯಾಳ ಹೇರಿಕೆ ಇದೇ ಮೊದಲಲ್ಲ

ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳ ಹೇರಿಕೆ ಇದೇ ಮೊದಲಲ್ಲ. 2022ರಲ್ಲಿ ಅಡೂರು ಶಾಲೆಗೆ ಮಲಯಾಳ ಅಧ್ಯಾಪಕರು ನೇಮಕ ಮಾಡಿದ ಕೇರಳ ಸರಕಾರ ಮತ್ತು ಲೋಕಸೇವಾ ಆಯೋಗದ ವಿರುದ್ಧವಾಗಿ ಹೈಕೋರ್ಟ ಮೊರೆಹೊಗಿದ್ದರು. ಇದರ ಪರಿಣಾಮ ಮಲಯಾಳಂ ಶಿಕ್ಷಕಿಯನ್ನು ವರ್ಗಾವಣೆ ಮಾಡಲಾಯಿತು. ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದ ಕನ್ನಡ ವಿದ್ಯಾರ್ಥಿಗಳ ಹೋರಾಟವಿದು. ಮಲಯಾಳಿ ಶಿಕ್ಷಕಿಗೆ ಕನ್ನಡದಲ್ಲಿ ವ್ಯವಹರಿಸಲು ತಿಳಿಯದು ಎಂಬುದನ್ನು ಅರ್ಥೈಸಿಕೊಂಡ ನ್ಯಾಯಾಲಯ ತಕ್ಷಣವೇ ಆ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾಯಿಸಿ ಅವರ ಸ್ಥಾನಕ್ಕೆ ಕನ್ನಡ ತಿಳಿದಿರುವ ಶಿಕ್ಷಕರನ್ನು ನೇಮಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿತ್ತು. 2023ರಲ್ಲಿ ಹೈಕೋರ್ಟ್ ತೀರ್ಪು ನೀಡಿತ್ತು.

ಉದುಮ ಮತ್ತು ಹೊಸಕೋಟೆ ಪ್ರೌಢಶಾಲೆಗಳ ಕನ್ನಡ ವಿಭಾಗಗಳಿಗೆ ಮಲಯಾಳ ಮಾತ್ರ ತಿಳಿದಿರುವ ಶಿಕ್ಷಕರನ್ನು ಕೇರಳ ಲೋಕಸೇವಾ ಆಯೋಗ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ನೇಮಿಸಿತ್ತು. ಕನ್ನಡ ಮಾತನಾಡಲು ಬಾರದ ತಿರುವನಂತಪುರ ಮೂಲದ ಈ ಶಿಕ್ಷಕಿ ಉದುಮ ಶಾಲೆಯಲ್ಲಿ ಮಲಯಾಳದಲ್ಲಿ ಪಾಠ ಮಾಡಲು ಪ್ರಾರಂಭಿಸಿದಾಗ ಅಲ್ಲಿನ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿ ಕೋರ್ಟ್ ಮೆಟ್ಟಿಲೇರಿದ್ದರು. ಶಿಕ್ಷಕಿಗೆ ಕನ್ನಡ ಕಲಿತು ಬರುವಂತೆ ಮೈಸೂರಿನ ಭಾಷಾ ಸಂಶೋಧನಾ ಸಂಸ್ಥೆಯಲ್ಲಿ 2 ತಿಂಗಳ ಕನ್ನಡ ಕಲಿಕೆಗೆ ಕಳುಹಿಸಿತ್ತು. ಅಲ್ಲಿ ತರಬೇತಿ ಪಡೆದ ಶಿಕ್ಷಕಿಯನ್ನು ಈ ಶೈಕ್ಷಣಿಕ ವರ್ಷದಲ್ಲಿ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ನೇಮಕ ಮಾಡಲಾಗಿತ್ತು. ಅಲ್ಲಿ ಶಿಕ್ಷಕಿ ಕನ್ನಡ ಮಾತನಾಡಲು ಚಡಪಡಿಸಿದಾಗ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ಬಳಿಕ ಹೆತ್ತವರು ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಹೈಕೋರ್ಟ್ ಆದೇಶದಂತೆ ಶಿಕ್ಷಕಿ ವರ್ಗಾವಣೆಯಾಗಿತ್ತು.

ಸಂಪೂರ್ಣ ಮಲಯಾಳೀಕರಣದ ಹುನ್ನಾರವೇ?

ಸರಕಾರಿ ಮಲಯಾಳಿ ಅಧಿಕಾರಿಗಳು ನೇಮಕ ಮಾಡಿದ ಯಡವಟ್ಟು ಇದಕ್ಕೆ ಕಾರಣ ಎಂದು ನಂಬಲಾಗುತ್ತಿದೆಯಾದರೂ ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಕನ್ನಡಪರ ಹೋರಾಟಗಾರರು ಆಪಾದಿಸುತ್ತಾರೆ. ಮಾತೃಭಾಷೆಯಲ್ಲಿ ಬಾಲಪಾಠಗಳನ್ನು ಕಲಿಯುವ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಅಂಗನವಾಡಿ ಹಂತದಿಂದಲೇ ಮಕ್ಕಳು ಬಲಾತ್ಕಾರವಾಗಿ ಮಲಯಾಳ ಕಲಿಯಲು ಆರಂಭಿಸಿದರೆ, ಮುಂದೆ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಲು ಮಕ್ಕಳೇ ಸಿಗಲಿಕ್ಕಿಲ್ಲ. ಹೀಗಾಗಿ ಕೇರಳ ಸರಕಾರಿ ಅಧಿಕಾರಿಗಳು ಮಲಯಾಳ ಭಾಷಾ ಹೇರಿಕೆಯನ್ನು ಗಡಿನಾಡಿನಲ್ಲಿ ಮಾಡುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಹೋಗಲಿ, ಮಲಯಾಳ ಗೊತ್ತಿದ್ದವರನ್ನು ನೇಮಿಸಿದರೆ, ಪರವಾಗಿಲ್ಲ. ಆದರೆ ಕನ್ನಡ, ತುಳು ಭಾಷೆ ಬಳಸುವವರಾಗಿದ್ದರೆ ಚೆನ್ನಾಗಿತ್ತು. ಇದುವರೆಗೆ ಅಂಗನವಾಡಿಯಲ್ಲಿ ದ್ವಿಭಾಷೆ ಗೊತ್ತಿದ್ದವರ ನೇಮಕವಾಗುತ್ತಿತ್ತು. ಈಗ ಹೀಗ್ಯಾಕೆ ಎಂಬುದು ಪ್ರಶ್ನೆ.

Tags:    

Similar News